ಸಮೂಹ ನಾಶ ಶಸ್ತ್ರಾಸ್ತ್ರಗಳಿಗೆ ಹಣಕಾಸು ಪೂರೈಕೆ ನಿಷೇಧ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ

Update: 2022-08-01 15:19 GMT

ಹೊಸದಿಲ್ಲಿ,ಆ.1: ಸಮೂಹ ನಾಶ ಶಸ್ತ್ರಾಸ್ತ್ರಗಳಿಗೆ ಹಣಕಾಸು ಪೂರೈಕೆಯನ್ನು ನಿಷೇಧಿಸುವ ಮತ್ತು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ಹಣಕಾಸು ಆಸ್ತಿಗಳು ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಸ್ತಂಭನಗೊಳಿಸಲು,ಜಪ್ತಿ ಮಾಡಲು ಸರಕಾರಕ್ಕೆ ಅಧಿಕಾರವನ್ನು ನೀಡುವ ಮಸೂದೆಯನ್ನು ಸಂಸತ್ತು ಸೋಮವಾರ ಅಂಗೀಕರಿಸಿದೆ.

 ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮಂಡಿಸಿದ ಸಮೂಹ ನಾಶ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ 2022 ಅನ್ನು ರಾಜ್ಯಸಭೆಯು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ಬಂಧನ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳ ಮುಂದುವರಿದ ಪ್ರತಿಭಟನೆಗಳ ನಡುವೆಯೇ ಧ್ವನಿಮತದಿಂದ ಅಂಗೀಕರಿಸಿತು.

ಲೋಕಸಭೆಯು ಮಸೂದೆಯನ್ನು ಕಳೆದ ಎಪ್ರಿಲ್ನಲ್ಲಿ ಅಂಗೀಕರಿಸಿತ್ತು.

2005ರಲ್ಲಿ ಅಂಗೀಕರಿಸಲಾಗಿದ್ದ ಸಮೂಹ ನಾಶ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆಯು ಸಮೂಹ ನಾಶ ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ಮಾತ್ರ ನಿಷೇಧಿಸಿತ್ತು.

 ತಿದ್ದುಪಡಿ ಮಸೂದೆಯು ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಹೊಸದಾಗಿ ಕಲಂ 12ಎ ಅನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದೆ. ಯಾವುದೇ ವ್ಯಕ್ತಿಯು ಈ ಕಾಯ್ದೆಯಡಿ ಅಥವಾ ವಿಶ್ವಸಂಸ್ಥೆ (ಭದ್ರತಾ ಮಂಡಳಿ) ಕಾಯ್ದೆ,1947ರಡಿ ಅಥವಾ ಪ್ರಸ್ತುತ ಜಾರಿಯಲ್ಲಿರುವ ಇತರ ಯಾವುದೇ ಸಂಬಂಧಿತ ಕಾಯ್ದೆಯಡಿ ಅಥವಾ ಸಮೂಹ ನಾಶ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಕಾಯ್ದೆಯಡಿ ಹೊರಡಿಸಲಾದ ಆದೇಶದಂತೆ ನಿಷೇಧಿಸಲಾಗಿರುವ ಯಾವುದೇ ಚಟುವಟಿಕೆಗೆ ಹಣಕಾಸನ್ನು ಒದಗಿಸುವಂತಿಲ್ಲ ಎಂದು ಈ ಕಲಂ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News