×
Ad

ಗುಜರಾತ್ ಗಲಭೆ ಸಂತ್ರಸ್ತರ ಪರ ವಹಿಸಿದ್ದಕ್ಕಾಗಿ ಬಲಿಪಶುವನ್ನಾಗಿಸಲಾಗುತ್ತಿದೆ: ಜಾಮೀನು ಅರ್ಜಿ ಸಲ್ಲಿಸಿದ ತೀಸ್ತಾ

Update: 2022-08-02 13:09 IST

ಹೊಸದಿಲ್ಲಿ: ಗುಜರಾತ್‍ನಲ್ಲಿ 2002ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೇಟಲ್ವಾಡ್ ಅವರು ಜಾಮೀನು ಕೋರಿ ಸೋಮವಾರ ಗುಜರಾತ್ ಹೈಕೋರ್ಟ್ ಕದ ತಟ್ಟಿದ್ದಾರೆ.

ಮತೀಯ ಹಿಂಸಾಚಾರ ಪ್ರಕರಣದಲ್ಲಿ ಬಾಧಿತರಾದವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದಕ್ಕಾಗಿ ತನ್ನನ್ನು ಬಲಿಪಶುವನ್ನಾಗಿಸಲಾಗುತ್ತಿದೆ ಎಂದು ತಮ್ಮ ಜಾಮೀನು ಅರ್ಜಿಯಲ್ಲಿ ತೀಸ್ತಾ ಹೇಳಿದ್ದಾರೆ. ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 41ಎ ಅನ್ವಯ ತನಗೆ ನೋಟಿಸ್ ನೀಡದೆಯೇ ತಮ್ಮನ್ನು ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ಆಕೆ ಹೇಳಿದ್ದಾರೆ.

ತಮ್ಮನ್ನು ಕಸ್ಟಡಿಗೆ ಪಡೆಯುವ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿತ್ತು ಹಾಗೂ ಈ ಕುರುತು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾಗಿ ಆಕೆ ಹೇಳಿದ್ದಾರೆ. ತಮ್ಮಲ್ಲಿದ್ದ ಮೂರು ಮೊಬೈಲ್ ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ವಶಪಡಿಸಿಕೊಂಡ ವಸ್ತುಗಳ ಕುರಿತಾದ ವರದಿಯ ಪ್ರತಿಯನ್ನು ತಮಗೆ ನೀಡಿಲ್ಲ ಎಂದು ಆಕೆ ದೂರಿದ್ದಾರೆ.

ಆರೋಪಿಸಿದಂತೆ ತಾವು ಯಾವುದೇ ರಾಜಕೀಯ ನಾಯಕರ ಜೊತೆಗೂಡಿ ಸಂಚು ರೂಪಿಸಿಲ್ಲ ಬದಲು ಗುಜರಾತ್ ಗಲಭೆಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತಾವು ಶ್ರಮಿಸಿದ್ದಾಗಿ ಅವರು ಹೇಳಿದ್ದಾರೆ. ಗಲಭೆಗಳ ಕುರಿತ ಪ್ರಕರಣಗಳ ವಿಚಾರಣೆ ನಡೆಸಿದ ವಿವಿಧ ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ತಾವು ಸುಳ್ಳು ಸಾಕ್ಷ್ಯಾಧಾರ ಸೃಷ್ಟಿಸಿರುವ ಬಗ್ಗೆ ಹೇಳಿಲ್ಲ ಎಂದೂ ಅವರು ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ.

ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾದ ಆರೋಪಗಳಿಗೆ ಯಾವುದೇ ಸಾಕ್ಷ್ಯವಿಲ್ಲ ಎಂದೂ ಆಕೆ ಹೇಳಿದ್ದಾರೆ. ಝಕಿಯಾ ಜಾಫ್ರಿ ಪ್ರಕರಣದ ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟಿನ ಪೀಠ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದಿಷ್ಟವಾಗಿ ಹೇಳಿಲ್ಲ ಎಂದೂ  ತೀಸ್ತಾ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News