ತೈವಾನ್ ಮೇಲೆ ಹಾರಿದ ಚೀನಾದ ಕ್ಷಿಪಣಿಗಳು

Update: 2022-08-05 16:35 GMT
Photo: PTI

ಬೀಜಿಂಗ್, ಆ.5: ತೈವಾನ್ ಜಲಸಂಧಿಯ ಬಳಿ ಚೀನಾ ನಡೆಸುತ್ತಿರುವ ಸಮರಾಭ್ಯಾಸದ ಸಂದರ್ಭ ಚೀನಾದ ಕ್ಷಿಪಣಿಗಳು ತೈವಾನ್ ಮೇಲೆ ಹಾರಿವೆ ಎಂದು ವರದಿಯಾಗಿದೆ. ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯಿಂದ ಕೆರಳಿ ಕೆಂಡವಾಗಿರುವ ಚೀನಾ , ತೈವಾನ್ ಸುತ್ತಮುತ್ತ ತೀವ್ರ ಸಮರಾಭ್ಯಾಸ ಆರಂಭಿಸಿ ಅಪಾಯದ ಸಂದೇಶ ರವಾನಿಸಿದೆ. ತೈವಾನ್ನ ಸುತ್ತ 6 ದಿಕ್ಕಿನಲ್ಲಿ ಚೀನಾದ ಸಮರಾಭ್ಯಾಸ ಮುಂದುವರಿದಿರುವುದರಿಂದ ಅತೀ ಹೆಚ್ಚು ಹಡಗು ಸಂಚಾರವಿರುವ ಈ ಜಲಮಾರ್ಗದಲ್ಲಿ ಸಂಚಾರಕ್ಕೆ ತಡೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾನು ಉಡಾಯಿಸಿದ ಕ್ಷಿಪಣಿ ತೈವಾನ್ ಮೇಲಿಂದ ಸಾಗಿರುವ ಬಗ್ಗೆ ಚೀನಾ ಸರಕಾರ ಇದುವರೆಗೆ ದೃಢಪಡಿಸಿಲ್ಲ. ತೈವಾನ್ ಸರಕಾರ ಕೂಡಾ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, 9 ಕ್ಷಿಪಣಿಗಳು ಆಗಸಕ್ಕೆ ನೆಗೆದಿದ್ದು ಇದರಲ್ಲಿ 4 ಕ್ಷಿಪಣಿಗಳು ತೈವಾನ್ ಮೇಲಿಂದ ಹಾರಿ ಹೋಗಿರುವುದಾಗಿ ನಂಬಲಾಗಿದೆ ಎಂದು ಜಪಾನ್ನ ರಕ್ಷಣಾ ಇಲಾಖೆ ಹೇಳಿದೆ. ಜತೆಗೆ, ಚೀನಾ ಪ್ರಯೋಗಿಸಿದ 5 ಕ್ಷಿಪಣಿಗಳು ತನ್ನ ಸಮುದ್ರವ್ಯಾಪ್ತಿಗೆ ಅಪ್ಪಳಿಸಿದ್ದು, ತಕ್ಷಣ ಸಮರಾಭ್ಯಾಸ ಅಂತ್ಯಗೊಳಿಸಬೇಕು ಎಂದು ಚೀನಾವನ್ನು ಆಗ್ರಹಿಸಿದೆ. ಈ ಮಧ್ಯೆ, ‘ಪೀಪಲ್ಸ್ ಲಿಬರೇಷನ್ ಆರ್ಮಿ(ಚೀನಾ ಸೇನೆ)ಯ ಸಾಂಪ್ರದಾಯಿಕ ಕ್ಷಿಪಣಿಗಳು ತೈವಾನ್ ದ್ವೀಪದ ಮೇಲೆ ಹಾದು ಹೋಗುವುದರ ಅರ್ಥವೇನು ? ಎಂಬ ಹ್ಯಾಷ್ಟ್ಯಾಗ್ ಅನ್ನು ಚೀನಾ ಸರಕಾರಿ ಸ್ವಾಮ್ಯದ ಮಾಧ್ಯಮ ಶುಕ್ರವಾರ ಶೇರ್ ಮಾಡಿದ್ದು ಇದು ಟ್ವಿಟರ್ ರೀತಿಯ ಚೀನಾದ ಸಾಮಾಜಿಕ ವೇದಿಕೆ ವೀಬೊದಲ್ಲಿ 43.7 ಮಿಲಿಯನ್ ಜನರ ಗಮನ ಸೆಳೆದಿದೆ.

