×
Ad

ದಿಲ್ಲಿ ಸರಕಾರದ ಕಾರ್ಯಕ್ರಮಕ್ಕೆ ಪೊಲೀಸರು ಬಲವಂತವಾಗಿ ಪ್ರಧಾನಿ ಮೋದಿ ಫೋಟೊ ಹಾಕಿದ್ದಾರೆ: ಸಚಿವ ಗೋಪಾಲ್ ರೈ ಆರೋಪ

Update: 2022-07-24 13:44 IST

ಹೊಸದಿಲ್ಲಿ,ಜು.24: ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಆದೇಶದಂತೆ ದಿಲ್ಲಿ ಸರಕಾರವು ಆಯೋಜಿಸಿದ್ದ ಕಾರ್ಯಕ್ರಮವನ್ನು ‘ಹೈಜಾಕ್ ’ಮಾಡಿರುವ ದಿಲ್ಲಿ ಪೊಲೀಸರು ವೇದಿಕೆಯಲ್ಲಿ ಪ್ರಧಾನಿಯವರ ಆಳೆತ್ತರದ ಚಿತ್ರಗಳನ್ನು ಹಾಕಿದ್ದಾರೆ ಮತ್ತು ಅದನ್ನು ತೆಗೆಯುವವರನ್ನು ಬಂಧಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಆಪ್ ರವಿವಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಕೇಜ್ರಿವಾಲ್ರ ಪೋಸ್ಟರ್ಗಳನ್ನು ಹರಿದು ಹಾಕಿರುವುದು,ಪೊಲೀಸರು ನವೀಕೃತ ಅಲಂಕಾರಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿರುವುದು ಮತ್ತು ಸಮವಸ್ತ್ರದಲ್ಲಿರುವ ಭಾರೀ ಸಂಖ್ಯೆಯ ಪೊಲೀಸರು ಕಾರ್ಯಕ್ರಮದ ಸ್ಥಳವನ್ನು ಕಾವಲು ಕಾಯುತ್ತಿರುವುದನ್ನು ಆಪ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು ತೋರಿಸುತ್ತಿವೆ.

ಅಸೋಲಾ ವನ್ಯಜೀವಿ ಧಾಮದಲ್ಲಿ ನೆಡುತೋಪು ಅಭಿಯಾನಕ್ಕಾಗಿ ಮೋದಿಯವರ ನಗುಮುಖವನ್ನೊಳಗೊಂಡ ಬ್ಯಾನರ್ಗಳನ್ನು ಹಾಕಲು ಕೇಂದ್ರವು ಶನಿವಾರ ರಾತ್ರಿ ಪೊಲೀಸರನ್ನು ಕಳುಹಿಸಿತ್ತು. ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ದಿಲ್ಲಿ ಪೊಲೀಸರು ಮೋದಿ ಚಿತ್ರವಿರುವ ಬ್ಯಾನರ್ಗಳನ್ನು ಬಲವಂತದಿಂದ ಅಳವಡಿಸಿದ್ದಾರೆ ಮತ್ತು ಆಪ್ ಸರಕಾರಕ್ಕೆ ಸೇರಿದ ಬ್ಯಾನರ್ಗಳನ್ನು ಹರಿದು ಹಾಕಿದ್ದಾರೆ ಎಂದು ದಿಲ್ಲಿಯ ಪರಿಸರ ಸಚಿವ ಗೋಪಾಲ ರಾಯ್ ಅವರು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮೋದಿಯವರ ಚಿತ್ರಗಳನ್ನು ಒಳಗೊಂಡಿರುವ ಬ್ಯಾನರ್ಗಳನ್ನು ಮುಟ್ಟದಂತೆ ದಿಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದರು.

ದಿಲ್ಲಿಯ ಲೆ.ಗ.ವಿ.ಕೆ.ಸಕ್ಸೇನಾ ಮತ್ತು ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು ಮತ್ತು ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು ಎಂದರು.ವನಮಹೋತ್ಸವದ ಅಂಗವಾಗಿ ನೆಡುತೋಪು ಅಭಿಯಾನವನ್ನು ಲೆ.ಗ. ಮತ್ತು ಮುಖ್ಯಮಂತ್ರಿಗಳು ಇಂದು ಜಂಟಿಯಾಗಿ ಉದ್ಘಾಟಿಸಬೇಕಿತ್ತು. ಈ ಸಂಬಂಧ ಜು.4ರಂದು ಪರಸ್ಪರ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಒಂದು ಲಕ್ಷ ಸಸಿಗಳನ್ನು ನೆಡಬೇಕಿತ್ತು. ಆದರೆ ದಿಲ್ಲಿ ಸರಕಾರದ ಕಾನೂನುಬಾಹಿರ ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಲೆ.ಗ.ಶಿಫಾರಸು ಮಾಡಿರುವುದು ದಿಲ್ಲಿಯ ಪರಿಸರ ಕಾಳಜಿಗಳಿಂದ ಮುಖ್ಯಮಂತ್ರಿಗಳ ಗಮನವನ್ನು ಕಿತ್ತುಕೊಂಡಿರುವುದು ಅಚ್ಚರಿದಾಯಕವಾಗಿದೆ ಎಂದು ಸಕ್ಸೇನಾರ ಕಚೇರಿಯು ತಿಳಿಸಿದೆ.

ಕೇಜ್ರಿವಾಲ್ ಸರಕಾರದ ಕಾರ್ಯಕ್ರಮವನ್ನು ಮೋದಿಯವರ ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದ ರಾಯ್,ಈ ಘಟನೆಯು ಮೋದಿಯವರಿಗೆ ಕೇಜ್ರಿವಾಲ್ ಬಗ್ಗೆ ಭಯವಿದೆ ಎನ್ನುವುದನ್ನು ತೋರಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News