ಸ್ಮೃತಿ ಇರಾನಿ ಪುತ್ರಿಯ 'ರೆಸ್ಟಾರೆಂಟ್' ಮುಂದೆ ಯುವ ಕಾಂಗ್ರೆಸ್ ಪ್ರತಿಭಟನೆ

Update: 2022-07-24 17:46 GMT

ಪಣಜಿ, ಜು.24: ಗೋವಾದಲ್ಲಿರುವ  ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಗೆ ಸೇರಿದ್ದೆನ್ನಲಾದ ರೆಸ್ಟಾರೆಂಟ್ ಅಕ್ರಮವಾಗಿ ಕಾರ್ಯಾಚರಿಸುತ್ತಿದೆಯೆಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ರವಿವಾರ ಪ್ರತಿಭಟನೆ ನಡೆಸಿದರು.

ಗೋವಾದ ಅಸ್ಸಾಗಾಂವ್ ಗ್ರಾಮದಲ್ಲಿರುವ  ಸಿಲ್ಲಿ ಸೋಲ್ಸ್ ಗೋವಾ ರೆಸ್ಟಾರೆಂಟ್‌ನ ಹೊರಭಾಗದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಗೋವಾ ಯುವ ಕಾಂಗ್ರೆಸ್ ಅಧ್ಯಕ್ಷ ವರಾಡ್ ಮಾರ್ದೊಲ್ಕರ್ ಹಾಗೂ ರಾಜ್ಯ ಘಟಕದ ವಕ್ತಾರ ಅಮರನಾಥ ಪಣಜಿಕಾರ್ ವಹಿಸಿದ್ದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅಮರನಾಥ ಪಣಜಿಕಾರ್ ಅವರು,ಸಚಿವೆ ಇರಾನಿ ಅವರು ತನ್ನ ಕುಟುಂಬದ ಸದಸ್ಯರು ಮಾಡಿರುವ ಅಕ್ರಮಕ್ಕೂ ಕೂಡಾ ರಾಹುಲ್ ಗಾಂಧಿ ಅವರನ್ನೇ ಹೊಣೆಮಾಡುತ್ತಿದ್ದಾರೆಂದು ಆರೋಪಿಸಿದ್ದರು.
ಈ ರೆಸ್ಟಾರೆಂಟ್‌ನ  ಬಾರ್‌ನ ಪರವಾನಗಿಯ ನವೀಕರಣಕ್ಕಾಗಿ ಮೃತವ್ಯಕ್ತಿಯೊಬ್ಬರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿದೆಯೆಂದು ಕಾಂಗ್ರೆಸ್‌ನ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಟ್ಕರ್ ಆರೋಪಿಸಿದ್ದರು.

ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್ ಒಂದನ್ನು ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಶನಿವಾರ ಆರೋಪಿಸಿತ್ತು ಹಾಗೂ  ಸಚಿವೆಯ ರಾಜೀನಾಮೆಗೆ ಆಗ್ರಹಿಸಿತ್ತು. ಆದರೆ  ಕಾಂಗ್ರೆಸ್‌ನ ಆರೋಪವನ್ನು ಸ್ಮತಿ ತಳ್ಳಿಹಾಕಿದ್ದರು. ನ್ಯಾಶನಲ್‌ಹೆರಾಲ್ಡ್  ಪ್ರಕರಣದಲ್ಲಿ ಸೋನಿಯಾ-ರಾಹುಲ್ ಕುಟುಂಬದ ವಿರುದ್ಧ ತಾನು ಧ್ವನಿಯೆತ್ತುತ್ತಿರುವುದನ್ನು ಸಹಿಸದೆ ಕಾಂಗ್ರೆಸ್, ತನ್ನ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆಂದು ಆಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News