ಯೋಗಿಯವರೇ ಸಹಿಸಿಕೊಳ್ಳಿ...

Update: 2022-07-28 06:49 GMT

ಝುಬೈರ್ ಅವರನ್ನು ಯುಪಿ ಪೊಲೀಸರ ಚಕ್ರಬಂಧದಿಂದ ಸಂಪೂರ್ಣ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ಮುಂದೆಯೂ ಹತ್ತಿರ ಸುಳಿಯದಂತೆ ಮಾಡಿತಲ್ಲದೆ, ಎಸ್‌ಐಟಿ ರದ್ದು ಮಾಡುವ ಮೂಲಕ ಜೋರಾಗಿಯೇ ಗುದ್ದು ನೀಡಿತು. ಅದಕ್ಕೆ ಪತ್ರಿಕೆಯೊಂದು ಯೋಗಿಯವರೇ ಸಹಿಸಿಕೊಳ್ಳಿ... ಎಂದು ಹೆಡ್ಡಿಂಗು ನೀಡಿದೆ. ಕೋರ್ಟಿನಲ್ಲಾದ ಹಿನ್ನಡೆಯಿಂದ ಸಹಿಸಿಕೊಳ್ಳಿ ಅಂದಿತಾ!? ಅಥವಾ ಪ್ರಜಾಪ್ರಭುತ್ವದಲ್ಲಿ ತಾತ್ವಿಕ ವಿರೋಧವನ್ನು ಸಹಿಸಿಕೊಳ್ಳಿ ಅಂದಿತಾ!? ಗೊತ್ತಿಲ್ಲ. ಆದರೆ ಸಂದರ್ಭಕ್ಕೆ ಎರಡೂ ಅರ್ಥವತ್ತಾಗಿವೆ.

ಹೀಗೆಂದು ‘ಟೆಲಿಗ್ರಾಫ್’ ಪತ್ರಿಕೆಯಲ್ಲಿ ತಲೆಬರಹ ಬಂದಿದ್ದು ಏಕೆ ಎಂದು ತಿಳಿಯುವ ಮುಂಚೆ ಸುಪ್ರೀಂ ಕೋರ್ಟ್ ಸತ್ಯಶೋಧಕ ಮುಹಮ್ಮದ್ ಝುಬೈರ್ ಅವರಿಗೆ ಬೇಲ್ ನೀಡುವಾಗ ಏನೇನು ಸೂಚನೆ ನೀಡಿತು ಎಂದು ಗಮನಿಸಬೇಕಾಗಿದೆ.

‘‘ಇಂದು ಸಂಜೆ ಆರು ಗಂಟೆಯೊಳಗೆ ಝುಬೈರ್‌ರನ್ನು ಬಿಡುಗಡೆ ಮಾಡಬೇಕು.

ಝುಬೈರ್ ಕೇಸನ್ನು ತನಿಖೆ ಮಾಡಲು ರಚಿಸಲಾಗಿರುವ ಎಸ್‌ಐಟಿ ರದ್ದಾಗಬೇಕು.

ಉತ್ತರಪ್ರದೇಶದ ಆರು ವಿವಿಧ ಕಡೆ ಝುಬೈರ್ ಮೇಲೆ ಹಾಕಿರುವ ಏಳು ಎಫ್‌ಐಆರ್‌ಗಳನ್ನು ಒಂದರಲ್ಲಿಯೇ ತಂದು ಕೇಸನ್ನು ದಿಲ್ಲಿಗೆ ವರ್ಗಾಯಿಸಬೇಕು.

ಝುಬೈರ್ ಬಯಸಿದರೆ ಈ ಎಲ್ಲಾ ಎಫ್‌ಐಆರ್‌ಗಳು ರದ್ದಾಗುವಂತೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು.’’

ಹೀಗೆ ಕೋರ್ಟು ಆದೇಶ ನೀಡುತ್ತಿದ್ದಂತೆ 24 ದಿನಗಳಿಂದ ಯುಪಿ ಪೊಲೀಸರ ವಶದಲ್ಲಿದ್ದ ಝುಬೈರ್ ಬಿಡುಗಡೆಯಾಗುವುದು ಖಚಿತವಾಯಿತು. ಇದರಲ್ಲಿ ಯೋಗಿ ಸಹಿಸಿಕೊಳ್ಳುವಂತಹದ್ದು ಏನಿದೆ? ಅದಕ್ಕೆ ಮುಂಚೆ ಝುಬೈರ್ ಬಗ್ಗೆ ತಿಳಿಯೋಣ.

