ರಾಜಸ್ಥಾನದಲ್ಲಿ ಪ್ರವಾಹ: ನಾಲ್ವರು ಮಕ್ಕಳು ನೀರುಪಾಲು
ಜೋಧ್‍ಪುರ: ರಾಜಸ್ಥಾನದ ಜೋಧ್‍ಪುರ, ಬಿಲ್ವಾರಾ ಮತ್ತು ಚಿತ್ತೋರ್‍ಗಢ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹಲವು ಕಡೆಗಳಲ್ಲಿ ರಸ್ತೆ ಹಾಗೂ ರೈಲ್ವೆ ಹಳಿಗಳು ಮುಳುಗಿದ್ದು, ವಾಯವ್ಯ ರೈಲ್ವೆ ಏಳು ರೈಲುಗಳ ಸಂಚಾರ ರದ್ದುಪಡಿಸಿದೆ. ಆರು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದ್ದು, ಎರಡು ರೈಲುಗಳ ಮಾರ್ಗ ಬದಲಿಸಲಾಗಿದೆ.
ಜೋಧಪುರದಲ್ಲಿ ಕಾರೊಂದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಭೋಪಾಲ್‍ಗಢ ಉಪವಿಭಾಗದ ಗವಾರಿಯಾನ್ ಕಿ ಧನಿ ಪ್ರದೇಶದಲ್ಲಿ ನಾಲ್ವರು ಮಕ್ಕಳು ಮಳೆನೀರಿನಿಂದ ತುಂಬಿದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಹೊಂಡದಲ್ಲಿ ಸ್ನಾನ ಮಾಡುತ್ತಿದ್ದ ಐದು ಮಕ್ಕಳು ಆಳದ ಮತ್ತೊಂದು ಹೊಂಡಕ್ಕೆ ಜಾರಿ ಬಿದ್ದು ಈ ದುರಂತ ಸಂಭವಿಸಿದೆ. ಒಬ್ಬ ಪಾರಾಗಿದ್ದು, ಆತ ಗ್ರಾಮಕ್ಕೆ ಬಂದು ಸುದ್ದಿ ತಿಳಿಸುವ ವೇಳೆಗೆ ನಾಲ್ವರು ಮೃತಪಟ್ಟಿದ್ದರು. ಮೃತ ಮಕ್ಕಳನ್ನು ಅನಿತಾ (15), ಸಂಜು (16), ಪಿಂಟು (12) ಮತ್ತು ಕಿಶೋರ್ (12) ಎಂದು ಗುರುತಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಚಿರಂಜೀವಿ ದುರಂತ ವಿಮಾ ಯೋಜನೆಯಡಿ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ ಉಳಿದ ಬಾಲಕನಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 20 ಸಾವಿರ ರೂಪಾಯಿ ನೆರವು ನೀಡಲಾಗಿದೆ. ಮಳೆಗಾಲದಲ್ಲಿ ಜನ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ.