ಮಧ್ಯಪ್ರದೇಶ: ಗ್ರಾ.ಪಂ. ಚುನಾವಣೆ ಸರಪಂಚ ಆಗಿ ಪತ್ನಿ ಬದಲು ಪ್ರಮಾಣವಚನ ಸ್ವೀಕರಿಸಿದ ಪತಿ; ಆರೋಪ

Update: 2022-08-05 18:06 GMT
Photo : ANI 

ದಾಮೋಹ್ (ಮಧ್ಯಪ್ರದೇಶ), ಆ. 5: ನೂತನ ಸರಪಂಚರಾಗಿ ಆಯ್ಕೆಯಾದ ಮಹಿಳೆಯ ಬದಲು ಆಕೆಯ ಪತಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಹೇಳಲಾದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗ್ರಾಮ ಪಂಚಾಯತ್ ಒಂದರಲ್ಲಿ ನಡೆದಿದೆ.

ಈ ಘಟನೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದು, ವಿಸ್ತೃತ ವರದಿ ನೀಡುವಂತೆ ಜಿಲ್ಲಾಡಳಿತ ಗ್ರಾಮಪಂಚಾಯತ್‌ಗೆ ಸೂಚಿಸಿದೆ. ದಾಮೋಹ್ ಜಿಲ್ಲೆಯ ಗೈಸಾಬಾದ್ ಪಂಚಾಯತ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೂರು ಹಂತದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೋರ್ವರು ಸರಪಂಚರಾಗಿ ಚುನಾಯಿತರಾಗಿದ್ದರು. ಇತರ ಕೆಲವು ಮಹಿಳೆಯರು ಪಂಚರಾಗಿ ಜಯ ಗಳಿಸಿದ್ದರು. 
ಆದರೆ,  ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸರಪಂಚರಾಗಿ ಚುನಾಯಿತರಾಗಿದ್ದ ಮಹಿಳೆಯ ಬದಲು ಆಕೆಯ ಪತಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿವಾದಕ್ಕೆ ಕಾರಣವಾಗಿದೆ.

ಚುನಾಯಿತ ಮಹಿಳಾ ಪ್ರತಿನಿಧಿಯ ಬದಲು ಆಕೆಯ ಪತಿ ಪ್ರಮಾಣ ವಚನ ಸ್ವೀಕರಿಸಲು  ಸಂಬಂಧಿತ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಚುನಾಯಿತ ಸರಪಂಚ ಮಹಿಳೆ ಸ್ಥಳದಲ್ಲಿ ಇರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ತೀವ್ರಗೊಂಡ ಬಳಿಕ ಜಿಲ್ಲಾಡಳಿತ ಸತ್ಯಾಸತ್ಯವನ್ನು ತಿಳಿದು ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ದಾಮೋಹ್ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಅಜಯ್ ಶ್ರೀವಾತ್ಸವ, ಈ ಘಟನೆ ನಿಯಮಕ್ಕೆ ವಿರುದ್ಧವಾಗಿ ನಡೆದಿದೆ. ಪರಿಶೀಲನೆ ನಡೆಸಿದ ಬಳಿಕ ತಪ್ಪೆಸಗಿಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. 

‘‘ಮಹಿಳೆಯ ಬದಲು ಆಕೆಯ ಪತಿ ಪ್ರಮಾಣ ವಚನ ಸ್ವೀಕರಿಸಿದ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದೇವೆ. ಈ ಘಟನೆ ಕುರಿತು ವಿಸ್ತೃತ ವರದಿ ಕೋರಿದ್ದೇವೆ. ವರದಿ ದೊರಕಿದ ಬಳಿಕ ಪಂಚಾಯತ್ ಕಾರ್ಯದರ್ಶಿ ತಪ್ಪಿತಸ್ಥರನ್ನು ಶಿಕ್ಷಿಸಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News