ನಮ್ಮ ಸಮರಾಭ್ಯಾಸ ಈ ಬಾರಿ ಲೈವ್ ಫೈರಿಂಗ್ ಅನ್ನು ಒಳಗೊಂಡಿತ್ತು ಮತ್ತು ಪ್ರಥಮ ಬಾರಿಗೆ ಅವು ತೈವಾನ್ ದ್ವೀಪವನ್ನು ದಾಟಿದೆ. ನಮ್ಮ ಕ್ಷಿಪಣಿಯ ವಿರುದ್ಧ ಅಮೆರಿಕ ಒದಗಿಸಿದ ಪ್ಯಾಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿದ ವಾಯುಪ್ರದೇಶದ ಮೂಲಕ ಹಾದುಹೋಗಿರುವುದು ಗಮನಾರ್ಹ ಎಂದು ಚೀನಾ ಸೇನೆಗೆ ಸಂಯೋಜಿತಗೊಂಡಿರುವ ನ್ಯಾಷನಲ್ ಡಿಫೆನ್ಸ್ ವಿವಿಯ ಪ್ರೊಫೆಸರ್ ಮೆಂಗ್ ಕ್ಸಿಯಾಂಗ್ಕ್ವಿಂಗ್ ಚೀನಾ ಸೇನೆಯ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಇದು ತೈವಾನ್ ದ್ವೀಪಕ್ಕೆ ಅತೀ ಸನಿಹದಲ್ಲಿ ಪಿಎಲ್ಎ ನಡೆಸಿದ ಸಮರಾಭ್ಯಾಸವಾಗಿದ್ದು ತೈವಾನ್ ದ್ವೀಪವನ್ನು ಸುತ್ತುವರಿದು ಅತೀ ಸನಿಹದಲ್ಲಿ ಲೈವ್ ಫೈರಿಂಗ್ ನಡೆಸಲಾಗಿದೆ ಎಂದವರು ಹೇಳಿದ್ದಾರೆ. ಈ ಸಮರಾಭ್ಯಾಸದಲ್ಲಿ ಸೇನೆಯ ಫೈಟರ್ಸ್ ಮತ್ತು ಬಾಂಬರ್ಸ್ ಸೇರಿದಂತೆ 100ಕ್ಕೂ ಅಧಿಕ ಯುದ್ಧವಿಮಾನಗಳು ಹಾರಾಟ ನಡೆಸಿದೆ. ಜತೆಗೆ 10ಕ್ಕೂ ಅಧಿಕ ಯುದ್ಧನೌಕೆಗಳು ಪಾಲ್ಗೊಂಡಿವೆ. ಈ ಸಮರಾಭ್ಯಾಸ ರವಿವಾರ ಅಪರಾಹ್ನದವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ. ತೈವಾನ್ ಸುತ್ತುವರಿದು ಚೀನಾ ನಡೆಸುತ್ತಿರುವ ಸಮರಾಭ್ಯಾಸಕ್ಕೆ ಅಮೆರಿಕ, ಜಪಾನ್ ಮತ್ತು ಯುರೋಪಿಯನ್ ಯೂನಿಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದೊಂದು ವಿಪರೀತದ ಪ್ರತಿಕ್ರಿಯೆ ಮತ್ತು ತೈವಾನ್ ಸುತ್ತಮುತ್ತ ಮಿಲಿಟರಿ ಚಟುವಟಿಕೆ ಹೆಚ್ಚಿಸಲು ಒಂದು ನೆಪವಾಗಿದೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಆದರೆ ಚೀನಾ ತನ್ನ ಚಟುವಟಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ತೈವಾನ್ ಒಂಟಿಯಾಗಿಸುವ ಚೀನಾದ ಯತ್ನ ಫಲಿಸದು: ಅಮೆರಿಕ

