ಕಾಣೆಯಾಗಿ ಒಂಬತ್ತು ವರ್ಷ, ಏಳು ತಿಂಗಳುಗಳ ಬಳಿಕ ಮರಳಿ ಕುಟುಂಬದ ಮಡಿಲು ಸೇರಿದ ಮುಂಬೈನ ಬಾಲಕಿ

Update: 2022-08-06 13:01 GMT
Photo: Indianexpress.com

ಮುಂಬೈ,ಆ.6: ಕಳೆದ ಒಂಭತ್ತು ವರ್ಷ ಏಳು ತಿಂಗಳುಗಳಿಂದ ನಾಪತ್ತೆಯಾಗಿದ್ದ,ಆಗ ಏಳರ ಹರೆಯದವಳಾಗಿದ್ದ ಮುಂಬೈನ ಬಾಲಕಿ ಕೊನೆಗೂ ಮರಳಿ ತನ್ನ ಕುಟುಂಬದ ಮಡಿಲು ಸೇರಿದ್ದಾಳೆ. ವಿಪರ್ಯಾಸವೆಂದರೆ ಈಗ ಹದಿನಾರರ ಹರೆಯದಲ್ಲಿರುವ ಬಾಲಕಿ ಅಂಧೇರಿ (ಪಶ್ಚಿಮ)ಯಲ್ಲಿರುವ ತನ್ನ ಮನೆಯಿಂದ ಕೇವಲ ಅರ್ಧ ಕಿ.ಮೀ.ದೂರದಲ್ಲಿ ವಾಸವಿದ್ದಳು. ಬಾಲಕಿಯ ಹುಡುಕಾಟಕ್ಕಾಗಿ ನಿವೃತ್ತ ಎಎಸ್ಐ ರಾಜೇಂದ್ರ ಧೋಂಡು ಭೋಸ್ಲೆ (  Rajendra Dhondu Bhosle) ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ. ಸೇವೆಯಿಂದ ನಿವೃತ್ತರಾದ ನಂತರವೂ ಏಳು ವರ್ಷಗಳ ಕಾಲ ಬಾಲಕಿಯನ್ನು ಅವರು ಹುಡುಕುತ್ತಿದ್ದರು. ಬಾಲಕಿ ಹೆತ್ತಮ್ಮನ ಮಡಿಲು ಸೇರುವಂತೆ ಮಾಡಬೇಕೆಂಬ ಅವರ ಮಹದಾಸೆ ಕೊನೆಗೂ ಈಡೇರಿದೆ.

 

ಭೋಸ್ಲೆ 2008-2015ರ ನಡುವೆ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದ 166 ಬಾಲಕಿಯರ ಪ್ರಕರಣಗಳನ್ನು ನಿರ್ವಹಿಸಿದ್ದರು. 2015ರಲ್ಲಿ ಸೇವೆಯಿಂದ ನಿವೃತ್ತರಾಗುವ ಮುನ್ನ ಭೋಸ್ಲೆ ತನ್ನ ತಂಡದೊಂದಿಗೆ 165 ಬಾಲಕಿಯರನ್ನು ಪತ್ತೆ ಹಚ್ಚಿದ್ದರು. ಆದರೆ ಅಂಧೇರಿಯ ಈ ಬಾಲಕಿ ನಂ.166 ಆಗಿ ಉಳಿದುಕೊಂಡಿದ್ದಳು. ಸೇವೆಯಲ್ಲಿದ್ದಾಗ ಎರಡು ವರ್ಷ ಮತ್ತು ನಿವೃತ್ತಿಯ ಬಳಿಕ ಏಳು ವರ್ಷಗಳ ಕಾಲ ಭೋಸ್ಲೆ ಆಕೆಯನ್ನು ಹುಡುಕುತ್ತಲೇ ಇದ್ದರು.

2013,ಜ.22ರಿಂದ ನಾಪತ್ತೆಯಾಗಿದ್ದ ಬಾಲಕಿ ಮೊನ್ನೆ ಗುರುವಾರ ರಾತ್ರಿ 8:20ಕ್ಕೆ ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಂಡಿದ್ದಾಳೆ.
 
ಮಕ್ಕಳಿಲ್ಲದೆ ಹತಾಶರಾಗಿದ್ದ ಜೋಸೆಫ್ ಡಿಸೋಜಾ (50) ಮತ್ತು ಆತನ ಪತ್ನಿ ಸೋನಿ (37) ಬಾಲಕಿಯನ್ನು ಅಪಹರಿಸಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಡಿಸೋಜಾನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಈಗ ಆರರ ಹರೆಯದ ಸ್ವಂತ ಪುತ್ರಿಯಿದ್ದು, ಆಕೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದ್ದರಿಂದ ಪೊಲೀಸರು ಸೋನಿಯನ್ನು ಇನ್ನೂ ಬಂಧಿಸಿಲ್ಲ.

