ಹಿಂದುಳಿದ ವರ್ಗಗಳ ಕುರಿತಂತೆ...

Update: 2022-08-05 05:44 GMT

‘‘ಅಸ್ಪೃಶ್ಯರದು ನೋವು ಅದು ಕಣ್ಣಿಗೆ ಕಾಣುತ್ತದೆ. ಆದರೆ ಹಿಂದುಳಿದ ವರ್ಗಗಳದು ಯಾತನೆ, ಅದು ಯಾರ ಕಣ್ಣಿಗೂ ಕಾಣಲ್ಲ, ಅದು ಅನುಭವಿಸುವವರಿಗೇ ಗೊತ್ತು. ಆದ್ದರಿಂದಲೇ ಹಿಂದುಳಿದ ವರ್ಗಗಳು ಜೀವಿಸುವ ಪ್ರದೇಶಗಳು ನನಗೆ ಯಾತನಾ ಶಿಬಿರಗಳಂತೆ ಕಾಣುತ್ತವೆ’’ ಎಂದು ಡಾ.ರಾಮಮನೋಹರ ಲೋಹಿಯಾರವರು ಹಿಂದೆ ಹೇಳಿದ್ದು ಇಂದಿಗೂ ವಾಸ್ತವವಾಗಿ ನಮ್ಮ ಕಣ್ಣ ಮುಂದಿದೆ. ಅತ್ತ ಮೇಲಿನವರೂ ಅಲ್ಲದ ಇತ್ತ ಕೆಳಗಿನವರೂ ಅಲ್ಲದ ಹಿಂದುಳಿದವರು ಸದಾ ತ್ರಿಶಂಕುಗಳಾಗಿ ತೇಲಾಡುವ ಅತಂತ್ರರೂ, ಅಸಂಘಟಿತರೂ ಆಗಿದ್ದಾರೆ. ಇದಕ್ಕೆ ಒಂದೆರಡು ಸಂಘಟಿತ ಜಾತಿಗಳ ಅಪವಾದವಿರಬಹುದಷ್ಟೆ.

ಸಮಾಜದಲ್ಲಿ ಒಂದು ಅಸ್ಮಿತೆ ಅಥವಾ ಸ್ಥಾನಮಾನ ಪಡೆಯಲು ತಮ್ಮ ಜೀವಮಾನವಿಡೀ ಪ್ರಯತ್ನಿಸುತ್ತಲೇ ಇರುವ ಹಿಂದುಳಿದವರು ಲೋಹಿಯಾರವರು ಹೇಳುವಂತೆ ‘‘ಸದಾ ಬ್ರಾಹ್ಮಣೀಕರಣಗೊಳ್ಳಲು ಹಾತೊರೆಯುತ್ತಿರುತ್ತಾರೆ.’’ ಆದ್ದರಿಂದಲೇ ಬಹುತೇಕ ದೇವಸ್ಥಾನಗಳು, ಧಾರ್ಮಿಕ ಕೇಂದ್ರಗಳು ಸದಾ ಗಿಜಿಗಿಡುವುದು ಈ ಹಿಂದುಳಿದವರ ಅತಿಯಾದ ಭಕ್ತಿಯ ಶ್ರದ್ಧೆಯ ಪರಾಕಾಷ್ಠೆಯಿಂದಾಗಿಯೇ!

ಮೇಲ್ಜಾತಿಗಳಿಗೆ ಇರುವ ತಿಳುವಳಿಕೆಯಾಗಲಿ, ಜ್ಞಾನವಾಗಲಿ ಅಥವಾ ಅಸ್ಪೃಶ್ಯರಿಗೆ, ಕೆಳಜಾತಿಗಳಿಗೆ ಇರುವ ಅರಿವಿನ ಹಸಿವಾಗಲಿ ಹಿಂದುಳಿದವರಿಗೆ ಇರುವುದು ವಿರಳ. ಸದಾ ವೈದಿಕರ ಹೆಜ್ಜೆ ಜಾಡಿನತ್ತ ನಡೆಯುವ ಹಿಂದುಳಿದವರು ಸ್ವಲ್ಪವಿದ್ಯಾವಂತರಾದ ತಕ್ಷಣ ತಮ್ಮ ಜಾತಿಯ ದಾಸರನ್ನೂ, ಶರಣರನ್ನೋ, ದಾರ್ಶನಿಕರನ್ನೋ, ತತ್ವಪದಕಾರರನ್ನೋ, ಆರೂಢರನ್ನೂ ಅರಿಯುವ ಪ್ರಯತ್ನ ಮಾಡುವುದೇ ಇಲ್ಲ! ಈ ಕಾರಣದಿಂದಲೇ ಹಿಂದುಳಿದ ವರ್ಗಗಳಿಗೆ ಇನ್ನೂ ಅಂಬೇಡ್ಕರ್ ದಕ್ಕಲೇ ಇಲ್ಲ.

