ಕರ್ನಾಟಕ,ತಮಿಳುನಾಡು,ಕೇರಳಗಳಲ್ಲಿ ಮುಂದಿನ ಮೂರು ದಿನ ತೀವ್ರ ಮಳೆ ಸಾಧ್ಯತೆ:ಐಎಂಡಿ

Update: 2022-08-04 15:34 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ,ಆ.4: ಕರ್ನಾಟಕ,ತಮಿಳುನಾಡು,ಕೇರಳಗಳಲ್ಲಿ ಮುಂದಿನ ಮೂರು ದಿನಗಳ ಕಾಲ ತೀವ್ರ ಮಳೆ ಮುಂದುವರಿಯುವ ಮತ್ತು ನಂತರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಗುರುವಾರ ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು, ಆ.6ರಿಂದ ಗುಜರಾತ,ಪೂರ್ವ ರಾಜಸ್ಥಾನ,ಮಹಾರಾಷ್ಟ್ರ,ಗೋವಾ, ತೆಲಂಗಾಣ,ಛತ್ತೀಸ್‌ಗಡ,ಒಡಿಶಾ ಮತ್ತು ಮಧ್ಯಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಲಿದೆ ಎಂದು ಹೇಳಿದೆ.

 ಈ ನಡುವೆ ಐಎಂಡಿ ಕೇರಳದಲ್ಲಿ ಕಣ್ಣೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಕಾಸರಗೋಡು ಸೇರಿದಂತೆ ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯು ತನ್ನ ರೆಡ್ ಅಲರ್ಟ್‌ಗಳನ್ನು ಹಿಂದೆಗೆದುಕೊಂಡ 12 ಗಂಟೆಗಳ ಬಳಿಕ ಮತ್ತೆ ಕಟ್ಟೆಚ್ಚರವನ್ನು ಪ್ರಕಟಿಸಿದೆ. ಉತ್ತರ ತಮಿಳುನಾಡು ಸಮೀಪ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಚಂಡಮಾರುತದ ಪ್ರಭಾವ ಇದಕ್ಕೆ ಕಾರಣ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಳಪ್ಪುಝಾ,ಇಡುಕ್ಕಿ, ಪಟ್ಟಣಂತಿಟ್ಟ,ಎರ್ನಾಕುಳಂ ಮತ್ತು ಕೊಟ್ಟಾಯಂಗಳಲ್ಲಿ ಗುರುವಾರ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಎಮ್‌ಜಿ ವಿವಿಯು ಗುರುವಾರ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಿದೆ.

ಕೇರಳ ವಿಪತ್ತು ನಿರ್ವಹಣೆ ಪ್ರಾಧಿಕಾರವು ಭೂಕುಸಿತಗಳು ಸಂಭವಿಸುವ ಎತ್ತರದ ಪ್ರದೇಶಗಳು,ನದಿ ದಂಡೆಗಳು ಮತ್ತು ತಗ್ಗುಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಆಗಸ್ಟ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಸಾಮಾನ್ಯ ಮಳೆಯಾಗಲಿದೆ. ಪಶ್ಚಿಮ ಕರಾವಳಿ ಹೊರತುಪಡಿಸಿ ದಕ್ಷಿಣ ಭಾರತ,ಪಶ್ಚಿಮಮಧ್ಯ ಭಾರತ ಮತ್ತು ವಾಯುವ್ಯ ಭಾರತದ ಹೆಚ್ಚಿನ ಸ್ಥಳಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಪಶ್ಚಿಮ ಕರಾವಳಿಯ ಹೆಚ್ಚಿನ ಸ್ಥಳಗಳಲ್ಲಿ ಹಾಗೂ ಪೂರ್ವಮಧ್ಯ ಭಾರತ,ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ನಿರೀಕ್ಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News