ಭಾರೀ ಮಳೆ; ಕಲ್ಲಾಪುನಲ್ಲಿ ಕೃತಕ ನೆರೆಯಿಂದ ಮನೆಗಳು ಜಲಾವೃತ

Update: 2022-07-30 07:56 GMT

ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಕಲ್ಲಾಪು ಪಟ್ಲ ಎಂಬಲ್ಲಿ ಗುಡ್ಡ ಪ್ರದೇಶ ಸಮತಟ್ಟುಗೊಳಿಸಲಾಗಿದ್ದು ನಿನ್ನೆ ರಾತ್ರಿ ಸುರಿದ ಭಾರೀ ಮಳೆಯ ನೀರೆಲ್ಲ ಸ್ಥಳೀಯ ಮನೆಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕಲ್ಲಾಪು ತಗ್ಗು ಪ್ರದೇಶವಾಗಿದ್ದು ನೇತ್ರಾವತಿ ನದಿ ಪಾತ್ರದಲ್ಲಿದೆ. ಇಲ್ಲಿ ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಸ್ಥಳೀಯ ನಿವಾಸಿಗಳು ಪ್ರತೀ ವರ್ಷ ಕೃತಕ ನೆರೆ ಅವಾಂತರಗಳನ್ನು ಅನುಭವಿಸು ವಂತಾಗಿದೆ. ಜನಪ್ರತಿನಿಧಿಗಳು ಗಲ್ಲಿ, ಗಲ್ಲಿಗೆ ಸುಸಜ್ಜಿತ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಿದ್ದರೂ ಸಹ ನೀರು ಹರಿಯಲು ಸಮರ್ಪಕ ಚರಂಡಿಗಳನ್ನೇ ಒದಗಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ತಿಂಗಳಲ್ಲಿ ಸುರಿದ ಮೊದಲ ವರ್ಷಧಾರೆಗೆ ಕಲ್ಲಾಪು ಪ್ರದೇಶದ 50 ಕ್ಕೂ ಹೆಚ್ಚು ಮನೆಗಳು ಕೃತಕ ನೆರೆಯಿಂದ ಜಲಾವೃತಗೊಂಡಿದ್ದವು.

ಇದೀಗ ನಿನ್ನೆ ಸುರಿದ ಭಾರೀ ಮಳೆಗೆ ಕಲ್ಲಾಪಿನ ಪಟ್ಲ,ಮುಡುಪ್ಪೋಡಿ ಪ್ರದೇಶದ ಸುಮಾರು 18 ಮನೆಗಳಿಗೆ  ನೀರು ನುಗ್ಗಿದ್ದು ಬೆಲೆ ಬಾಳುವ ಇನ್ವಾರ್ಟರ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಪೀಠೋಪಕರಣಗಳು ಕೆಟ್ಟು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಗುಡ್ಡ ಪ್ರದೇಶ ಸಮತಟ್ಟುಗೊಳಿಸಿದ್ದರಿಂದ ಅಲ್ಲಿನ ನೀರು ಹರಿದು ಹೋಗಲು ಸಮರ್ಪಕ ಚರಂಡಿ ಇಲ್ಲದೆ ರಸ್ತೆ ಮತ್ತು ಮನೆಗಳ ಒಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆ ನೀರು ಅವಾಂತರ ಸೃಷ್ಟಿಸಿದ ಪ್ರದೇಶಗಳು ಮೂರು ನಗರ ಸದಸ್ಯರು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಸ್ಥಳೀಯ ಕೌನ್ಸಿಲರ್ ಮುಶ್ತಾಕ್ ಪಟ್ಲ ಅವರು ಸ್ಥಳಕ್ಕೆ ಗ್ರಾಮಕರಣಿಕೆ ಶ್ವೇತ ಅವರೊಂದಿಗೆ ಭೇಟಿ ನೀಡಿ ನೀರು ಹರಿದು ಹೋಗಲು ಜೆಸಿಬಿ ಯಂತ್ರದಿಂದ ಕಾಮಗಾರಿ ಆರಂಭಿಸಿದ್ದಾರೆ.

ಶನಿವಾರ ಮುಂಜಾನೆ ಸುರಿದ ಭಾರಿ ಮಳೆಗೆ ಉಳ್ಳಾಲ ವ್ಯಾಪ್ತಿಯಲ್ಲಿ ಮೂರು ಮನೆಗಳು ಹಾನಿಯಾಗಿದೆ. ಉಳ್ಳಾಲದಲ್ಲಿ ನಿರ್ಮಲ ಹಾಗೂ ಲೀಲಾವತಿ ಎಂಬವರ ಮನೆ ಹಾನಿಯಾಗಿದೆ. ಕೃಷ್ಣ ನಗರದಲ್ಲಿ ಆಶಿತ್ ಎಂಬವರ ಮನೆ ಹಾನಿಯಾಗಿದೆ. ಕಲ್ಲಾಪು ಪಟ್ಲದಲ್ಲಿ 18 ಕ್ಕೂ ಹೆಚ್ಚು ಮನೆಗಳು ಜಲಾವೃತ ಗೊಂಡಿವೆ. ಕೆಲವು ಮನೆಗಳಿಗೆ ನೀರು ನುಗ್ಗಿದೆ. ಕಲ್ಲಾಪು ಹಾಲ್ ಗೆ ನೀರು ನುಗ್ಗಿದ್ದು ಕೃತಕ ನೆರೆ ಆವರಿಸಿದೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರೋಡ್  ಮೂರು ಕಟ್ಟೆಯಲ್ಲಿ ಗುಡ್ಡೆ ಜರಿದು ಬಿದ್ದಿದೆ. ಸರಳಾಯ ಕಾಲನಿಯಲ್ಲಿ ಕಾಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ. ಚೇತನ ನಗರ ದಲ್ಲಿ ಐದು ಮನೆಗಳಿಗೆ ನೀರು ನುಗ್ಗಿದ್ದು ಕೃತಕ ನೆರೆ ಆವರಿಸಿದೆ. ಉಚ್ಚಿಲದಲ್ಲಿ ಮನೆಯೊಂದು ಭಾಗಶಃ ಹಾನಿಯಾಗಿದೆ.

ಕಿನ್ಯ ಪಂಚಾಯತ್ ವ್ಯಾಪ್ತಿಯ ಕುರಿಯ ಬ್ರಿಡ್ಜ್ ಬಳಿ ಎರಡು ಮನೆಗಳಿಗೆ ಕೃತಕ ನೆರೆ ಆವರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News