ಜಹಾಂಗೀರಪುರಿ ಹಿಂಸಾಚಾರ: ಶೋಭಾಯಾತ್ರೆಯಲ್ಲಿ ಶಸ್ತ್ರಾಸ್ತ್ರವಿತ್ತು; ಚಾರ್ಜ್‍ಶೀಟ್

Update: 2022-07-30 08:33 GMT

ಹೊಸದಿಲ್ಲಿ: ರಾಜಧಾನಿಯ ಜಹಾಂಗೀರಪುರಿ ಪ್ರದೇಶದಲ್ಲಿ ಈ ವರ್ಷದ ಎಪ್ರಿಲ್ 16 ರಂದು ಹನುಮಾನ್ ಜಯಂತಿ ಸಂದರ್ಭ ನಡೆದ ಶೋಭಾಯಾತ್ರೆ ವೇಳೆ ಉಂಟಾದ ಹಿಂಸಾಚಾರ ಸಂಬಂಧ ದಿಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು, ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವರಲ್ಲಿ ಶಸ್ತ್ರಗಳಿದ್ದವು  ಆದರೆ ಈ ಮೆರವಣಿಗೆಯು ಅದರ ಮೇಲೆ ಮುಸ್ಲಿಮರ ಒಂದು ಗುಂಪು ದಾಳಿ ನಡೆಸುವ ತನಕ ಶಾಂತಿಯುತವಾಗಿತ್ತು ಎಂದು ಹೇಳಿದೆ.

ದಿಲ್ಲಿಯ ರೋಹಿಣಿ ನ್ಯಾಯಾಲಯಲದಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಇನ್ನೊಂದು ಸಮುದಾಯದ ಕುರಿತು ದ್ವೇಷದ ಪೋಸ್ಟ್ ಗಳನ್ನು ಮಾಡುವ ವಾಟ್ಸ್ಯಾಪ್ ಗುಂಪುಗಳಲ್ಲಿ ಆರೋಪಿಗಳಿದ್ದರು ಎಂದು ಅದರಲ್ಲಿ ಹೇಳಲಾಗಿದೆ. ಈ ಚಾರ್ಜ್‍ಶೀಟ್ ಅನ್ನು ಜುಲೈ 14ರಂದು ಸಲ್ಲಿಸಲಾಗಿತ್ತು.

"ಮೆರವಣಿಗೆಯಲ್ಲಿ ಇದ್ದವರ ಕೆಲವರಲ್ಲಿ ಬಂದೂಕು, ಖಡ್ಗ ಮತ್ತು ಕೋಲುಗಳಿದ್ದವು. ಜಮಾ ಮಸೀದಿ ಸಮೀಪ ಬರುವ ತನಕವೂ ಶಾಂತಿಯುತವಾಗಿತ್ತು. ಆದರೆ ಅಲ್ಲಿ  ದಾಳಿ ನಡೆಸಲಾದಾಗ ಮೆರವಣಿಗೆಯಲ್ಲಿದ್ದವರೂ ಅದಕ್ಕೆ ತಕ್ಕಂತೆ ಸ್ಪಂದಿಸಿದ್ದರು" ಎಂದು ಚಾರ್ಜ್‍ಶೀಟ್‍ನಲ್ಲಿ ಹೇಳಲಾಗಿದೆ.

ಈ ಪ್ರಕರಣ ಸಂಬಂಧ ತನಿಖೆಗೆ ಒಳಪಟ್ಟಿರುವ ವಾಟ್ಸ್ಯಾಪ್ ಗ್ರೂಪ್ ಕಬೂತರ್ ಸೆಲ್ ಗ್ರೂಪ್ ಅನ್ನು ಪ್ರಮುಖ ಆರೋಪಿ ತಬ್ರೇಝ್ ಆರಂಬಿಸಿದ್ದ, ಆತ ಮತ್ತು ತಲೆಮರೆಸಿಕೊಂಡಿರುವ ಆತನ ಸಹವರ್ತಿ ಇಶ್ರಾಫಿಲ್  ರಾಜಕೀಯ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರಲ್ಲದೆ ಕೋಮುವಾದಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಆರೋಪಿಗಳ ಪರ ವಕೀಲರು ಈ ಆರೋಪವನ್ನು ನಿರಾಕರಿಸಿದ್ದು ಪೊಲೀಸರ ಚಾರ್ಜ್‍ಶೀಟ್‍ನಲ್ಲಿ ಹಲವು ದೋಷಗಳಿವೆ, ಇದನ್ನು ವಿಚಾರಣೆ ವೇಳೆ ಎತ್ತಲಾಗುವುದು ಎಂದು ಹೇಳಿದ್ದಾರೆ.

