ರಾಜಸ್ಥಾನ; ಬಾಲಕಿಯ ಅಪಹರಣ, ಅತ್ಯಾಚಾರ: ತಂದೆ, ಮಗನಿಗೆ 20 ವರ್ಷ ಜೈಲು ಶಿಕ್ಷೆ

Update: 2022-08-01 02:22 GMT

ಕೋಟಾ: ಸೋದರ ಸಂಬಂಧಿ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕ ಹಾಗೂ ಆತನ ತಂದೆಗೆ ಕೋಟಾ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರಿ ಯುವಕನಿಗೆ ನೆರವು ನೀಡಿದ ಕಾರಣಕ್ಕೆ ಮತ್ತು ಆತನನ್ನು ರಕ್ಷಿಸಿದ ಕಾರಣಕ್ಕೆ ತಂದೆಗೂ ಶಿಕ್ಷೆ ವಿಧಿಸಲಾಗಿದೆ. ಇಬ್ಬರು ಆರೋಪಿಗಳಿಗೆ ಕ್ರಮವಾಗಿ 30 ಸಾವಿರ ಮತ್ತು 20 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. 2019ರಲ್ಲಿ ಈ ಅತ್ಯಾಚಾರ ಘಟನೆ ನಡೆದಿತ್ತು.

ಪೋಕ್ಸೋ ನ್ಯಾಯಾಧೀಶ ದೀಪಕ್ ದುಬೆ ಈ ಐತಿಹಾಸಿಕ ತೀರ್ಪು ನೀಡಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಲಲಿತ್ ಶರ್ಮಾ ಹೇಳಿದ್ದಾರೆ.

ಕೋಟಾದ ಅನಂತಪುರ ಪ್ರದೇಶದಲ್ಲಿ ವಾಸವಿದ್ದ ದಿನಗೂಲಿ ಯುವಕ ತನ್ನ ಸೋದರ ಸಂಬಂಧಿ 13 ವರ್ಷದ ಬಾಲಕಿಯನ್ನು ಆಕೆಯ ಮನೆಯಿಂದ 2019ರ ಜನವರಿ 13ರಂದು ಅಪಹರಿಸಿ ಚಿತ್ತೋರ್ ಜಿಲ್ಲೆಯಲ್ಲಿದ್ದ ತಂದೆಯ ಮನೆಗೆ ಕರೆದೊಯ್ದಿದ್ದ. ಯುವಕ ಹಲವು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆರೋಪಿಗೆ ತಂದೆ ರಕ್ಷಣೆ ನೀಡಿದ್ದಲ್ಲದೇ ಪ್ರಕರಣ ಮುಚ್ಚಿಹಾಕಲು ನೆರವಾಗಿದ್ದರು ಎಂದು ಅಭಿಯೋಜಕರು ಹೇಳಿದ್ದಾರೆ. ಬಾಲಕಿಯ ಅಪಹರಣದ ಹಿನ್ನೆಲೆಯಲ್ಲಿ ಆಕೆಯ ತಂದೆ ಬುದ್ಧದೀತ್ ಠಾಣೆಯಲ್ಲಿ  ದೂರು ನೀಡಿದ್ದರು.

ಒಂದು ತಿಂಗಳ ಬಳಿಕ ಬಾಲಕಿಯನ್ನು ರಕ್ಷಿಸಿದ ಪೊಲೀಸರು, ಆಕೆಯ ಹೇಳಿಕೆಯ ಆಧಾರದಲ್ಲಿ ಯುವಕ ಹಾಗೂ ಆತನ ತಂದೆಯ ವಿರುದ್ಧ ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರನ್ನೂ ಬಂಧಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಪ್ರಕರಣದಲ್ಲಿ 13 ಸಾಕ್ಷಿಗಳನ್ನು ದಾಖಲಿಸಲಾಗಿದ್ದು, 35 ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿತ್ತು ಎಂದು ಅಭಿಯೋಜಕರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ಮೊಹ್ಮದ್ ಪರ್ವೀಝ್ ಖಾನ್ ಎಂಬ ಪುರುಷ ವೈದ್ಯ ನಡೆಸಿದ ಬಗ್ಗೆ ಕೂಡಾ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಇಲಾಖೆಯ ನಿರ್ದೇಶಕರಿಗೆ ಇಲಾಖಾ ಕ್ರಮ ಆರಂಭಿಸುವಂತೆ ಸೂಚಿಸಿದೆ. ಬಾಲಕಿಯ ವೈದ್ಯಕೀಯ ತಪಾಸಣೆಯನ್ನು ಪುರುಷ ವೈದ್ಯ ನಡೆಸುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News