‘ಆಲ್ಟ್ ನ್ಯೂಸ್’ ಎಂಬುದು ಒಂದು ಸತ್ಯಶೋಧಕ ಅಥವಾ ಫ್ಯಾಕ್ಟ್ ಚೆಕಿಂಗ್ ಸಂಸ್ಥೆ. ಪ್ರತೀಕ್ ಸಿನ್ಹಾ ಎಂಬವರು ಸ್ಥಾಪಿಸಿದ ಈ ಸಂಸ್ಥೆಗೆ ಝುಬೈರ್ ಸಹಸಂಸ್ಥಾಪಕರು. ಭಾರತದಲ್ಲಿ ಸೋಷಿಯಲ್ ಮೀಡಿಯಾದ ಬಳಕೆ ವ್ಯಾಪಕವಾಗಿ ಹರಡಿದ ಮೇಲೆ ಆ ಮೂಲಕ ಸುಳ್ಳು ಮತ್ತು ಭ್ರಾಮಕ ಸುದ್ದಿಗಳ ಪ್ರವಾಹವೇ ಉಂಟಾಯಿತು. ಫೇಸ್‌ಬುಕ್, ವಾಟ್ಸ್‌ಆ್ಯಪ್ ಬಳಸುವ ಮುಗ್ಧ ಜನ ಅದನ್ನೆಲ್ಲ ನಂಬಿಕೊಂಡು ಬಿಡುತ್ತಿದ್ದರು. ತಮ್ಮ ರಾಜಕೀಯ ಲಾಭಕ್ಕೆ ಸುಳ್ಳು ಹರಡುವುದು ಒಂದು ಮುಖವಾದರೆ, ಇದರ ಮತ್ತೊಂದು ಕ್ರೂರ ಮುಖ ಇನ್ನೊಬ್ಬರ ಹೆಸರು ಕೆಡಿಸಿ ತೇಜೋವಧೆ ಮಾಡುವುದು. ಈ ಆನ್‌ಲೈನ್ ಅತ್ಯಾಚಾರ ತಡೆಯಲೆಂದೇ ದೇಶದಲ್ಲಿ ಕೆಲವು ಸತ್ಯಶೋಧಕ ಜಾಲತಾಣಗಳು ಹುಟ್ಟಿಕೊಂಡವು. ಅದರಲ್ಲಿ ಈ ಆಲ್ಟ್ ನ್ಯೂಸ್ ಕೂಡ ಒಂದು. ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗುವಂತೆ ಬೆಳೆದ ಈ ಸತ್ಯಶೋಧಕ ಜಾಲತಾಣ, ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಬಂದ ಅನೇಕ ಸುಳ್ಳುಗಳನ್ನು ಕಂಡುಹಿಡಿದು ಅದರ ನಿಜ ಸ್ವರೂಪವನ್ನು ಬಯಲು ಮಾಡಿದೆ ಮತ್ತು ಪಕ್ಷಭೇದ ಇಲ್ಲದೆ ಆ ಕೆಲಸವನ್ನು ಮುಂದುವರಿಸುತ್ತಿದೆ. ಹೀಗಿರುವಾಗ ಸುಳ್ಳು ಹರಡುವ ಮಂದಿ ಸುಮ್ಮನಿದ್ದಾರೆಯೆ? ಏಕೆಂದರೆ ಅವರು ಹೇಳುವ ಬಹುಪಾಲು ಇತಿಹಾಸ ಸುಳ್ಳು. ವರದಿ ಮಾಡುವ ವರ್ತಮಾನ ಸುಳ್ಳು. ತೋರಿಸುವ ಭವಿಷ್ಯವೂ ಸುಳ್ಳು. ಹೀಗೆ ಸುಳ್ಳಿನ ಮೂಲಕ ತಮ್ಮ ರಾಜಕೀಯ ಅಜೆಂಡಾ ಸೆಟ್ ಮಾಡುತ್ತಾ, ದ್ವೇಷ ಹರಡುತ್ತಾ ಲಾಭ ಪಡೆಯುವವರಿಗೆ ಈ ಫ್ಯಾಕ್ಟ್ ಅನ್ನೋದು ಸಮಸ್ಯೆಯಾಗಿ ಕಾಡಿದ್ದರಲ್ಲಿ ಆಶ್ಚರ್ಯವಿಲ್ಲ.