ಜಾಗತಿಕ ವೇದಿಕೆಯಲ್ಲಿ ತೈವಾನ್ ಅನ್ನು ಪ್ರತ್ಯೇಕಿಸಿ ಒಂಟಿಯಾಗಿಸಲು ಚೀನಾಕ್ಕೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಅಮೆರಿಕದ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ. ಏಶ್ಯಾ ದೇಶಗಳ ಪ್ರವಾಸದ ಅಂಗವಾಗಿ ಜಪಾನ್ ತಲುಪಿರುವ ನ್ಯಾನ್ಸಿ ಪೆಲೋಸಿ, ಅಮೆರಿಕದ ಉನ್ನತ ಮಟ್ಟದ ನಿಯೋಗ ಮುಂದಿನ ದಿನಗಳಲ್ಲೂ ತೈವಾನ್ಗೆ ಭೇಟಿಯನ್ನು ಮುಂದುವರಿಸಲಿದ್ದೇವೆ. ತೈವಾನ್ ಅನ್ನು ಒಬ್ಬಂಟಿಯಾಗಿಸಲು ಅವರಿಗೆ(ಚೀನಾಕ್ಕೆ) ಖಂಡಿತಾ ನಾವು ಆಸ್ಪದ ನೀಡುವುದಿಲ್ಲ ಎಂದರು. ತೈವಾನ್ ಸೇರಿದಂತೆ ಏಶ್ಯಾ ದೇಶಗಳಿಗೆ ತನ್ನ ಭೇಟಿಯು ಈ ಪ್ರದೇಶದ ಯಥಾಸ್ಥಿತಿಯನ್ನು ಬದಲಿಸುವ ಉದ್ದೇಶ ಹೊಂದಿಲ್ಲ. ಇದು ತೈವಾನ್ ಸಂಬಂಧಗಳ ಕಾಯ್ದೆ ಮತ್ತು ಅಮೆರಿಕ-ಚೀನಾ ನೀತಿಗೆ ಅನುಗುಣವಾಗಿದೆ ಎಂದವರು ಪ್ರತಿಪಾದಿಸಿದ್ದಾರೆ. ತೈವಾನ್ ಸಂಬಂಧಗಳ ಕಾಯ್ದೆ ಪ್ರಕಾರ, ತೈವಾನ್ ದ್ವೀಪವು ಸಾಕಷ್ಟು ರಕ್ಷಣಾ ಸಾಮರ್ಥ್ಯವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ಅಮೆರಿಕವನ್ನು ನಿರ್ಬಂಧಿಸುತ್ತದೆ. ಈ ಮಧ್ಯೆ, ಪೆಲೋಸಿ ತೈವಾನ್ನಿಂದ ನಿರ್ಗಮಿಸಿದ ಬಳಿಕ ಚೀನಾವು ತೈವಾನ್ ಸುತ್ತಮುತ್ತಲಿನ ಸಮುದ್ರ ಪ್ರದೇಶವನ್ನು ಗುರಿಯಾಗಿಸಿಕೊಂಡು 11 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ತೈವಾನ್ ಜಲಸಂಧಿಯ ಬಳಿ ಭಾರೀ ಸಮರಾಭ್ಯಾಸ ಆರಂಭಿಸಿರುವ ಚೀನಾದ ಸೇನೆಯ 27 ಯುದ್ಧವಿಮಾನಗಳು ಬುಧವಾರ ತೈವಾನ್ನ ವಾಯುರಕ್ಷಣಾ ವಲಯವನ್ನು ಪ್ರವೇಶಿಸಿದ್ದವು. ಚೀನಾದ ಯುದ್ಧವಿಮಾನಗಳ ಚಟುವಟಿಕೆಯ ಮೇಲೆ ನಿಗಾ ವಹಿಸಲು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಿ, ಯುದ್ಧವಿಮಾನವನ್ನು ರವಾನಿಸುವ ಜತೆಗೆ ರೇಡಿಯೊ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ತೈವಾನ್ನ ರಕ್ಷಣಾ ಇಲಾಖೆ ಹೇಳಿದೆ.

ದುಷ್ಟ ನೆರೆದೇಶ:

ತೈವಾನ್ ಚೀನಾದ ಕ್ಷಿಪಣಿಗಳು ತೈವಾನ್ನ ಮೇಲಿಂದ ಹಾದು ಹೋಗಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ತೈವಾನ್ ‘ಚೀನಾ ನಮ್ಮ ಅತ್ಯಂತ ದುಷ್ಟ ನೆರೆಹೊರೆ’ ಎಂದು ವ್ಯಾಖ್ಯಾನಿಸಿದೆ. ತೈವಾನ್ನ ದುಷ್ಟ ನೆರೆಹೊರೆಯವರು ನಮ್ಮ ಬಾಗಿಲಲ್ಲಿ ತಮ್ಮ ಶಕ್ತಿಯನ್ನು ತೋರುತ್ತಿದ್ದಾರೆ ಎಂದು ತೈವಾನ್ನ ಪ್ರೀಮಿಯರ್ ಸು-ತ್ಸೆಂಗ್ ಚಾಂಗ್ ಹೇಳಿದ್ದಾರೆ. ತೈಪೆಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನಮ್ಮ ದುಷ್ಟ ನೆರೆಯವರು ತಮ್ಮ ಸಮರಾಭ್ಯಾಸದ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗುವ ಜಲಮಾರ್ಗವನ್ನು ನಿರಂಕುಶವಾಗಿ ನಾಶಪಡಿಸುತ್ತಿದೆ ಎಂದು ಹೇಳಿದರು.

