ಹಣ ಅಕ್ರಮ ವರ್ಗಾವಣೆ ಪ್ರಕರಣ: ಮೂರನೇ ದಿನದ ವಿಚಾರಣೆ ಮುಗಿಸಿದ ಸೋನಿಯಾ ಗಾಂಧಿ

Update: 2022-07-27 10:03 GMT
Photo:PTI

ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು (ಜುಲೈ 27) ಜಾರಿ ನಿರ್ದೇಶನಾಲಯದ ಮುಂದೆ ಮೂರನೇ ಸುತ್ತಿನ ವಿಚಾರಣೆಗಾಗಿ ಹಾಜರಾದರು. ಸೋನಿಯಾ ಅವರ ಇಂದಿನ ವಿಚಾರಣೆ ಮುಗಿದಿದ್ದು,  ಅವರು ಈಡಿ ಕಚೇರಿಯಿಂದ  ತಮ್ಮ ಮನೆಯತ್ತ ತೆರಳಿದರು ಎಂದು ವರದಿಯಾಗಿದೆ.

ಸದ್ಯಕ್ಕೆ ಸೋನಿಯಾ ಗಾಂಧಿ ಅವರಿಗೆ ಯಾವುದೇ ಹೊಸ ಸಮನ್ಸ್ ಜಾರಿಯಾಗಿಲ್ಲ. ಈಡಿ ಮತ್ತೆ ಅವರಿಗೆ ಸಮನ್ಸ್ ನೀಡುವವರೆಗೂ ಅವರನ್ನು ವಿಚಾರಣೆಗೆ ಕರೆಯಲಾಗುವುದಿಲ್ಲ

ಮಂಗಳವಾರ, ಈಡಿ ಅಧಿಕಾರಿಗಳು 75 ವರ್ಷದ ಗಾಂಧಿ ಅವರನ್ನು ಆರು ಗಂಟೆಗಳ ಕಾಲ ಪ್ರಶ್ನಿಸಿದರು.  ಆದರೆ ಕಾಂಗ್ರೆಸ್ ದಿಲ್ಲಿ ಹಾಗೂ  ಇತರೆಡೆ ಕೇಂದ್ರ ಸಂಸ್ಥೆಗಳ ದುರುಪಯೋಗದ ಬಗ್ಗೆ ಪ್ರತಿಭಟನೆಗಳನ್ನು ನಡೆಸಿತು. ಪ್ರತಿಭಟನೆ ನಡೆಸಿದ್ದಕ್ಕಾಗಿ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ  ಪ್ರಮುಖ ನಾಯಕರನ್ನು ಬಂಧಿಸಲಾಯಿತು. ನಂತರ ಬಿಡುಗಡೆ ಮಾಡಲಾಯಿತು.

ಪಕ್ಷದ ಕಚೇರಿ ಹೊರಗೆ ಕಾಂಗ್ರೆಸ್ ನಾಯಕರನ್ನು ಬಂಧಿಸಿದ ದಿಲ್ಲಿ ಪೊಲೀಸರು

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರನ್ನು ಈಡಿ ಮೂರನೇ ಬಾರಿ  ಪ್ರಶ್ನಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ಮನೀಶ್ ತಿವಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ದಿಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, “ಈಡಿ,  ರಾಹುಲ್ ಗಾಂಧಿಯವನ್ನು ಐದು ದಿನಗಳ ತನಕ ವಿಚಾರಣೆ ನಡೆಸಿತು. ಈಗ ಮೂರನೇ ಬಾರಿಗೆ ಸೋನಿಯಾ ಗಾಂಧಿಯವರಿಗೆ ಸಮನ್ಸ್ ನೀಡಿದೆ'' ಎಂದರು.

'ಈಡಿ' ದೇಶದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಿದೆ ಎಂದಿರುವ ಹಿರಿಯ ನಾಯಕ ಆನಂದ್ ಶರ್ಮಾ ಅವರು"ಒಬ್ಬರನ್ನು ಗುರಿಯಾಗಿಸಲು ಹಾಗೂ  ಅವಮಾನಿಸಲು ಕಾನೂನನ್ನು "ಅಸ್ತ್ರ" ಮಾಡಬಾರದು’’ ಎಂದು ಹೇಳಿದ್ದಾರೆ,

ಸೋನಿಯಾ ಅವರ ವಯಸ್ಸು ಹಾಗೂ  ಆರೋಗ್ಯ ಸಮಸ್ಯೆಗಳನ್ನು 'ಈಡಿ' ಗಮನದಲ್ಲಿಟ್ಟುಕೊಳ್ಳಬೇಕು ಎಂದು ಗುಲಾಂ ನಬಿ ಆಝಾದ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News