ಅಂತೆಯೇ ಸಂವಿಧಾನದ ಮೂಲ ಆಶಯಗಳಾಗಲಿ ತಮಗೆ ಸಿಗಬೇಕಾದ ಮೂಲಭೂತ ಹಕ್ಕುಗಳೇ ಮುಂತಾದ ಮೀಸಲಾತಿ, ಸರಕಾರಿ ನೆರವು, ಅನುದಾನಗಳ ಪರಿಜ್ಞಾನವೂ ಇಲ್ಲ. ತಮ್ಮ ಹಕ್ಕುಗಳನ್ನು ಯಾರೋ ಕಸಿಯುತ್ತಿದ್ದಾರೆಂಬ ಕನಿಷ್ಠ ಅರಿವೂ ಇಲ್ಲ! ಇಡೀ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾದ ಹಿಂದುಳಿದ ವರ್ಗಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ತಮಗೆ ಸಿಗಬೇಕಾದ ಶೈಕ್ಷಣಿಕ ಹಾಗೂ ಔದ್ಯೋಗಿಕ ಸ್ಥಾನಮಾನಗಳೂ ಸಿಕ್ಕಿಲ್ಲ. ಇನ್ನು ರಾಜಕೀಯ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ!?

ಈ ಯಾವುದರ ಪರಿಜ್ಞಾನವೂ ಇಲ್ಲದ ಹಿಂದುಳಿದ ವರ್ಗಗಳಿಗೆ ಅರಿವು ಮೂಡಿಸುವ ಪ್ರಯತ್ನಗಳೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಲೇ ಇಲ್ಲ. ಆದ್ದರಿಂದಲೇ ಈ ಕುರಿತ ಸಾಹಿತ್ಯ, ಭಾಷಣ, ಬರಹಗಳು ಬರಲೇ ಇಲ್ಲ! ಇಂತಹ ಬರಗೆಟ್ಟ ಹಿನ್ನೆಲೆಯಲ್ಲಿ ‘ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಿದಂತೆ’ ಲಿಂಗಪ್ಪನವರ ‘ಮೀಸಲಾತಿಯ ಒಳನೋಟ’ ಪುಸ್ತಕ ಬಂದಿದೆ. ಈ ಸಂದರ್ಭದಲ್ಲಿ ಈ ಪುಸ್ತಕ ಅದೆಷ್ಟು ಮುಖ್ಯ ಅನ್ನಲಿಕ್ಕೆ ಬಲವಾದ ಕಾರಣಗಳಿವೆ.

ಈ ಪುಸ್ತಕದಲ್ಲಿ 29 ಲೇಖನಗಳಿವೆ. ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುವ ಇಲ್ಲಿನ ಬರಹಗಳೊಂದಿಗೆ ಅವುಗಳಿಗೆ ಪರಿಹಾರಗಳನ್ನು ಸೂಚಿಸುವ, ಇದರ ಮಧ್ಯೆ ಢಾಳಾಗಿ ಕಾಣುವ ಮೇಲ್ವರ್ಗಗಳ ರಾಜಕಾರಣ, ನ್ಯಾಯಾಲಯಗಳ ತೀರ್ಪುಗಳು, ಸಂವಿಧಾನದ ಅನುಚ್ಛೇದಗಳ ಪೂರಕ ವಿಶ್ಲೇಷಣೆ, ಹಿಂದುಳಿದ ವರ್ಗಗಳ ಅಸ್ಮಿತೆಯ ಕುರಿತಂತೆ ಪ್ರತೀ ಲೇಖನದಲ್ಲೂ ವಿಶ್ಲೇಷಿಸಲಾಗಿದೆ.

