ಹಣದುಬ್ಬರದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು: ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ

Update: 2022-07-24 13:08 GMT
Photo: Twitter/DailyExcelsior1

ಹೊಸದಿಲ್ಲಿ: ಹಣದುಬ್ಬರ ಮತ್ತು ಆಹಾರದ ಬೆಲೆಗಳ ನಡುವಿನ ಸಂಬಂಧದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

 ಜನರು ಅಗತ್ಯ ವಸ್ತುಗಳು ಕೈಗೆಟುಕುವಂತೆ ಬಯಸುತ್ತಾರೆ ಎಂದು ಒತ್ತಿ ಹೇಳಿದ ಅವರು, ಪ್ರತಿಯೊಬ್ಬರಿಗೂ ಅಗತ್ಯ ವಸ್ತುಗಳು ಕೈಗೆಟಕುವ ದರದಲ್ಲಿ ದೊರೆಯಬೇಕಿದ್ದರೂ ರೈತರು ಅದರ ಹೊರೆಯನ್ನು ಭರಿಸಬಾರದು ಎಂದು ಹೇಳಿದ್ದಾರೆ.

ಬೆಲೆ ಏರಿಕೆ ಮತ್ತು ಮೂಲ ಆಹಾರ ಪದಾರ್ಥಗಳಾದ ಹಿಟ್ಟು ಮತ್ತು ಮೊಸರಿನ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೇರಿಕೆ ವಿಷಯಗಳ ಕುರಿತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೊಸಬಾಳೆ ಅವರು ಶನಿವಾರ ಈ ಹೇಳಿಕೆ ನೀಡಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಭಾರತೀಯ ಕೃಷಿ ಆರ್ಥಿಕ ಸಂಶೋಧನಾ ಕೇಂದ್ರದೊಂದಿಗೆ ಆರ್‌ಎಸ್‌ಎಸ್-ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಕೃಷಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಣದುಬ್ಬರ ಮತ್ತು ಆಹಾರ ಬೆಲೆಗಳ ನಡುವಿನ ಸಂಬಂಧದ ಕುರಿತು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ   ಪ್ರಸ್ತುತಪಡಿಸಿದ ಪ್ರಸ್ತುತಿಯನ್ನು ಉಲ್ಲೇಖಿಸಿ,  ಹಣದುಬ್ಬರ ಮತ್ತು ಆಹಾರ ಬೆಲೆಗಳ ನಡುವಿನ ಸಂಬಂಧದ ವಿಷಯದ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.

ಜನರು ಕೈಗಾರಿಕಾ ಉತ್ಪನ್ನಗಳಿಗೆ ಹೆಚ್ಚು ಪಾವತಿಸಲು ಸಿದ್ಧರಿದ್ದಾರೆ, ಆದರೆ ಆಹಾರ ಪದಾರ್ಥಗಳಿಗೆ ಅಲ್ಲ ಎಂದು ಪ್ರಸ್ತುತಿಯಲ್ಲಿ ಸೂಚಿಸಲಾಗಿದೆ. ಜನರು ವಾಸಿಸಲು ಮೂಲಭೂತ ಅವಶ್ಯಕತೆಗಳಾಗಿರುವ ಆಹಾರ, ಬಟ್ಟೆ ಮತ್ತು ವಸತಿ ಕೈಗೆಟುಕುವಂತೆ ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದೆ ಎಂದು ಹೊಸಬಾಳೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸಬಹುದು ಎಂದು ಸೇರಿಸಿದರು.

ಕೃಷಿ ಕ್ಷೇತ್ರದ ಬೆಳವಣಿಗೆ ಕುರಿತು ಮಾತನಾಡಿದ ಅವರು, ‘ಕಳೆದ 75 ವರ್ಷಗಳಲ್ಲಿ ಕೃಷಿಯಲ್ಲಿನ ಅಭಿವೃದ್ಧಿ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ... ಭಾರತವು ಭಿಕ್ಷಾ ಪಾತ್ರೆಯಿಂದ (ಆಹಾರ ಧಾನ್ಯಗಳಲ್ಲಿ) ರಫ್ತು ಮಾಡುವ ರಾಷ್ಟ್ರವಾಯಿತು. ಭಾರತವು ಧಾನ್ಯಗಳಲ್ಲಿ ಸ್ವಾವಲಂಬಿಯಾಗಿರುವುದು ಮಾತ್ರವಲ್ಲದೆ ಇತರ ದೇಶಗಳಿಗೂ ಕಳುಹಿಸಬಹುದು ಮತ್ತು ಆ ಕ್ರೆಡಿಟ್ ಇಲ್ಲಿಯವರೆಗಿನ ಎಲ್ಲಾ ಸರ್ಕಾರಗಳು, ವಿಜ್ಞಾನಿಗಳು ಮತ್ತು ರೈತರಿಗೆ ಸಲ್ಲುತ್ತದೆ." ಎಂದು ಅವರು ಹೇಳಿದ್ದಾರೆ.

ರೈತರ ಔನ್ನತ್ಯವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ ಹೊಸಬಾಳೆ, ಕೃಷಿಯನ್ನು ಆಕರ್ಷಕವಾಗಿಸಲು ಆಂದೋಲನದ ಅಗತ್ಯವಿದೆ, ಇದು ಹಳ್ಳಿಗಳಿಂದ ನಗರಗಳಿಗೆ ಕ್ಷಿಪ್ರ ವಲಸೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಆದರೆ ಸಮಾಜದಲ್ಲಿ ರೈತನ ಸಾಮಾಜಿಕ ಸ್ಥಾನಮಾನ ಕುಸಿಯುತ್ತಿರುವುದನ್ನು ನಾನು ನೋಡುತ್ತೇನೆ, ಕೆಳಮಟ್ಟದ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ವಕೀಲರು ಮತ್ತು ಶಾಲಾ ಮುಖ್ಯೋಪಾಧ್ಯಾಯರನ್ನು ಆಹ್ವಾನಿಸುವುದನ್ನು ನಾನು ನೋಡಿದ್ದೇನೆ ಆದರೆ ರೈತರನ್ನಲ್ಲ ಎಂದು ಅವರು ಹೇಳಿದ್ದಾರೆ.

ಹಳ್ಳಿಗಳಿಂದ ನಗರಗಳಿಗೆ ಯೋಜಿತವಲ್ಲದ ವಲಸೆಯನ್ನು ತಡೆಯುವ ಗ್ರಾಮೀಣ ಕೈಗಾರಿಕೀಕರಣದತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ. ಪಿ.ವಿ.ನರಸಿಂಹರಾವ್ ಅವರು ಆರಂಭಿಸಿದ ಎನ್‌ಸಿಆರ್‌ಐನಂತಹ ಸಂಸ್ಥೆಗಳನ್ನು ಬಲಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಕೃಷಿ ಪದ್ದತಿಗಳು ಯಾವತ್ತೂ ಕಾಲಕ್ಕಿಂತ ಮುಂದಿವೆ ಎಂದು ತಿಳಿಸಿದ ಹೊಸಬಾಳೆ, ಕೃಷಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಹೊಂದಿರುವ ಭಾರತದ ಪ್ರಾಚೀನ ಜ್ಞಾನ ವ್ಯವಸ್ಥೆಗಳ ಬಗ್ಗೆಯೂ ಕಲಿಯಬೇಕು ಎಂದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News