ಉತ್ತರಪ್ರದೇಶ: ಟ್ರಕ್ ಡಿಕ್ಕಿಯಾಗಿ 6 ಕನ್ವರ್ ಭಕ್ತರು ಮೃತ್ಯು, ಹತ್ರಾಸ್ ಎಸ್ಪಿ ವರ್ಗಾವಣೆ
Update: 2022-07-24 12:01 IST
ಲಕ್ನೊ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಟ್ರಕ್ ಢಿಕ್ಕಿಯಾಗಿ ಆರು ಕನ್ವರ್ ಭಕ್ತರು ಸಾವನ್ನಪ್ಪಿದ ಒಂದು ದಿನದ ನಂತರ ನಿರ್ಲಕ್ಷ್ಯದ ಕಾರಣಕ್ಕೆ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ವರ್ಗಾವಣೆ ಮಾಡಲಾಗಿದೆ.
ಹತ್ರಾಸ್ ಜಿಲ್ಲೆಗೆ ವಿಕಾಸ್ ವೈದ್ಯ ಬದಲಿಗೆ ದೇವೇಶ್ ಪಾಂಡೆ ಹೊಸ ಎಸ್ಪಿ ಆಗಿ ನೇಮಕಗೊಂಡಿದ್ದಾರೆ. ವಿಕಾಸ್ ವೈದ್ಯ ಅವರನ್ನು ಪಿಎಸಿ ಮಿರಾಜ್ ಪುರಕ್ಕೆ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ.
ಕನ್ವರ್ ಭಕ್ತರು ಹೋಗುವ ದಾರಿಯಲ್ಲಿ ಯಾವುದೇ ಘನ ವಾಹನಗಳಿಗೆ ಚಲಿಸಲು ಅನುಮತಿ ನೀಡದಂತೆ ಸರಕಾರ ಸೂಚನೆ ನೀಡಿದ್ದರಿಂದ ಉತ್ತರ ಪ್ರದೇಶ ಸರಕಾರ ವಿಕಾಸ್ ವೈದ್ಯ ವಿರುದ್ಧ ಕ್ರಮ ಕೈಗೊಂಡಿದೆ.
ಕನ್ವರ್ ಯಾತ್ರಿಗಳು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಸೇರಿದವರು.
ಶನಿವಾರ ಬೆಳಗಿನ ಜಾವ 2.15 ರ ಸುಮಾರಿಗೆ ಹತ್ರಾಸ್ ಆಗ್ರಾ ರಸ್ತೆಯ ಬಧರ್ ಗ್ರಾಮದ ಬಳಿ ಎನ್ ಎಚ್ -93 ನಲ್ಲಿರುವ ಸದಾಬಾದ್ ನಲ್ಲಿ ಈ ಘಟನೆ ನಡೆದಿದೆ.