ತಮಿಳುನಾಡು: ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ, 2 ವಾರಗಳಲ್ಲಿ 4ನೇ ಪ್ರಕರಣ
ಚೆನ್ನೈ,ಜು.27: ತಮಿಳುನಾಡಿನ ಶಿವಕಾಶಿ ಪಟ್ಟಣದಲ್ಲಿ ಮಂಗಳವಾರ 11ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು,ಇದು ಈ ತಿಂಗಳಲ್ಲಿ ರಾಜ್ಯದಲ್ಲಿ ಇಂತಹ ನಾಲ್ಕನೇ ಘಟನೆಯಾಗಿದೆ.
ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿನಿ ಹೆತ್ತವರು ಮನೆಗೆ ಮರಳಿದಾಗ ಆಕೆ ಮೃತಪಟ್ಟಿದ್ದು ಬೆಳಕಿಗೆ ಬಂದಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿನಿ ತೀವ್ರ ಮುಟ್ಟಿನ ನೋವಿನಿಂದ ಸಂಕಟ ಪಡುತ್ತಿದ್ದಳು ಮತ್ತು ಇದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೆತ್ತವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಸೋಮವಾರ ಕುಡ್ಡಲೂರು ಜಿಲ್ಲೆಯ 12ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಾನು ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಹೆತ್ತವರ ಆಕಾಂಕ್ಷೆಯನ್ನು ಈಡೇರಿಸುವಲ್ಲಿ ತನ್ನ ಅಸಾಮರ್ಥ್ಯವು ಆತ್ಮಹತ್ಯೆಗೆ ಕಾರಣ ಎಂದು ಆಕೆ ಬರೆದಿಟ್ಟಿದ್ದ ಚೀಟಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದಕ್ಕೂ ಮುನ್ನ ಇನ್ನೂ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದರು.ಆತ್ಮಹತ್ಯೆಯ ವಿಚಾರವನ್ನು ತೊರೆಯುವಂತೆ ಮಂಗಳವಾರ ವಿದ್ಯಾರ್ಥಿಗಳನ್ನು ಆಗ್ರಹಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ವಿದ್ಯಾರ್ಥಿಗಳಿಗೆ ಮಾನಸಿಕ,ದೈಹಿಕ ಮತ್ತು ಲೈಂಗಿಕ ಕಿರುಕುಳಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.