ಪೊಲೀಸರು ಪ್ರಮುಖವಾಗಿ ಎರಡು ಸಂದೇಶಗಳನ್ನು ಅವಲಂಬಿಸಿದ್ದು ಎಪ್ರಿಲ್ 14ರಂದು ಕಳುಹಿಸಲಾದ ಮೊದಲ ಸಂದೇಶದಲ್ಲಿ  ʼಅನ್ಯಾಯದ ವಿರುದ್ಧ ಒಂದು ಸಮುದಾಯ ದನಿಯೆತ್ತುವುದಿಲ್ಲ, ಬದಲು ಬರೀ ಹೆಣಗಳನ್ನು ಎತ್ತಿಕೊಳ್ಳುತ್ತದೆ' ಎಂದು ಬರೆಯಲಾಗಿತ್ತು. ಎರಡನೇ ಸಂದೇಶ ಎಪ್ರಿಲ್ 15ರಂದು ಪೋಸ್ಟ್ ಮಾಡಲಾಗಿತ್ತು ಅದರಲ್ಲಿ ಹಿಂದುಗಳಿಗೆ ಮುಸ್ಲಿಮರು ಪ್ರಮುಖವಾಗಿ ಕೋವಿಡ್ ವೇಳೆ ಅಕ್ಸಿಜನ್ ಕೊರತೆ ಎದುರಾದಾಗ ಸಹಾಯ ಮಾಡಿದ್ದರೂ ಹಿಂದುಗಳ ಮನೆಗಳನ್ನು ಟಾರ್ಗೆಟ್ ಮಾಡಲಾಗಿತ್ತು ಎಂದು ಬರೆಯಲಾಗಿದೆ.

ವಾಟ್ಸ್ಯಾಪ್ ಗ್ರೂಪ್‍ನಲ್ಲಿ ಇಂತಹ ಸಂದೇಶ ಬಂದಿದ್ದರೂ ತಬ್ರೇಝ್ ಆ ಗುಂಪನ್ನು ತೊರೆದಿರಲಿಲ್ಲ ಎಂದು ಹೇಳಿರುವ ಪೊಲೀಸರು ಆತನ ಫೋನ್‍ನಿಂದ ಪಡೆಯಲಾದ ಧ್ವನಿ ಸಂದೇಶವೊಂದರಲ್ಲಿ ಆತ ತನ್ನ ಒಬ್ಬ ಸಹವರ್ತಿಗೆ ಮೆರವಣಿಗೆ ನಡೆಸುವವರ ವಿರುದ್ಧ ಸುಳ್ಳು ದೂರು ದಾಖಲಿಸುವುದು ಹೇಗೆ ಹಾಗೂ ಪೊಲೀಸ್ ತನಿಖೆಯನ್ನು ದಾರಿ ತಪ್ಪಿಸುವುದು ಹೇಗೆ ಎಂದು ಕಲಿಸಿದ್ದ ಎಂದು ಹೇಳಿದ್ದಾರೆ.

ಹನುಮಾನ್ ಜಯಂತಿ ಮೆರವಣಿಗೆ ಸಾಗುವ ಪ್ರದೇಶದಲ್ಲಿ ತನ್ನ ತಂದೆ ಸ್ಮರಣಾರ್ಥ ಇಶ್ರಫಿಲ್ ಕಾರ್ಯಕ್ರಮ ಏರ್ಪಡಿಸಿ ಅಲ್ಲಿ ಯಾತ್ರೆಯ ಮೇಲೆ ದಾಳಿ ನಡೆಸಲು ಗರಿಷ್ಠ ಜನರನ್ನು ಸಂಘಟಿಸಿದ್ದ, ಇಬ್ಬರೂ ಅಲ್ಲಿ ತಿಂಡಿಗಳ ಏರ್ಪಾಟು ಕೂಡ ಮಾಡಿ ಅಲ್ಲಿ ತೀಝಾ (ಸಾವಿನ ಮೂರನೇ ದಿನ ನಡೆಸುವ ಕಾರ್ಯಕ್ರಮ) ಇದೆ ಎಂದು ಹೇಳಿ ಹಲವು ಸ್ಥಳೀಯರನ್ನು ಆಹ್ವಾನಿಸಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News