ಹಿಂದುಳಿದ ವರ್ಗಗಳನ್ನು ಸದಾ ಅತಂತ್ರದಲ್ಲಿ ಇರುವಂತೆ ನೋಡಿಕೊಳ್ಳುವ, ಸಾಕಷ್ಟು ಗೊಂದಲವನ್ನು ಉಂಟುಮಾಡುವ, ಮೀಸಲಾತಿಯ ಜಾರಿಯಲ್ಲಿನ ಸಮಸ್ಯೆಗಳೇ ಮುಂತಾದವುಗಳ ಕುರಿತು ಮೇಲ್ಜಾತಿಗಳ ಹುನ್ನಾರಗಳ ಕುರಿತು ಎಳೆ ಎಳೆಯಾಗಿ ಲಿಂಗಪ್ಪನವರು ವಿಶ್ಲೇಷಿಸುತ್ತಾರೆ. ‘ರಾಜಕೀಯ ಸುಳಿಯಲ್ಲಿ ಸಿಲುಕಿರುವ ಜಾತಿ-ಜನಗಣತಿ’, ‘ಮೀಸಲಾತಿ ಕೋಟಾ ಮತ್ತು ಶೇ. 50ರ ಮಿತಿಯ ಕಟ್ಟಾಜ್ಞೆ’, ‘ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ರಾಜಕಾರಣ’, ‘ಒಳಮೀಸಲಾತಿಯ ಒಳಸುಳಿಗಳು’, ‘ಮರಾಠಾ ಮೀಸಲಾತಿ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ’, ‘ವಿಧಾನ ಪರಿಷತ್ ಸಾಮಾಜಿಕ ನ್ಯಾಯ ಸಾಕಾರಗೊಳ್ಳುವುದೇ?’, ‘ರಾಜಕೀಯ ಪಕ್ಷಗಳೂ ಸಾಮಾಜಿಕ ನ್ಯಾಯವೂ’ ಮುಂತಾದ ಲೇಖನಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನದ ಹಕ್ಕುಗಳು, ಅವುಗಳನ್ನು ಜಾರಿಗೆ ತರುವಲ್ಲಿನ ರಾಜಕಾರಣ ಮತ್ತು ಅದಕ್ಕೆ ಪೂರಕ ಮತ್ತು ಮಾರಕವಾದ ತೀರ್ಪುಗಳ ಬಗ್ಗೆ ವಿಸ್ತೃತವಾಗಿ ಬೆಳಕು ಚೆಲ್ಲುತ್ತಾರೆ. ‘ಅಹಿಂದ’ ಎಂಬ ಶಬ್ದದ ಜೋಡಣೆ ಮಾಡಿದ್ದು ನಾನು. ‘ಅಹಿಂದ’ ಹೋರಾಟವನ್ನು ಮೊದಲ ಬಾರಿಗೆ ಕೋಲಾರದಲ್ಲಿ ಆರಂಭಿಸಿದ್ದು ನಾನು ಮತ್ತು ನನ್ನ ಗೆಳೆಯರು. ಇದಕ್ಕೆ ಸಂಪನ್ಮೂಲಗಳನ್ನು ಹೊಂದಿಸಿದವರು ದಿವಂಗತ ಜಾಲಪ್ಪನವರು. ಕೋಲಾರದಲ್ಲಿ ಮೊದಲ ‘ಅಹಿಂದ’ ಸಮಾವೇಶವನ್ನು ಉದ್ಘಾಟಿಸಿದವರು ಆಗಿನ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು. ನಮ್ಮಂತಹವರು ‘ಅಹಿಂದ’ ಕಟ್ಟಿ ಅದನ್ನು ಮುಂದುವರಿಸುವ ತ್ರಾಣವಿಲ್ಲದೆ ಕೈಬಿಟ್ಟಾಗ ಅದನ್ನು ಕೈಗೆತ್ತಿಕೊಂಡು ಅಧಿಕಾರ ಪಡೆಯುವವರೆಗೆ ಮುಂದುವರಿಸಿದವರು ಸಿದ್ದರಾಮಯ್ಯನವರು. ‘ಅಹಿಂದ ಮರು ಹುಟ್ಟು ಅಗತ್ಯ ಏಕೆ? ಮತ್ತು ಹೇಗೆ?’ ಎಂಬ ಲೇಖನದಲ್ಲಿ ‘ಅಹಿಂದ’ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಹೇಗೆ ಅನ್ಯಾಯವಾಯಿತು ಎಂಬುದನ್ನು ಅಂಕಿ ಅಂಶಗಳ ಸಮೇತ ದಾಖಲಿಸುವ ಲಿಂಗಪ್ಪನವರು ‘ಅಹಿಂದ’ ಮರುಹುಟ್ಟು ಪಡೆಯಬೇಕೆಂಬ ಒತ್ತಾಸೆಯ ಆಶಯವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿಯಲ್ಲಿ ಜಾತಿ ಜನ-ಗಣತಿಯ ಬಗ್ಗೆ, ತೃತೀಯ ಲಿಂಗಿಗಳ ಬಗ್ಗೆ, ಆಯೋಗಗಳ ಸಲಹೆಗಳು ಮತ್ತು ಸರಕಾರದ ನಿರ್ಲಕ್ಷದ ಬಗ್ಗೆ ವಿವರವಾಗಿ ಬರೆಯುತ್ತಾರೆ. ಅಂತೆಯೇ ಉಪ್ಪಾರರ, ಮಡಿವಾಳರಂತಹ ತಳಸಮುದಾಯಗಳ ನೋವುಗಳ ಕುರಿತು ಅತ್ಯಂತ ಆಪ್ತವಾಗಿ ವಿಶ್ಲೇಷಿಸುತ್ತಾರೆ.

