ಮಧ್ಯಪ್ರದೇಶ: ಒಂದೇ ಸಿರಿಂಜಿನಿಂದ 30 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ

Update: 2022-07-28 18:13 GMT

ಭೋಪಾಲ್, ಜು. 28: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಗ್ರಾಮವೊಂದರ ಶಾಲೆಯ  30 ವಿದ್ಯಾರ್ಥಿಗಳಿಗೆ ಆರೋಗ್ಯಾಧಿಕಾರಿ ಒಂದೇ ಸಿರಿಂಜಿನಲ್ಲಿ ಕೋವಿಡ್ ಲಸಿಕೆ ನೀಡಿದ ಘಟನೆ ನಡೆದಿದೆ. 

ಸಾಗರ್‌ನಲ್ಲಿರುವ ಜೈನ್ ಪಬ್ಲಿಕ್ ಹೈಯರ್ ಸೆಕಂಡರಿ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಕೋವಿಡ್ ಲಸಿಕಾ ಶಿಬಿರದಲ್ಲಿ ಈ ಘಟನೆ ನಡೆದಿದೆ. 
ಪ್ರಾಧಿಕಾರ ಒಂದೇ ಸಿರಿಂಜ್ ಅನ್ನು ರವಾನಿಸಿದೆ. ಎಲ್ಲ ಮಕ್ಕಳಿಗೆ ಇದರಲ್ಲೇ ಲಸಿಕೆ ನೀಡುವಂತೆ ಇಲಾಖೆಯ ಮುಖ್ಯಸ್ಥರು ಆದೇಶಿಸಿದ್ದಾರೆ ಎಂದು ಆರೋಪಿ ಜಿತೇಂದ್ರ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. 
ಒಂದು ಸಿರಿಂಜ್ ಅನ್ನು ಓರ್ವ ವ್ಯಕ್ತಿಗೆ ಮಾತ್ರ ಬಳಸಬೇಕು ಎಂಬ ಬಗ್ಗೆ ನಿಮಗೆ ಅರಿವಿಲ್ಲವೇ? ಎಂಬ ಸುದ್ದಿ ವಾಹಿನಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ನನಗೆ ಅದು ಗೊತ್ತಿತ್ತು. ಆದುದರಿಂದಲೇ ನಾನು ಒಂದೇ ಸಿರಿಂಜ್ ಅನ್ನು ಬಳಸಬೇಕೆ ಎಂದು ಕೇಳಿದ್ದೆ. ಅದಕ್ಕೆ ಅವರು ಹೌದು ಎಂದರು. ಇದರಲ್ಲಿ ನನ್ನ ತಪ್ಪು ಏನಿದೆ. ನನ್ನಲ್ಲಿ ಏನು ಮಾಡಲು ಹೇಳಿದ್ದಾರೊ ಅದನ್ನು ಮಾಡಿದ್ದೇನೆ’’ ಎಂದು ಅವರು ಹೇಳಿದ್ದಾರೆ. 

ಮಕ್ಕಳೊಂದಿಗೆ ಆಗಮಿಸಿದ ಪೋಷಕರು ಇದನ್ನು ಗಮನಿಸಿದರು ಹಾಗೂ ಈ ಬಗ್ಗೆ ಸ್ಥಳೀಯ ಪ್ರಾಧಿಕಾರಕ್ಕೆ ವರದಿ ಮಾಡಿದರು. ಕೂಡಲೇ ರಾಜ್ಯ ಅಧಿಕಾರಿಗಳು ಶಾಲೆಗೆ ಧಾವಿಸಿದ್ದಾರೆ. ಈ ಸಂದರ್ಭ ಜಿತೇಂದ್ರ ನಾಪತ್ತೆಯಾಗಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. 
ಜಿತೇಂದ್ರ ವಿರುದ್ಧ ಮಧ್ಯಪ್ರದೇಶದ ಆರೋಗ್ಯ ಅಧಿಕಾರಿಗಳು ನಿರ್ಲಕ್ಷ್ಯದ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಲಸಿಕಾ ಅಭಿಯಾನಕ್ಕೆ ಸಲಕರಣೆಗಳನ್ನು ಪೂರೈಸಿದ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News