ತೈವಾನ್ ಬಗ್ಗೆ ಹೇಳಿಕೆ ನೀಡಿದ ಕೆನಡಾ ರಾಯಭಾರಿಗೆ ಚೀನಾ ಸಮನ್ಸ್

ಜಿ7 ದೇಶಗಳ ವಿದೇಶಾಂಗ ಸಚಿವರು ತೈವಾನ್ ಬಗ್ಗೆ ನೀಡಿದ ಹೇಳಿಕೆಯಲ್ಲಿ ಕೆನಡಾದ ವಿದೇಶಾಂಗ ಸಚಿವರೂ ಸೇರಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿನ ಕೆನಡಾದ ರಾಜತಾಂತ್ರಿಕ ಜಿಮ್ ನಿಕೆಲ್ರನ್ನು ಕರೆಸಿಕೊಳ್ಳಲಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ. ‘ಚೀನಾದ ಸಹಾಯಕ ವಿದೇಶಾಂಗ ಸಚಿವ ಕ್ಸಿ ಫೆಂಗ್ ಗುರುವಾರ ಕೆನಡಾದ ರಾಜತಾಂತ್ರಿಕ ನಿಕೆಲ್ರನ್ನು ಕಚೇರಿಗೆ ಕರೆಸಿಕೊಂಡು ತೈವಾನ್ ವಿಷಯದಲ್ಲಿ ಕೆನಡಾದ ಪ್ರಮಾದವನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು ಅಥವಾ ಪರಿಣಾಮ ಎದುರಿಸಬೇಕು ಎಂದು ಸೂಚಿಸಿದ್ದಾರೆ’ ಎಂದು ಚೀನಾದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ. ತೈವಾನ್ ಸುತ್ತಮುತ್ತಲಿನ ಉದ್ವಿಗ್ನತೆಯನ್ನು ಶಾಂತಗೊಳಿಸಲು ಕ್ರಮ ಕೈಗೊಳ್ಳುವಂತೆ ಬುಧವಾರ ಜಿ7 ದೇಶಗಳು ಚೀನಾವನ್ನು ಆಗ್ರಹಿಸಿದ ಬಳಿಕ ನಡೆಯುತ್ತಿರುವ ರಾಜತಾಂತ್ರಿಕ ಬೆಳವಣಿಗೆಗಳ ಮುಂದುವರಿದ ಭಾಗ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನ್ಯಾನ್ಸಿ ಪೆಲೋಸಿಗೆ ಚೀನಾ ನಿರ್ಬಂಧ

ತೈವಾನ್ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿಯ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯ ಘೋಷಿಸಿದೆ. ತೈವಾನ್ಗೆ ಭೇಟಿ ನೀಡುವ ಮೂಲಕ ಪೆಲೋಸಿ ಚೀನಾದ ಆಂತರಿಕ ವ್ಯವಹಾರದಲ್ಲಿ ಗಂಭೀರ ಮಟ್ಟದಲ್ಲಿ ಮಧ್ಯಪ್ರವೇಶಿಸುತ್ತಿದ್ದು ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗಂಭೀರವಾಗಿ ದುರ್ಬಲಗೊಳಿಸಿದ್ದಾರೆ. ಆದ್ದರಿಂದ ಪೆಲೋಸಿ ಹಾಗೂ ಅವರ ಕುಟುಂಬದ ನಿಕಟ ಸದಸ್ಯರನ್ನು ನಿರ್ಬಂಧದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. ತನ್ನ ಪ್ರಮುಖ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಹಾಂಕಾಂಗ್ ಹಾಗೂ ಕ್ಸಿನ್ಜಿಯಾಂಗ್ನ ವಾಯವ್ಯ ಪ್ರದೇಶದಲ್ಲಿನ ಮಾನವ ಹಕ್ಕುಗಳ ವಿಷಯದ ಬಗ್ಗೆ ಧ್ವನಿ ಎತ್ತಿದ್ದ ಅಮೆರಿಕದ ಹಲವು ಅಧಿಕಾರಿಗಳ ವಿರುದ್ಧ ಇತ್ತೀಚಿನ ದಿನಗಳಲ್ಲಿ ಚೀನಾ ನಿರ್ಬಂಧ ಜಾರಿಗೊಳಿಸಿದೆ. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಮಾಜಿ ಅಧ್ಯಕ್ಷ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ಸೇರಿದಂತೆ ಹಲವು ಅಧಿಕಾರಿಗಳಿಗೆ ಚೀನಾ ನಿರ್ಬಂಧ ವಿಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News