ನಿವೃತ್ತ ಎಎಸ್ಐ ರಾಜೇಂದ್ರ ಧೋಂಡು ಭೋಸ್ಲೆ(Photo: Indianexpress.com)

ಈ ಒಂಭತ್ತು ವರ್ಷ ಏಳು ತಿಂಗಳ ಅವಧಿಯಲ್ಲಿ ಬಹಳಷ್ಟು ಬದಲಾವಣೆಗಳು ನಡೆದು ಹೋಗಿವೆ. ಬಾಲಕಿಯ ತಂದೆ ನಿಧನರಾಗಿದ್ದರೆ ಡಿಸೋಜಾ ದಂಪತಿ ಆಕೆಯನ್ನು ಅಂಧೇರಿ (ಪಶ್ಚಿಮ)ಯಲ್ಲಿಯ ಹೌಸಿಂಗ್ ಸೊಸೈಟಿಯೊಂದರಲ್ಲಿ ಬೇಬಿ ಸಿಟರ್ ಕೆಲಸಕ್ಕೆ ಸೇರಿಸಿದ್ದರು. ತನ್ನ ತಾಯಿ ಮತ್ತು ಚಿಕ್ಕಪ್ಪ ತನ್ನನ್ನು ಭೇಟಿಯಾದಾಗ ಬಾಲಕಿ ತಕ್ಷಣವೇ ಅವರ ಗುರುತು ಹಿಡಿದಿದ್ದಳು. ಪೊಲೀಸರು ದೂರದಿಂದ ತಮ್ಮ ಉಸಿರು ಬಿಗಿಹಿಡಿದು ನೋಡುತ್ತಿದ್ದರೆ, ಬಾಲಕಿ,ಆಕೆಯ ತಾಯಿ ಮತ್ತು ಚಿಕ್ಕಪ್ಪ ಆನಂದಾಶ್ರುಗಳನ್ನು ಸುರಿಸುತ್ತಿದ್ದರು.

2013,ಜ.22 ರಂದು ಬಾಲಕಿ ತನ್ನ ಹಿರಿಯ ಸೋದರನೊಂದಿಗೆ ತಾವು ಓದುತ್ತಿದ್ದ ಮುನ್ಸಿಪಲ್ ಶಾಲೆಗೆ ತೆರಳುತ್ತಿದ್ದಾಗ ಪಾಕೆಟ್ ಮನಿ ಕುರಿತು ಅವರ ನಡುವೆ ಸಣ್ಣ ಜಗಳ ನಡೆದಿತ್ತು. ಬಾಲಕಿ ಶಾಲೆಯ ಸಮೀಪ ಅಡ್ಡಾಡುತ್ತಿದ್ದಾಗ ತಾನು ಆಕೆಯನ್ನು ನೋಡಿದ್ದೆ ಮತ್ತು ಮಗುವಿಗಾಗಿ ತನ್ನ ಕುಟುಂಬದ ಬಯಕೆಗೆ ಆಕೆ ಉತ್ತರವಾಗಿದ್ದಾಳೆ ಎಂದು ತಾನು ಭಾವಿಸಿದ್ದೆ ಎಂದು ಡಿಸೋಜಾ ಪೊಲೀಸರಿಗೆ ತಿಳಿಸಿದ್ದಾನೆ.
 
ಸಂಜೆಯಾದರೂ ಬಾಲಕಿ ಮನೆಗೆ ವಾಪಸಾಗದಿದ್ದಾಗ ಕುಟುಂಬದವರು ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದು,ಎಎಸ್ಐ ಭೋಸ್ಲೆಯವರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಪೊಲೀಸರು ಬಾಲಕಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು,ಮಾಧ್ಯಮಗಳು ಇದನ್ನು ವರದಿ ಮಾಡಿದ್ದವು ಮತ್ತು ಸ್ಥಳೀಯರು ಆಕೆಯ ಹುಡುಕಾಟದಲ್ಲಿ ತೊಡಗಿದ್ದರು. ಇದು ಗೊತ್ತಾದಾಗ ಭೀತಿಗೊಳಗಾಗಿದ್ದ ಡಿಸೋಜಾ ಬಾಲಕಿಯನ್ನು ತನ್ನ ಹುