ವಿವಾದಿತ ಗೋವಾ ಕೆಫೆಗೆ ನಂಟು ಹೊಂದಿರುವ ಕಂಪೆನಿಯಲ್ಲಿ ಸ್ಮೃತಿ ಇರಾನಿ ಕುಟುಂಬ ಹೂಡಿಕೆ ಮಾಡಿತ್ತು: ಮಾಧ್ಯಮ ವರದಿ

Update: 2022-08-02 10:23 GMT

ಹೊಸದಿಲ್ಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಝೋಯಿಶ್ ಇರಾನಿ ಅವರು ನಡೆಸುತ್ತಿದ್ದಾರೆನ್ನಲಾದ ಸಿಲ್ಲಿ ಸೋಲ್ಸ್ ಗೋವಾ ಕೆಫೆ ಎಂಡ್ ಬಾರ್  ತನ್ನ ಮದ್ಯ ಪರವಾನಗಿಯನ್ನು ಅಕ್ರಮವಾಗಿ ನವೀಕರಣ ಮಾಡಿದೆ ಎಂದು ಕಾಂಗ್ರೆಸ್ ಮಾಡಿದ ಆರೋಪದ ಸುತ್ತ ಹರಡಿಕೊಂಡಿರುವ ವಿವಾದದ ನಡುವೆ ಸ್ಮøತಿ ಇರಾನಿ ಕುಟುಂಬದ ಮೂವರು ಸದಸ್ಯರು ಒಡೆತನ ಹೊಂದಿದ ಕಂಪೆನಿಗಳಿಗೂ ಈ ಕೆಫೆಗೂ ನಂಟು ಇರಬಹುದು ಎಂದು ತಾನು ಪಡೆದುಕೊಂಡಿರುವ ಅಧಿಕೃತ ದಾಖಲೆಗಳಿಂದ ತಿಳಿದು ಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈ ದಾಖಲೆಗಳ ಪ್ರಕಾರ ಸಚಿವೆಯ ಪುತ್ರಿ ಝೋಯಿಶ್ ಇರಾನಿ, ಪುತ್ರ ಝೋಹರ್ ಇರಾನಿ ಮತ್ತು ಪತಿ ಝುಬಿನ್ ಇರಾನಿ ಮತ್ತವರ ಪುತ್ರಿ ಶನೆಲ್ಲೆ ಇರಾನಿ ಇವರು ಉಗ್ರಾಯ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್ ಮತ್ತು ಉಗ್ರಾಯ ಆಗ್ರೋ ಫಾಮ್ರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಎರಡು ಕಂಪೆನಿಗಳನ್ನು ಹೊಂದಿದ್ದಾರೆ ಹಾಗೂ ಈ ಎರಡು ಕಂಪೆನಿಗಳು ಎಯ್ಟಾಲ್ ಫುಡ್ ಎಂಡ್ ಬೆವರೇಜಸ್ ಎಲ್‍ಎಲ್‍ಪಿ ಎಂಬ ಇನ್ನೊಂದು ಕಂಪೆನಿಯಲ್ಲಿ 2020-2021ರಲ್ಲಿ ಹೂಡಿಕೆ ಮಾಡಿದೆ. ಆದರೆ ಸಚಿವೆ ಈ ಯಾವುದೇ ಕಂಪೆನಿಗಳ ಷೇರುಗಳನ್ನು ಹೊಂದಿಲ್ಲ ಎಂದು ದಾಖಲೆಗಳಿಂದ ತಿಳಿದು ಬಂದಿದೆ.