ನನಗೆ ಈ ಪುಸ್ತಕ ಈ ಸಂದರ್ಭದಲ್ಲಿ ಇಷ್ಟೊಂದು ಮುಖ್ಯ ಎನಿಸಿದ್ದು ಯಾಕೆಂದರೆ ಲಿಂಗಪ್ಪನವರು ಆಯ್ಕೆ ಮಾಡಿಕೊಂಡ ವಿಶೇಷ ವಿಷಯಗಳು. ಇದಕ್ಕೆ ಪೂರಕವಾಗಿ ಲಿಂಗಪ್ಪನವರ ಕನ್ನಡ ಅತ್ಯಂತ ಸುಲಲಿತವಾಗಿದೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಲಿಂಗಪ್ಪನವರ ನಿರಂತರ ಸಂಶೋಧನೆ ಮತ್ತು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಅನೇಕ ತೀರ್ಪುಗಳ ಅಧ್ಯಯನ, ಅಂತೆಯೇ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳ ಬಗ್ಗೆ ಇವರಿಗಿರುವ ಜ್ಞಾನ ಅಪಾರವಾದುದು.

ನನಗೆ ತಿಳಿದಂತೆ ಕನ್ನಡದಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಇಷ್ಟೊಂದು ವಿವರಗಳಿರುವ ಪುಸ್ತಕ ಇದೊಂದೇ ಅನ್ನಿಸುತ್ತದೆ. ಆದ್ದರಿಂದಲೇ ಇದನ್ನು ಪ್ರತಿಯೊಬ್ಬ ಹಿಂದುಳಿದವರೂ ಓದಬೇಕು. ಇದರ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಇದನ್ನೊಂದು ಆಕರ ಗ್ರಂಥವನ್ನಾಗಿಯೂ ಬಳಸಬಹುದು. ವಕೀಲರಿಗೂ ಇದು ಅತ್ಯಂತ ಉಪಯುಕ್ತ! ಯಾಕೆಂದರೆ ಅನೇಕ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟ ಕೇಸುಗಳನ್ನು ನಿಭಾಯಿಸುವಾಗ ಇಲ್ಲಿರುವ ತೀರ್ಪುಗಳು, ಸರಕಾರಿ ಆದೇಶಗಳು ಮತ್ತು ಆಯೋಗಗಳ ವರದಿಗಳನ್ನು ಬಳಸಿಕೊಳ್ಳಬಹುದು.

(ಮುನ್ನುಡಿಯಿಂದ)

Writer - ಡಾ. ಸಿ.ಎಸ್. ದ್ವಾರಕಾನಾಥ್

contributor

Editor - ಡಾ. ಸಿ.ಎಸ್. ದ್ವಾರಕಾನಾಥ್

contributor

Similar News