ಗುರುತಿನ ದಾಖಲೆಗಳಲ್ಲಿ ತಂದೆಯ ಹೆಸರನ್ನು ನಮೂದಿಸದಿರುವುದು ನಾಗರಿಕರ ಮೂಲಭೂತ ಹಕ್ಕು: ಕೇರಳ ಹೈಕೋರ್ಟ್ ತೀರ್ಪು

Update: 2022-07-24 16:16 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ,ಜು.24: ಕೇರಳ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪೊಂದರಲ್ಲಿ ಗುರುತನ್ನು ಸಾಬೀತುಗೊಳಿಸಲು ಅಗತ್ಯವಾದ ದಾಖಲೆಗಳಲ್ಲಿ ತಮ್ಮ ತಂದೆಯ ಹೆಸರನ್ನು ನಮೂದಿಸದಿರುವುದು ನಾಗರಿಕರ ಮೂಲಭೂತ ಹಕ್ಕು ಆಗಿದೆ ಎಂದು ಸ್ಪಷ್ಟಪಡಿಸಿದೆ.
  
ವ್ಯಕ್ತಿಗಳು ತಮ್ಮ ಜನನ ಪ್ರಮಾಣಪತ್ರಗಳಲ್ಲಿ ಮತ್ತು ಇತರ ಗುರುತಿನ ದಾಖಲೆಗಳಲ್ಲಿ ತಮ್ಮ ತಾಯಿಯ ಹೆಸರನ್ನು ಮಾತ್ರ ನಮೂದಿಸಬಹುದು ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್ ಅವರು ಜು.21ರಂದು ನೀಡಿದ ತೀರ್ಪಿನಲ್ಲಿ ಎತ್ತಿ ಹಿಡಿದಿದ್ದಾರೆ. ವಿವಾಹ ಬಂಧನದಿಂದ ಹೊರಗೆ ಅಥವಾ ಅತ್ಯಾಚಾರದಿಂದಾಗಿ ಜನಿಸಿರಬಹುದಾದವರು ಸೇರಿದಂತೆ ಎಲ್ಲ ನಾಗರಿಕರ ರಕ್ಷಣೆ ಸರಕಾರದ ಕರ್ತವ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.
 
‘ಅವಿವಾಹಿತ ತಾಯಿಯ ಮಗು ಕೂಡ ನಮ್ಮ ದೇಶದ ಪ್ರಜೆಯಾಗಿದ್ದು,ಸಂವಿಧಾನವು ಖಾತರಿ ಪಡಿಸಿರುವ ಆತನ/ಆಕೆಯ ಮೂಲಭೂತ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ. ಅವರ ವೈಯಕ್ತಿಕ ಜೀವನದಲ್ಲಿ ಯಾರೂ ಅತಿಕ್ರಮಿಸುವಂತಿಲ್ಲ ಮತ್ತು ಹಾಗೆ ಸಂಭವಿಸಿದರೆ ಈ ದೇಶದ ಸಾಂವಿಧಾನಿಕ ನ್ಯಾಯಾಲಯವು ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ ’ ಎಂದು ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.
 
ಜನನ ನೋಂದಣಿ ಮತ್ತು ಇತರ ದಾಖಲೆಗಳಿಂದ ತನ್ನ ತಂದೆಯ ಹೆಸರನ್ನು ತೆಗೆದುಹಾಕಲು ಬಯಸಿರುವ ವ್ಯಕ್ತಿಯೋರ್ವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ತನ್ನ ತಾಯಿಯ ಹೆಸರನ್ನು ಏಕೈಕ ಪೋಷಕರಾಗಿ ತೋರಿಸುವ ಹೊಸ ಪ್ರಮಾಣಪತ್ರಗಳನ್ನು ವಿತರಿಸಬೇಕು ಎಂದೂ ಅವರು ಬಯಸಿದ್ದಾರೆ.
‘ನಿಗೂಢ ಸನ್ನಿವೇಶಗಳ ’ಅಡಿ ಅಪರಿಚಿತ ವ್ಯಕ್ತಿಯಿಂದ ತನ್ನ ತಾಯಿ ಗರ್ಭ ಧರಿಸಿದ ಬಳಿಕ ತಾನು ಜನಿಸಿದ್ದೆ. ವಿವಿಧ ದಾಖಲೆಗಳಲ್ಲಿ ತನ್ನ ತಂದೆಯ ಹೆಸರು ಭಿನ್ನವಾಗಿ ಕಾಣಿಸಿಕೊಂಡಿದ್ದು,ಅವೆಲ್ಲವುಗಳಲ್ಲಿ ತನ್ನ ತಾಯಿಯ ಹೆಸರು ಸರಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
  
ಇಂತಹ ಮಕ್ಕಳ ಖಾಸಗಿತನದಲ್ಲಿ ಅತಿಕ್ರಮಣ ಮಾಡಿದಾಗ ಅವರು ಎದುರಿಸುವ ಮಾನಸಿಕ ಯಾತನೆಯನ್ನು ಪ್ರತಿಯೊಬ್ಬ ನಾಗರಿಕರೂ ಊಹಿಸಿಕೊಳ್ಳಬೇಕು ಎಂದು ವಿಚಾರಣೆ ಸಂದರ್ಭದಲ್ಲಿ ಹೇಳಿದ ನ್ಯಾ.ಕುಂಞಕೃಷ್ಣನ್ ಅವರು,ಕೆಲವು ಸಂದರ್ಭಗಳಲ್ಲಿ ಇದು ಉದ್ದೇಶಪೂರ್ವಕ ಕ್ರಿಯೆಯಾಗಿರಬಹುದು ಮತ್ತು ಇತರ ಪ್ರಕರಣಗಳಲ್ಲಿ ತಪ್ಪಿನಿಂದ ಆಗಿರಬಹುದು. ಆದರೆ ಸರಕಾರವು ಇಂತಹ ನಾಗರಿಕರನ್ನು ಅವರ ಗುರುತು ಮತ್ತು ಖಾಸಗಿತನವನ್ನು ಬಹಿರಂಗಪಡಿಸದೆ ಇತರ ನಾಗರಿಕರಿಗೆ ಸಮಾನವಾಗಿ ರಕ್ಷಿಸಬೇಕು,ಇಲ್ಲದಿದ್ದರೆ ಅವರು ಊಹಿಸಲಾಗದ ಮಾನಸಿಕ ಯಾತನೆಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News