×
Ad

ಗುಜರಾತ್‍ನಲ್ಲಿ ಕಳ್ಳಭಟ್ಟಿ ಸೇವನೆ: ಮೃತರ ಸಂಖ್ಯೆ 37ಕ್ಕೆ ಏರಿಕೆ

Update: 2022-07-27 07:20 IST

ರಾಜಕೋಟ್/ಅಹ್ಮದಾಬಾದ್: ಗುಜರಾತ್‍ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಸಂಭವಿಸಿದ ದುರಂತದಲ್ಲಿ ಕನಿಷ್ಠ 37 ಮಂದಿ ಮೃತಪಟ್ಟಿದ್ದು, ಪೊಲೀಸರು ಕಳ್ಳಭಟ್ಟಿಗಳನ್ನು ಮಟ್ಟಹಾಕುವ ಸಲುವಾಗಿ ರಾಜ್ಯಾದ್ಯಂತ ದಾಳಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೊತಾಡ್ ಜಿಲ್ಲೆ ಹಾಗೂ ಅಹ್ಮದಾಬಾದ್‍ನ ನೆರೆಯ ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದ್ದು, ಭಾವನಗರ ಜಿಲ್ಲೆಯಲ್ಲಿ 73 ಹಾಗೂ ಅಹ್ಮದಾಬಾದ್‍ನಲ್ಲಿ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ. ಬೊತಾಡ್ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 24 ಮಂದಿ ಮೃತಪಟ್ಟಿದ್ದಾರೆ.

ವಶಪಡಿಸಿಕೊಂಡ ಅಕ್ರಮ ಮದ್ಯದಲ್ಲಿ ಶೇಕಡ 99ರಷ್ಟು ಮೆಥನಾಲ್ ಪತ್ತೆಯಾಗಿದ್ದು, ಅಹ್ಮದಾಬಾದ್‍ನ ರಾಸಾಯನಿಕ ಕಾರ್ಖಾನೆಯಿಂದ ಇದನ್ನು ಕಳವು ಮಾಡಲಾಗಿತ್ತು. ಕಾರ್ಖಾನೆಯ ಗೋದಾಮು ವ್ಯವಸ್ಥಾಪಕ ಇದನ್ನು ಕಳವು ಮಾಡಿ, ಅಕ್ರಮ ಸಾರಾಯಿ ತಯಾರಕರಿಗೆ ನೀಡಿದ್ದ ಎಂದು ಪೊಲೀಸ್ ಮಹಾನಿರ್ದೇಶಕ ಆಶೀಶ್ ಭಾಟಿಯಾ ಹೇಳಿದ್ದಾರೆ. ಈ ರಾಸಾಯನಿಕಕ್ಕೆ ನೀರು ಬೆರೆಸಲಾಗಿದ್ದು, ಇದು ಮಾರಕ ಮಿಶ್ರಣ ಎಂದು ಅವರು ವಿವರಿಸಿದ್ದಾರೆ.

ಈ ಸಂಬಂಧ ಬರ್ವಾಲ, ರಾಣಪುರ ಮತ್ತು ದಂಡುಕಾ ಠಾಣೆಗಳಲ್ಲಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು, 14 ಮಂದಿಯ ವಿರುದ್ಧ ದೂರು ದಾಖಲಾಗಿದೆ. 8 ಮಂದಿಯನ್ನು ಬಂಧಿಸಲಾಗಿದೆ. ಗೋದಾಮು ವ್ಯವಸ್ಥಾಪಕ ಹಾಗೂ ಪ್ರಮುಖ ಆರೋಪಿ ಜಯೇಶ್ ಖವಾಡಿಯಾ ಬಂಧಿತರಲ್ಲಿ ಸೇರಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News