ಪ್ರತಿಪಕ್ಷಗಳಿಗೆ ದೇಶದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಮೇಲಾಗಿದೆ: ಪ್ರಧಾನಿ ಮೋದಿ

Update: 2022-07-25 14:37 GMT

ಹೊಸದಿಲ್ಲಿ: ಪ್ರತಿಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಯನ್ನು ದೇಶದ ಹಿತಾಸಕ್ತಿಗಿಂತ ಮೇಲಿರಿಸಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೇ ವೇಳೆ, ಪ್ರತಿಪಕ್ಷಗಳು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಬೆಲೆ ಏರಿಕೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಕಳೆದ ವಾರ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಸಂಸತ್ತಿನ ಉಭಯ ಸದನಗಳ ಕಲಾಪಗಳು ಸ್ಥಗಿತಗೊಂಡಿವೆ.

ಸಮಾಜವಾದಿ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಹರ್ಮೋಹನ್ ಸಿಂಗ್ ಯಾದವ್ ಅವರ 10 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳನ್ನು ಜಾರಿಗೆ ತರಲು ಸಾಧ್ಯವಾಗದಂತೆ ಅನೇಕ ಬಾರಿ ಸರ್ಕಾರದ ಕೆಲಸದಲ್ಲಿ ಪ್ರತಿಪಕ್ಷಗಳು ಅಡೆತಡೆಗಳನ್ನು ಹಾಕಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರತಿಪಕ್ಷಗಳು ಪ್ರತಿ ಬಾರಿ ನಿರ್ಧಾರ ತೆಗೆದುಕೊಳ್ಳುವಾಗ ಸರ್ಕಾರವನ್ನು ಪ್ರಶ್ನಿಸುತ್ತವೆ ಎಂದು ಹೇಳಿದ ಪ್ರಧಾನಿ ಮೋದಿ, "ಈಗ, (ನಿರ್ಧಾರಗಳು) ಜಾರಿಗೆ ಬಂದರೆ, ಅವರು ಅದನ್ನು ವಿರೋಧಿಸುತ್ತಾರೆ. ದೇಶದ ಜನರು ಅದನ್ನು ಇಷ್ಟಪಡುವುದಿಲ್ಲ" ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗಿಂತ ಸಿದ್ಧಾಂತ ಅಥವಾ ರಾಜಕೀಯ ಹಿತಾಸಕ್ತಿಗಳನ್ನು ಮೇಲಕ್ಕೆ ಇಡುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಪ್ರಧಾನಿ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News