ಬೇಡಿಕೆ ಈಡೇರಿಸಲು ಕೇಂದ್ರ ಸರಕಾರ ವಿಫಲ: ಪಂಜಾಬ್, ಹರ್ಯಾಣದಲ್ಲಿ ರೈತರಿಂದ ರಸ್ತೆ, ರೈಲು ತಡೆ

Update: 2022-07-31 18:11 GMT

ಚಂಡಿಗಢ, ಜು. 31: ಪ್ರಸ್ತುತ ಹಿಂಪಡೆಯಲಾದ ಕೃಷಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ನೀಡಿದ ಭರವಸೆಗಳನ್ನು ಈಡೇರಿಸದ ಕೇಂದ್ರ ಸರಕಾರದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಪಂಜಾಬ್ ಹಾಗೂ ಹರ್ಯಾಣದ ವಿವಿಧ ಸ್ಥಳಗಳಲ್ಲಿ ರೈತರು ರವಿವಾರ ರೈಲು ಹಾಗೂ ವಾಹನ ಸಂಚಾರಕ್ಕೆ ಕೂಡ ತಡೆ ಒಡ್ಡಿದರು.

ಪಂಜಾಬ್‌ನಲ್ಲಿ ಮುಷ್ಕರದ ಕಾರಣಕ್ಕೆ ಭಾರತೀಯ ರೈಲ್ವೆಯ ಫಿರೋಝ್‌ಪುರ ವಿಭಾಗ ಹಲವು ರೈಲುಗಳನ್ನು ರದ್ದುಪಡಿಸಿತು ಅಥವಾ ಪ್ರಯಾಣ ಸಮಯವನ್ನು ಮರು ನಿಗದಿಪಡಿಸಿತು. ಇದರ ಪರಿಣಾಮ ಅಸಂಖ್ಯಾತ ಪ್ರಯಾಣಿಕರು ತೊಂದರೆಗೆ ಒಳಗಾದರು. 
ಸಂಚಾರ ರದ್ದುಪಡಿಸಲಾದ 5 ರೈಲುಗಳಲ್ಲಿ ಅಮೃತಸರ-ಪಠಾಣ್‌ಕೋಟ್, ಅಮೃತಸರ-ಕ್ವಾಡಿಯನ್, ಪಠಾಣ್‌ಕೋಟ್-ವೆರ್ಕಾ  ರೈಲುಗಳು ಸೇರಿವೆ. ‌

ಸಮಯ ಮರು ನಿಗದಿ ಮಾಡಲಾದ 8 ರೈಲುಗಳಲ್ಲಿ ಅಮೃತಸರ-ಜಯನಗರ್, ಅಮೃತಸರ-ಸಿಯಾಲ್‌ದಾಹ್, ಶ್ರೀಮಾತಾ ವೈಷ್ಣೋ ದೇವಿ ಕಾತ್ರಾ-ಹೊಸದಿಲ್ಲಿ, ಅಮೃತಸರ-ಹೊಸದಿಲ್ಲಿ ಹಾಗೂ ಅಮೃತಸರ-ಅಜ್ಮೀರ್ ಎಕ್ಸ್‌ಪ್ರೆಸ್‌ಗಳು ಸೇರಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

6 ಜಿಲ್ಲೆಗಳ 8 ಟೋಲ್ ಪ್ಲಾಝಾಗಳಲ್ಲಿ ಹಾಗೂ ಮಲ್ಲನಪುರದ ಲುದಿಯಾನ-ಫಿರೋಝ್‌ಪುರ ಹೆದ್ದಾರಿ ಸೇರಿದಂತೆ 10 ಹೆದ್ದಾರಿಗಳಲ್ಲಿ ರೈತರು ಧರಣಿ ನಡೆಸಿದ್ದಾರೆ. ಬಠಿಂಡಾ, ಬುಧ್ಲಾದಾ, ಮಾಲೇರ್‌ಕೋಟ್ಲಾದಲ್ಲಿ ರೈಲು ಹಳಿಗಳಲ್ಲಿ ಕುಳಿತು ಧರಣಿ ನಡೆಸಿದ್ದಾರೆ ಎಂದು ಬಿಕೆಯು (ಏಕ್ತಾ ಉಗ್ರಹಾನ್) ಪ್ರಧಾನ ಕಾರ್ಯದರ್ಶಿ ಸುಖ್‌ದೇವ್ ಸಿಂಗ್ ಕೊಕ್ರಿಕಾಲನ್ ಅವರು ಹೇಳಿದ್ದಾರೆ.

ನೆರೆಯ ಹರ್ಯಾಣದ ಹಿಸಾರ್, ಜಜ್ಜಾರ್, ಬಹಾದೂರ್‌ಗಢ, ಟೊಹಾನ, ಸೋನಿಪತ್ ಹಾಗೂ ಕರ್ನಲ್ ಸೇರಿದಂತೆ   ಹಲವು ಸ್ಥಳಗಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿದ್ದಾರೆ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಹಿಸಾರ್‌ನಲ್ಲಿ ಐದು ಟೋಲ್ ಪ್ಲಾಝಾಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು ಹಾಗೂ ಕೇಂದ್ರ ಸರಕಾರದ ಪ್ರತಿಕೃತಿಗಳನ್ನು ದಹಿಸಿದರು. ಸೋನಿಪತ್‌ನಲ್ಲಿ ರೈತರು ಪ್ರತಿಭಟನಾ ರ್ಯಾಲಿ ನಡೆಸಿದರು ಹಾಗೂ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿದರು. ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಸರಕಾರವನ್ನು ಆಗ್ರಹಿಸಿದರು.

ಕರ್ನಾಲ್‌ನ ಟೋಲ್ ಪ್ಲಾಝಾದಲ್ಲಿ ಕೂಡ ರೈತರು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News