ಈಗ ಝುಬೈರ್ ಅವರ ಅರೆಸ್ಟ್ ವಿಚಾರಕ್ಕೆ ಬರೋಣ. ಫ್ಯಾಕ್ಟ್ ಚೆಕರ್ ಆಗಿ ಕಿರಿಕಿರಿ ಮಾಡುತ್ತಲೇ ಬಂದಿದ್ದ ಝುಬೈರ್ ಅವರ ಅರೆಸ್ಟ್‌ಗೆ ಮುನ್ನುಡಿ ಬರೆದಿದ್ದು ನೂಪುರ್ ಶರ್ಮಾ ಘಟನೆ ಅನ್ನುವುದು ಕೆಲವರ ಅನುಮಾನವಾಗಿದೆ. ನೂಪುರ್ ಪ್ರವಾದಿ ಮುಹಮ್ಮದ್‌ರ ಬಗ್ಗೆ ಟಿವಿ ಚಾನೆಲ್‌ಗಳಲ್ಲಿ ನೀಡಿದ ಹೇಳಿಕೆಯ ತುಣುಕುಗಳನ್ನು ಝುಬೈರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರಿಂದಲೇ ಅದು ವ್ಯಾಪಕ ಪ್ರಚಾರ ಪಡೆಯಿತು. ಮುಸ್ಲಿಮ್ ದೇಶಗಳು, ಅದರಲ್ಲೂ ಕೊಲ್ಲಿ ರಾಷ್ಟ್ರಗಳಿಂದ ದೊಡ್ಡ ಆಕ್ಷೇಪ ಕೇಳಿ ಬಂತು. ಕಡೆಗೆ ನೂಪುರ್ ಮತ್ತು ಜಿಂದಾಲ್ ಅವರನ್ನು ಬಿಜೆಪಿ ಪಕ್ಷದಿಂದ ವಜಾ ಮಾಡಬೇಕಾಗಿ ಬಂತು. ಇದರಿಂದ ಸರಕಾರಕ್ಕೂ ಮತ್ತು ಬಿಜೆಪಿಗೂ ದೊಡ್ಡ ರೀತಿಯಲ್ಲಿ ಮುಜುಗರವಾಗಿದ್ದು ಸುಳ್ಳಲ್ಲ.

ಯಾವುದೋ ಕೇಸಿನಲ್ಲಿ ಸಮನ್ಸ್ ನೀಡಿ ಝುಬೈರ್‌ರನ್ನು ದಿಲ್ಲಿಗೆ ಕರೆಸಿಕೊಳ್ಳಲಾಯಿತು. ಅಲ್ಲಿ ನಾಲ್ಕು ವರ್ಷಗಳ ಹಿಂದೆ ಏನೂ ಬರೆಯದೆ ಹಾಕಿದ ಒಂದು ಸಿನೆಮಾದ ಸ್ಕ್ರೀನ್ ಶಾಟ್ ಗೆ ಕೇಸು ಜಡಿಯುವ ಮೂಲಕ ಯುಪಿ ಪೊಲೀಸರಿಂದ ಅರೆಸ್ಟ್ ಮಾಡಲಾಯಿತು. ಆಮೇಲೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ. ಅದರಲ್ಲಿ ಜಾಮೀನು ಸಿಗುತ್ತಿದ್ದಂತೆ ಮತ್ತೊಂದು ಕೇಸಿನಲ್ಲಿ ಅರೆಸ್ಟ್. ನಂತರ ತಿಳಿದಿದ್ದು ಉತ್ತರಪ್ರದೇಶದ ಬೇರೆ ಬೇರೆ ಠಾಣೆಗಳಲ್ಲಿ ಏಳು ಕೇಸುಗಳು ದಾಖಲಾಗಿವೆ. ಅಲ್ಲಿಗೆ ಝುಬೈರ್ ರನ್ನು ಬಹಳ ಕಾಲ ಒಳಗೆ ಇಡುವ ಕಾನೂನಿನ ಚಕ್ರವ್ಯೆಹ ತಯಾರಾಗಿತ್ತು. ಕೆಲವು ಪ್ರಕರಣಗಳಲ್ಲಿ ಈ ಚಕ್ರವ್ಯೆಹ ಯಶಸ್ವಿಯೂ ಆಗಿದೆ. ಆದರೆ ಝುಬೈರ್ ವಿಷಯದಲ್ಲಿ ಸುಪ್ರೀಂ ಕೋರ್ಟು ಮೇಲಿನ ನಿರ್ದೇಶನಗಳೊಂದಿಗೆ ಜಾಮೀನು ನೀಡುವ ಮೂಲಕ ಚಕ್ರವ್ಯೆಹವನ್ನು ಛಿದ್ರ ಮಾಡಿಬಿಟ್ಟಿತು.