ಜಿಎಸ್‍ಟಿ ದಾಖಲೆಗಳ ಪ್ರಕಾರ ಎಯ್ಟಾಲ್ ಕಂಪೆನಿಯ ಮುಖ್ಯ ಕಾರ್ಯಾಲಯ ಉತ್ತರ ಗೋವಾದ ಅಸ್ಸಗವೋ ಇಲ್ಲಿನ ಬೌಟ ವಡ್ಡೋ ಕಟ್ಟಡದ ತಳ ಅಂತಸ್ತಿನಲ್ಲಿರುವ ಮನೆ ಸಂಖ್ಯೆ 452 ಎಂಬುದಾಗಿದೆ. ಸಿಲ್ಲಿ ಸೋಲ್ಸ್ ಗೋವಾ ಕೆಫೆ ವಿಳಾಸ ಕೂಡ ಅದೇ ಆಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಎಯ್ಟಾಲ್ ಸಂಸ್ಥೆಯ ಒಟ್ಟು ಬಂಡವಾಳದಲ್ಲಿ ಶೇ 50ರಷ್ಟು ಅನ್ನು ಉಗ್ರಾಯ ಮರ್ಕಂಟೈಲ್ ಹೂಡಿಕೆ ಮಾಡಿದ್ದರೆ ಉಗ್ರಾಯ ಆಗ್ರೋ ಸಂಸ್ಥೆ ಶೇ 25ರಷ್ಟು ಹೂಡಿಕೆ ಮಾಢಿದೆ ಎಂದು ಈ ಕಂಪೆನಿಗಳು ರಿಜಿಸ್ಟ್ರಾರ್ ಆಫ್ ಕಂಪನೀಸ್‍ಗೆ ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ವರದಿ ಮಾಡಲಾಗಿದೆ.

ಎಯ್ಟಾಲ್ ಸಂಸ್ಥೆಗೆ ಉಗ್ರಾಯ ಮರ್ಕಂಟೈಲ್ ಮತ್ತು ಉಗ್ರಾಯ ಆಗ್ರೋ  ಕಂಪೆನಿಗಳು ತಲಾ ರೂ 20 ಲಕ್ಷ ಹಾಗೂ ರೂ 10 ಲಕ್ಷದ ಅಲ್ಪಾವಧಿ ಸಾಲ ಕೂಡ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಕಾಂಗ್ರೆಸ್ ಈ ಕೆಫೆ ಸಂಬಂಧ ಆರೋಪ ಹೊರಿಸಿ ಸಚಿವೆಯ ರಾಜೀನಾಮೆ ಕೇಳಿತ್ತು. ನಂತರ ಪ್ರತಿಕ್ರಿಯಿಸಿದ್ದ ಝೋಯಿಶ್ ಇರಾನಿ ಅವರ ವಕೀಲ ಕಿರಾತ್ ನಗ್ರಾ ತಮ್ಮ ಕಕ್ಷಿಗಾರೆ ಈ ರೆಸ್ಟಾರೆಂಟ್ ಒಡೆತನವನ್ನು ಹೊಂದಿಲ್ಲ ಹಾಗೂ ಅದನ್ನು ನಡೆಸುತ್ತಲೂ ಇಲ್ಲ ಅವರು ಸಿಲ್ಲಿ ಸೋಲ್ಸ್ ಕೆಫೆಯ ಚೆಫ್ ಅವರೊಂದಿಗೆ ತರಬೇತಿ ಮಾತ್ರ ಪಡೆದಿದ್ದರು ಎಂದು ಹೇಳಿದ್ದರು.

 ಈ ಕೆಫೆಯ ಮದ್ಯ ಪರವಾನಗಿಯನ್ನು ಮೇ 17, 2021 ರಲ್ಲಿ ಮೃತ ಪಟ್ಟ ಮುಂಬೈ ನಿವಾಸಿ ಆಂಟೊನಿ ಡಿ'ಗಾಮ ಅವರ ಹೆಸರಿನಲ್ಲಿ ಪಡೆಯಲಾಗಿತ್ತು. ಗೋವಾ ಅಬಕಾರಿ ಆಯುಕ್ತರ ನೋಟಿಸ್ ಕೂಡ ಇದನ್ನು ಉಲ್ಲೇಖಿಸಿತ್ತು.

ಇಂಡಿಯನ್ ಎಕ್ಸ್‍ಪ್ರೆಸ್ ಪಡೆದುಕೊಂಡ ದಾಖಲೆಗಳ ವಿವರಗಳ ಕುರಿತಂತೆ ಕೆಫೆ ಮಾಲಕ ಡೀನ್ ಡಿ'ಗಾಮ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ ರೆಸ್ಟಾರೆಂಟ್ ಕಾನೂನುಬದ್ಧ ಅಬಕಾರಿ ಪರವಾನಗಿ ಹೊಂದಿದೆ ಎಂದು ಅವರ ವಕೀಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News