×
Ad

ರೈಲ್ವೆಯಲ್ಲಿ ‘‘ಉದ್ಯೋಗಕ್ಕಾಗಿ ಜಮೀನು’’ ಹಗರಣ: ಸಿಬಿಐಯಿಂದ ಲಾಲು ಆಪ್ತ ಸಹಾಯಕನ ಬಂಧನ

Update: 2022-07-27 23:00 IST

ಹೊಸದಿಲ್ಲಿ, ಜು. 26: ಯುಪಿಎ ಸರಕಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಸಚಿವರಾಗಿದ್ದಾಗ ರೈಲ್ವೆಯಲ್ಲಿ ನಡೆದ ‘‘ಉದ್ಯೋಗಕ್ಕೆ ಜಮೀನು’’ ಹಗರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆಪ್ತ ಸಹಾಯಕ ಭೋಲಾ ಯಾದವ್‌ನನ್ನು ಸಿಬಿಐ ಬಂಧಿಸಿದೆ. 

2005 ಹಾಗೂ 2009ರ ನಡುವೆ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ವಿಶೇಷಾಧಿಕಾರಿ (ಒಎಸ್‌ಡಿ)ಯಾಗಿದ್ದ ಭೋಲಾ ಯಾದವ್‌ಗೆ ಸೇರಿದ ದರ್ಭಾಂಗ ಹಾಗೂ ಪಾಟ್ನಾದಲ್ಲಿರುವ ತಲಾ ಎರಡು ಸ್ಥಳಗಳ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ರೈಲ್ವೆಯಲ್ಲಿ ಡಿ ಗುಂಪಿನ ಉದ್ಯೋಗಕ್ಕೆ ಪ್ರತಿಫಲವಾಗಿ ಪಾಟ್ನಾದಲ್ಲಿರುವ ಉದ್ಯೋಗ ಆಕಾಂಕ್ಷಿಗಳ ಕುಟುಂಬ ಲಾಲು ಪ್ರಸಾದ್  ಕುಟುಂಬಕ್ಕೆ ಜಮೀನು ವರ್ಗಾವಣೆ ಮಾಡಿದ ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ಬೆಂಬಲಿಗರು ‘‘ಹನುಮಾನ್’’ ಅಥವಾ ಲಾಲು ಪ್ರಸಾದ್ ಅವರ ನೆರಳು ಎಂದು ಕರೆಯುತ್ತಿದ್ದ ಭೋಲಾ ಯಾದವ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ.

ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ನೀಡುವಲ್ಲಿ ಹಾಗೂ ಭೂಮಿಯನ್ನು ಲಾಲು ಪ್ರಸಾದ್ ಕುಟುಂಬಕ್ಕೆ ವರ್ಗಾಯಿಸುವಲ್ಲಿ ಭೋಲಾ ಯಾದವ್ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಸಿಬಿಐ ಶಂಕಿಸಿದೆ. 
ಮುಂಬೈ, ಜಬಲ್ಪುರ, ಕೋಲ್ಕತ್ತಾ, ಜೈಪುರ ಹಾಗೂ ಹಾಜಿಪುರ ರೈಲ್ವೆ ವಲಯಗಳಲ್ಲಿ ಹೆಚ್ಚುವರಿಯಾಗಿ 12 ಜನರಿಗೆ ಉದ್ಯೋಗ ನೀಡಿದ ಪ್ರಕರಣದಲ್ಲಿ ಲಾಲು ಪ್ರಸಾದ್, ಅವರ ಪತ್ನಿ ರಾಬ್ರಿ ದೇವಿ, ಪುತ್ರಿ ಮಿಶಾ ಭಾರತಿ ಹಾಗೂ ಹೇಮಾ ಯಾದವ್ ಅವರ ವಿರುದ್ಧ ಸಿಬಿಐ ಮೇ 18ರಂದು ಎಫ್‌ಐಆರ್ ದಾಖಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News