ಬಿಹಾರ: ಪಟಾಕಿ ತಯಾರಿಸುತ್ತಿದ್ದ ಮನೆಯಲ್ಲಿ ಸ್ಪೋಟ; ಆರು ಸಾವು, ಎಂಟು ಮಂದಿಗೆ ಗಾಯ

Update: 2022-07-24 17:21 GMT
Photo: Twitter/ndtv

ಪಾಟ್ನಾ,ಜು.24: ಬಿಹಾರದ ಸರನ್ ಜಿಲ್ಲೆಯ ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯ ಖುದಾಯಿ ಬಾಗ್ ಗ್ರಾಮದ ಪಟಾಕಿ ಉದ್ಯಮಿಯೋರ್ವನ ಮನೆಯಲ್ಲಿ ರವಿವಾರ ನಡೆದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಕ್ಕಿಕೊಂಡಿದ್ದ ಎಂಟು ಜನರನ್ನು ರಕ್ಷಿಸಲಾಗಿದ್ದು,ತೀವ್ರವಾಗಿ ಗಾಯಗೊಂಡಿರುವ ಅವರನ್ನು ಛಾಪ್ರಾದಲ್ಲಿನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ಯಮಿ ಶಬೀರ್ ಹುಸೇನ್ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಒಂದು ಭಾಗ ಹಾರಿಹೋಗಿದ್ದು,ಉಳಿದ ಭಾಗಕ್ಕೆ ಬೆಂಕಿ ಹತ್ತಿಕೊಂಡಿತ್ತು. ಮನೆಯು ನದಿ ದಡದಲ್ಲಿದ್ದು,ಹೆಚ್ಚಿನ ಭಾಗ ನದಿಯಲ್ಲಿ ಕುಸಿದಿದೆ.

ಸ್ಫೋಟಕ್ಕೆ ಕಾರಣವನ್ನು ಕಂಡುಕೊಳ್ಳಲು ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿವೆ ಎಂದು ಸರನ್ ಎಸ್ಪಿ ಸಂತೋಷ ಕುಮಾರ ತಿಳಿಸಿದರು.ಸ್ಫೋಟ ಸಂಭವಿಸಿದಾಗ ಮನೆಯಲ್ಲಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದರು. ನಿರಂತರ ಒಂದು ಗಂಟೆ ಕಾಲ ಸ್ಫೋಟದ ಶಬ್ದ ಕೇಳಿಸುತ್ತಿತ್ತು.

ಶಬೀರ್ ಹುಸೇನ್ ವಿವಾಹ ಮಹೋತ್ಸವಗಳಿಗೆ ಪಟಾಕಿಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿದ್ದು,ಮನೆಯು ಅಕ್ರಮ ಪಟಾಕಿ ತಯಾರಿಕೆ ಘಟಕವಾಗಿತ್ತು ಎಂದು ಹೇಳಲಾಗಿದೆ.ಸ್ಫೋಟದ ತೀವ್ರತೆಯಿಂದಾಗಿ ನೆರೆಕರೆಯ ಆರಕ್ಕೂ ಅಧಿಕ ಮನೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News