ಆಗಸ್ಟ್ 15ರಂದು ಸರಕಾರಿ ರಜೆ ಬೇಕೇ?

Update: 2022-08-05 18:33 GMT

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದ ಸಂಬಂಧ ‘ಅಮೃತ ಮಹೋತ್ಸವ’ ಆಚರಣೆ ಮಾಡುತ್ತಿದ್ದೇವೆ. ಪ್ರತಿ ಭಾರತೀಯರೂ ಈ ಮಹೋತ್ಸವದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ ಮನೆಯ ಹಬ್ಬದಂತೆ ಆಚರಿಸಲು ಸರಕಾರ ಸೂಚಿಸಿದೆ. ಆ.13ರಿಂದ 15ರವರೆಗೆ ಮೂರು ದಿನಗಳ ಕಾಲ ಎಲ್ಲರ ಮನೆಗಳ ಮೇಲೆ ‘ಹರ್ ಘರ್ ತಿರಂಗಾ’ ಅಭಿಯಾನದಡಿ ತ್ರಿವರ್ಣ ಧ್ವಜವನ್ನು ಹಾರಿಸಲು ಆದೇಶವೂ ಆಗಿದೆ. ಸ್ವಾತಂತ್ರ್ಯದ ಸಂಭ್ರಮಾಚರಣೆಯನ್ನು ತುಂಬ ಅರ್ಥಗರ್ಭಿತವಾಗಿ ಅತ್ಯಂತ ಸಡಗರ ಉತ್ಸಾಹಗಳಿಂದ ಆಚರಿಸಬೇಕೆಂಬ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರ ಅಂದು ಸರಕಾರಿ ರಜೆಯನ್ನು ರದ್ದುಪಡಿಸಿ ಅಲ್ಲಿನ ಸರಕಾರದ ಕಚೇರಿ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಹಾಜರಿದ್ದು ಧ್ವಜಾರೋಹಣ ಮತ್ತಿತರ ಕಾರ್ಯಕ್ರಮಗಳಲ್ಲಿ ಸ್ವಪ್ರೇರಣೆಯಿಂದ ತೊಡಗಿಸಿಕೊಳ್ಳಲು ಆದೇಶ ಮಾಡಿದೆ. ಇದು ಗಮನಿಸಬೇಕಾದ ಸಂಗತಿ. ಅಮೃತಮಹೋತ್ಸವದ ಸ್ವಾತಂತ್ರ್ಯ ಆಚರಣೆ ವಿಶಿಷ್ಟವಾಗಬೇಕಾದರೆ ಸಾರ್ವಜನಿಕರಂತೆ ಸರಕಾರದ ಸಿಬ್ಬಂದಿಯೂ ಈ ಆಚರಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ದಿನಪೂರ್ತಿ ಕಚೇರಿಗಳಲ್ಲಿಯೇ ಸ್ವಾತಂತ್ರ್ಯದ ಹೋರಾಟದ ಧುರೀಣರ ಸ್ಮರಣೆ, ಸ್ವಾತಂತ್ರ್ಯದ ಇತಿಹಾಸಗಳ ಮೆಲುಕು ಹಾಕುವುದು ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಗವಹಿಸಬೇಕು.

  
ಸರಕಾರಿ ಕಚೇರಿಗಳ ಸಿಬ್ಬಂದಿಗೆ ರಜೆ ಘೋಷಿಸಿದರೆ ಅವರು ಪ್ರವಾಸ, ಮನರಂಜನೆ, ವೈಯಕ್ತಿಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಪ್ರಸಂಗಗಳೇ ಜಾಸ್ತಿಯಾಗಿ ಸ್ವಾತಂತ್ರ್ಯಾಚರಣೆಯ ಕ್ರಿಯಾಶೀಲತೆಯು ಇಲ್ಲದಾಗುತ್ತದೆ. ಆಗ ರಜೆ ನೀಡಿದ ಸಾರ್ಥಕತೆಯೂ ಸಿಗುವುದಿಲ್ಲ. ಹಾಗಾಗಿ ಅಮೃತಮಹೋತ್ಸವದ ಸ್ವಾತಂತ್ರ್ಯೋತ್ಸವ ಅರ್ಥಪೂರ್ಣವಾಗಲು ಸರಕಾರವು ಆಗಸ್ಟ್ 15ರಂದು ಸರಕಾರಿ ರಜೆ ರದ್ದುಪಡಿಸುವುದು ಸಮಂಜಸವಾದ ನಿರ್ಧಾರವಾಗುತ್ತದೆ. 

Writer - ಜಿ.ಹೆಚ್.ಸಂಕಪ್ಪ, ಚನ್ನಗಿರಿ

contributor

Editor - ಜಿ.ಹೆಚ್.ಸಂಕಪ್ಪ, ಚನ್ನಗಿರಿ

contributor

Similar News