ಬೊಳುವಾರು: ಸರಕಾರಿ ಬಸ್ ಮೇಲೆ ಕಲ್ಲು ತೂರಾಟ
ಪುತ್ತೂರು, ಜು.27: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಹಿಂದುತ್ವ ಸಂಘಟನೆಗಳ ಕರೆಯ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿಮುಂಗಟ್ಟುಗಳು ಬಂದ್ ಆಗಿವೆ. ಈ ನಡುವೆ ಪುತ್ತೂರಿನ ಬೊಳುವಾರಿನಲ್ಲಿ ಸರಕಾರಿ ಬಸ್ಸೊಂದರ ಮೇಲೆ ಇಂದು ಬೆಳಗ್ಗೆ ಕಲ್ಲು ತೂರಾಟ ನಡೆದಿರುವುದು ವರದಿಯಾಗಿದೆ.
ಪುತ್ತೂರಿನಿಂದ ಮಂಗಳೂರಿಗೆ ಸಂಚಾರ ಆರಂಭಿಸಿದ್ದ ಬಸ್ ಬೊಳುವಾರಿನ ವಿಶ್ವ ಕರ್ಮ ಸಭಾ ಭವನದ ಮುಂಭಾಗ ತಲುಪಿದಾಗ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಇದರಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಮೊಟಕುಗೊಂಡಿದೆ.
ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಇಂದು ರಜೆ ಘೋಷಿಸಿವೆ. ಬಹುತೇಕ ಅಂಗಡಿಮುಂಗಟ್ಟುಗಳು ಮುಚ್ಚಿವೆ. ವಾಹನ ಸಂಚಾರ ವಿರಳವಾಗಿದೆ.
ಕಡಬದಲ್ಲಿ ಹಿಂದುತ್ವ ಸಂಘಟನೆಗಳ ಕರೆಯಂತೆ ಅಂಗಡಿಮುಂಗಟ್ಟುಗಳೆಲ್ಲ ಮುಚ್ಚಿದ್ದರೆ, ಎಲ್ಲಾ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಹನ ಸಂಚಾರ ಎಂದಿನಂತೆ ಸುಗಮವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.