ಈ ಮಧ್ಯೆ ಆಲ್ಟ್ ನ್ಯೂಸ್‌ಗೆ ವಿದೇಶಗಳಿಂದ ದುಡ್ಡು ಬರುತ್ತದೆ ಎಂದು ಬಿಂಬಿಸುವ ಯತ್ನವೂ ನಡೆಯಿತು. ಏಕೆ ಎನ್ನುವುದು ಸ್ಪಷ್ಟ. ಅರೆಸ್ಟ್ ಆಗಿದ್ದು ಮುಸ್ಲಿಮ್ ಮತ್ತು ಪಾಕಿಸ್ತಾನ, ಸಿರಿಯಾದಿಂದ ದುಡ್ಡು ಬರುತ್ತದೆ ಅಂದ ಕೂಡಲೇ ಈ ದೇಶದ ಶೇ. 75 ಜನತೆ ಹಾಗೂ ಶೇ. 80 ಮಾಧ್ಯಮಗಳು ಹೇಗೆ ವರ್ತಿಸುತ್ತವೆ ಎಂದು ಹೇಳಬೇಕಿಲ್ಲ. ಆದರೆ ಆಲ್ಟ್ ನ್ಯೂಸ್ ಸಂಸ್ಥಾಪಕ ಪ್ರತೀಕ್ ಸಿನ್ಹಾ ಬಿಡುಗಡೆ ಮಾಡಿದ ದಾಖಲೆ ಪ್ರಕಾರ ಸಂಸ್ಥೆಗೆ ವಿದೇಶದಿಂದ ಹಣ ಬರುವ ಯಾವ ವ್ಯವಸ್ಥೆಯೂ ಇಲ್ಲ ಎಂದು ಗೊತ್ತಾಯಿತು. ಇನ್ನು, ಝುಬೈರ್‌ಗೆ ಬೇಲ್ ನೀಡುವ ಮುಂಚೆ ಸರಕಾರಿ ವಕೀಲರೇನೂ ಸುಮ್ಮನೆ ಕೂತಿರಲಿಲ್ಲ. ಗಟ್ಟಿಯಾಗಿ ವಿರೋಧಿಸಿದ ಅವರು ಬಜರಂಗ ಮುನಿಯಂತಹವರು ಮಾತಾಡಿದ ಧಾರ್ಮಿಕ ದ್ವೇಷದ ವೀಡಿಯೊಗಳನ್ನು ಝುಬೈರ್ ಟ್ವೀಟ್ ಮಾಡಿದ್ದರಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಅದರ ಬದಲಾಗಿ ಪೊಲೀಸರಿಗೆ ದೂರು ನೀಡಬಹುದಿತ್ತು ಎಂದು ವಾದಿಸಿದರು. ಆ ಎಲ್ಲ ಟ್ವೀಟ್‌ಗಳನ್ನು ಪೊಲೀಸರಿಗೆ ಟ್ಯಾಗ್ ಮಾಡಿರುವಾಗ ಅದರ ಅರ್ಥ ಪೊಲೀಸರು ಕ್ರಮ ಕೈಗೊಳ್ಳಲಿ ಎಂದಲ್ಲವೇ..? ಎಂದು ಝುಬೈರ್ ಪರ ವಕೀಲರು ಸರಕಾರಿ ವಕೀಲರ ವಾದವನ್ನು ಪೊಳ್ಳೆಂದು ನಿರೂಪಿಸಿದರು. ಕಡೆಗೆ ಜಾಮೀನು ನೀಡುವಾಗಲೂ ಝುಬೈರ್ ಇನ್ನು ಮುಂದೆ ಟ್ವೀಟ್ ಮಾಡದಂತೆ ನಿರ್ಬಂಧಿಸಬೇಕು ಎಂದು ಸರಕಾರಿ ವಕೀಲರು ಆಗ್ರಹಿಸಿದರು.

