ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರ ಪ್ರಕಟ ಆರೋಪ: 'ದಿ ವೀಕ್' ವಿರುದ್ದ ಎಫ್ಐಆರ್ ದಾಖಲಿಸಿದ ಉತ್ತರಪ್ರದೇಶ ಪೊಲೀಸರು

Update: 2022-08-05 14:57 GMT
Photo: Twitter 

ಲಕ್ನೋ: ಹಿಂದೂ ದೇವತೆಗಳಾದ ಶಿವ ಮತ್ತು ಕಾಳಿಯ ಆಕ್ಷೇಪಾರ್ಹ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ʼದಿ ವೀಕ್ʼ ನಿಯತಕಾಲಿಕದ ಸಂಪಾದಕ ಮತ್ತು ಆಡಳಿತ ಮಂಡಳಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಮುಖ್ಯಸ್ಥರಾಗಿರುವ ಬಿಬೆಕ್ ಡೆಬ್ರಾಯ್ ಅವರು ದಿ ವೀಕ್ ಸಂಪಾದಕ ಫಿಲಿಪ್ ಮ್ಯಾಥ್ಯೂ ಅವರಿಗೆ ಬರೆದ ಪತ್ರದಲ್ಲಿ ಕಾಳಿಯ ಅಂಕಣಕ್ಕೆ ಆಯ್ಕೆ ಮಾಡಲಾದ ಚಿತ್ರದಿಂದಾಗಿ ನಿಯತಕಾಲಿಕದೊಂದಿಗಿನ ತಮ್ಮ ಸಂಬಂಧವನ್ನು ಕೊನೆಗೊಳಿಸುವುದಾಗಿ ತಿಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ವಿವಾದಾತ್ಮಕ ಚಿತ್ರವನ್ನು 2022 ರ ಜುಲೈ 24 ರ ಸಂಚಿಕೆಯಲ್ಲಿ 'ಬೆಂಕಿಯ ನಾಲಿಗೆ' ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ" ಎಂದು ಅವರ ಪತ್ರದಲ್ಲಿ ತಿಳಿಸಲಾಗಿದೆ.  “ತಂತ್ರ ಆಧಾರಿತ ಚಿತ್ರಕಲೆಯ ಜತೆಗೂಡಿದ ಚಿತ್ರವಿದೆ.  ಲೇಖನದ ವಿಷಯ ಮತ್ತು ಚಿತ್ರದ ನಡುವೆ ಬಹಳ ದುರ್ಬಲವಾದ ಸಂಬಂಧವಿದೆ.  ಕಾಳಿಯ ಅನೇಕ ಉತ್ತಮ ಚಿತ್ರಣಗಳನ್ನು ನಾನು ಯೋಚಿಸಬಲ್ಲೆ.  ಈ ಚಿತ್ರವನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಲು ಆಯ್ಕೆ ಮಾಡಲಾಗಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

 ಫೇಸ್‌ಬುಕ್‌ನಲ್ಲಿ ಕಲಾವಿದ ಶುದ್ಧಬ್ರತ ಸೇನ್‌ಗುಪ್ತ ಅವರು ವಿವಾದಾತ್ಮಕ ಚಿತ್ರ ಹತ್ತೊಂಬತ್ತನೇ ಶತಮಾನದ ಆರಂಭದ ಕಾಂಗ್ರಾ ಮಿನಿಯೇಚರ್ ಪೇಂಟಿಂಗ್ ಎಂದು ಗುರುತಿಸಿದ್ದಾರೆ, ಅದು ಈಗ ಬಾಲ್ಟಿಮೋರ್‌ನಲ್ಲಿರುವ ವಾಲ್ಟರ್ಸ್ ಆರ್ಟ್ ಮ್ಯೂಸಿಯಂನ ಸಂಗ್ರಹದಲ್ಲಿದೆ ಎಂದು scroll.in ವರದಿ ಮಾಡಿದೆ. 

ಸಂಪಾದಕರು ಮತ್ತು ಆಡಳಿತ ಮಂಡಳಿಯು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಮಾಜಿ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಶರ್ಮಾ ಅವರ ದೂರಿನ ಮೇರೆಗೆ ಕಾನ್ಪುರದ ಕೊತ್ವಾಲಿ ಪೊಲೀಸರು ಮ್ಯಾಗಜೀನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 "ಈ ಆಕ್ಷೇಪಾರ್ಹ ಕೃತ್ಯಕ್ಕೆ ಕಾರಣರಾದ ಸಂಪಾದಕ ಮತ್ತು ಇತರರ ವಿರುದ್ಧ ಕಠಿಷ ಕ್ರಮ ಕೈಗೊಳ್ಳಬೇಕು" ಎಂದು ಶರ್ಮಾ ಪಿಟಿಐಗೆ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ಪ್ರಮೋದ್ ಕುಮಾರ್ ಹೇಳಿದ್ದಾರೆ. ಆರೋಪಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಶುಕ್ರವಾರ ಹಿಂದುತ್ವ ಗುಂಪು ಬಜರಂಗದಳದ ಕಾರ್ಯಕರ್ತರು ಕಾನ್ಪುರದ ಬಡಾ ಚೌರಾಹ ಪ್ರದೇಶದಲ್ಲಿ ಪತ್ರಿಕೆಯ ಪ್ರತಿಗಳನ್ನು ಸುಟ್ಟು ಹಾಕಿ ಅದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News