×
Ad

ಅಸ್ವಸ್ಥ ಐಪಿಎಸ್ ಅಧಿಕಾರಿಗೆ ವಿಮಾನದಲ್ಲೇ ಚಿಕಿತ್ಸೆ ನೀಡಿದ ತೆಲಂಗಾಣ ರಾಜ್ಯಪಾಲೆ!

Update: 2022-07-24 09:07 IST

ಹೈದರಾಬಾದ್: ತೆಲಂಗಾಣ ರಾಜ್ಯಪಾಲರಾದ ತಮಿಳ್‍ಸಾಯಿ ಸೌಂದರರಾಜನ್ ಅವರು ವಿಮಾನದಲ್ಲಿ ಅಸ್ವಸ್ಥರಾದ ಸಹ ಪ್ರಯಾಣಿಕ, ಡಿಜಿಪಿ ರ‍್ಯಾಂಕ್ ಐಪಿಎಸ್ ಅಧಿಕಾರಿ ಕೃಪಾನಂದ್ ತ್ರಿಪಾಠಿ ಉಜೇಲಾ ಅವರಿಗೆ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.

ಶನಿವಾರ ದೆಹಲಿಯಿಂದ ಹೈದರಾಬಾದ್‍ಗೆ ಬರುತ್ತಿದ್ದ ವಿಮಾನದಲ್ಲಿ ವಾರಣಾಸಿಯಿಂದ ದೆಹಲಿ ಮಾರ್ಗವಾಗಿ ರಾಜ್ಯಪಾಲರು ಹೈದರಾಬಾದ್‍ಗೆ ವಾಪಸ್ಸಾಗುತ್ತಿದ್ದರು. ಬೆಳಗ್ಗೆ 6.29ಕ್ಕೆ ಇಂಡಿಯೊ ಗಗನಸಖಿ, ವಿಮಾನದಲ್ಲಿ ಯಾರಾದರೂ ವೈದ್ಯರಿದ್ದೀರಾ ಎಂದು ಕೇಳಿದರು. "ಪ್ರಯಾಣಿಕರೊಬ್ಬರಿಗೆ ತೀರಾ ಬೆವರುತ್ತಿದ್ದು, ಮಂಪರಿನಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡಬೇಕಾಗಿದೆ" ಎಂದು ಹೇಳಿದ ತಕ್ಷಣ ಸ್ಪಂದಿಸಿದ ರಾಜ್ಯಪಾಲರು, ಅಸ್ವಸ್ಥ ಅಧಿಕಾರಿಯನ್ನು ಮಲಗಿಸಿ, ತಪಾಸಣೆ ನಡೆಸಿ ಪ್ರಥಮ ಚಿಕಿತ್ಸೆ ಮತ್ತು ಪೂರಕ ಔಷಧಿಗಳನ್ನು ನೀಡಿದರು. ಆಗ ಅಧಿಕಾರಿ ಮುಖದಲ್ಲಿ ನಗು ಕಂಡುಬಂತು. ಬಳಿಕ ವಿಮಾನ ನಿಲ್ದಾಣದ ಮೆಡಿಕಲ್ ಬೂತ್‍ಗೆ ವ್ಹೀಲ್ ಚೇರ್‌ ನಲ್ಲಿ ಅವರನ್ನು ಕರೆದೊಯ್ಯಲಾಯಿತು. ಸಕಾಲಕ್ಕೆ ಮಾಹಿತಿ ನೀಡಿದ್ದಕ್ಕಾಗಿ ಇಂಡಿಗೊ ಗಗನಸಖಿ ಮತ್ತು ಸಿಬ್ಬಂದಿಯ ಕಾರ್ಯ ಶ್ಲಾಘನಾರ್ಹ" ಎಂದು ತಮಿಳ್‍ಸಾಯಿ ಟ್ವೀಟ್ ಮಾಡಿದ್ದಾರೆ.

1994ರ ಬ್ಯಾಚ್ ಆಂಧ್ರ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಉಜೇಲಾ, ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಪಾಲೆ ನನ್ನ ಜೀವ ಉಳಿಸಿದರು. ನನ್ನ ತಾಯಿಯಂತೆ ನೆರವಾದರು. ಇಲ್ಲದಿದ್ದರೆ ನಾನು ಆಸ್ಪತ್ರೆಗೆ ಬರುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ತಮಿಳ್‍ಸಾಯಿಯವರು ರಾಜ್ಯಪಾಲರಾಗುವ ಮುನ್ನ ಪ್ರಸೂತಿ ರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News