ಆಗ ನ್ಯಾಯಾಧೀಶರು ‘‘ಹಾಗಾದರೆ ಲಾಯರ್‌ಗೆ ವಕೀಲ ವೃತ್ತಿ ಮಾಡಬೇಡಿ ಅಂದ ಹಾಗಾಗುತ್ತದೆ. ಬರೆಯುವುದು ಕಾನೂನಾತ್ಮಕವಾಗಿ ತಪ್ಪಾಗಿದ್ದರೆ ಅವರು ಹೊಣೆಯಾಗುತ್ತಾರೆಯೇ ಹೊರತು ಬರೆಯದಂತೆ ತಡೆಯಲು ಆಗದು’’ ಎಂದು ಜಾಡಿಸುವ ಮೂಲಕ ಬೇಲ್ ಮಂಜೂರು ಮಾಡುತ್ತಲೇ ಮತ್ತೊಂದು ಹೊಡೆತ ನೀಡಿಯೇ ಬಿಟ್ಟರು. ಅದೇನೆಂದರೆ, ‘‘ಝುಬೈರ್ ಹಿಂದೆ ಮಾಡಿರುವ ಮತ್ಯಾವುದೊ ಟ್ವೀಟ್ ಹುಡುಕಿ ಇನ್ನೊಂದು ಎಫ್‌ಐಆರ್ ಹಾಕಿದರೆ ಈ ಬೇಲ್ ಆದೇಶ ಅದಕ್ಕೂ ಅನ್ವಯಿಸುತ್ತದೆ’’ ಎಂದು ಒಕ್ಕಣೆ ಬರೆದುಬಿಟ್ಟರು. ಅಲ್ಲಿಗೆ ಝುಬೈರ್ ಅವರನ್ನು ಯುಪಿ ಪೊಲೀಸರ ಚಕ್ರಬಂಧದಿಂದ ಸಂಪೂರ್ಣ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ಮುಂದೆಯೂ ಹತ್ತಿರ ಸುಳಿಯದಂತೆ ಮಾಡಿತಲ್ಲದೆ, ಎಸ್‌ಐಟಿ ರದ್ದು ಮಾಡುವ ಮೂಲಕ ಜೋರಾಗಿಯೇ ಗುದ್ದು ನೀಡಿತು. ಅದಕ್ಕೆ ಪತ್ರಿಕೆಯೊಂದು ಯೋಗಿಯವರೇ ಸಹಿಸಿಕೊಳ್ಳಿ... ಎಂದು ಹೆಡ್ಡಿಂಗು ನೀಡಿದೆ. ಕೋರ್ಟಿನಲ್ಲಾದ ಹಿನ್ನಡೆಯಿಂದ ಸಹಿಸಿಕೊಳ್ಳಿ ಅಂದಿತಾ!? ಅಥವಾ ಪ್ರಜಾಪ್ರಭುತ್ವದಲ್ಲಿ ತಾತ್ವಿಕ ವಿರೋಧವನ್ನು ಸಹಿಸಿಕೊಳ್ಳಿ ಅಂದಿತಾ!? ಗೊತ್ತಿಲ್ಲ. ಆದರೆ ಸಂದರ್ಭಕ್ಕೆ ಎರಡೂ ಅರ್ಥವತ್ತಾಗಿವೆ.

Writer - ಜಯಸುತ, ಶಿಕಾರಿಪುರ

contributor

Editor - ಜಯಸುತ, ಶಿಕಾರಿಪುರ

contributor

Similar News