ಶರ್ಜೀಲ್ ಇಮಾಮ್ ಮಧ್ಯಂತರ ಜಾಮೀನು ಅರ್ಜಿ: ದಿಲ್ಲಿ ಪೊಲೀಸರ ನಿಲುವು ಕೇಳಿದ ಹೈಕೋರ್ಟ್

Update: 2022-07-29 09:47 GMT

 ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಜೆಎನ್‍ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಅವರು ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ಕುರಿತಂತೆ ದಿಲ್ಲಿ ಪೊಲೀಸರ ನಿಲುವನ್ನು ದಿಲ್ಲಿ ಹೈಕೋರ್ಟ್ ಇಂದು ಕೇಳಿದೆ.

ತಮ್ಮನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಹಾಗೂ ಪ್ರಕರಣದಲ್ಲಿ ತಮ್ಮ ವಿರುದ್ಧದ ವಿಚಾರಣೆಯನ್ನು ಕೈಬಿಡುವಂತೆ ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಶರ್ಜೀಲ್ ಅವರು ಹೈಕೋರ್ಟ್ ಕದ ತಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಿಲ್ಲಿ ಪೊಲೀಸರ ನಿಲುವು ಕೋರಿ ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಅನೀಶ್ ದಯಾಳ್ ಅವರ ಪೀಠವು ದಿಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ಪ್ರಚೋದನಾತ್ಮಕ ಭಾಷಣ ನೀಡಿದ್ದಾರೆಂಬ ಕಾರಣಕ್ಕೆ ದೇಶದ್ರೋಹದ ಪ್ರಕರಣ ಎದುರಿಸುತ್ತಿರುವ ಶರ್ಜೀಲ್ ಅವರು ಸುಪ್ರೀಂ ಕೋರ್ಟ್ ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124ಎ ವಿಧಿಸುವುದನ್ನು ತಾತ್ಕಾಲಿಕ ತಡೆಯುವಂತೆ ನೀಡಿದ ಆದೇಶವನ್ನು ಮುಂದಿಟ್ಟುಕೊಂಡು ತಮ್ಮನ್ನು ಬಿಡುಗಡೆಗೊಳಿಸಬೇಕೆಂದು ಕೋರಿದ್ದರು.

ಈ ಪ್ರಕರಣದ ವಿಚಾರಣೆಯ ಸ್ಥಿತಿಗತಿ ವರದಿ ಕೇಳಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆಗಸ್ಟ್ 25ಕ್ಕೆ ನಿಗದಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News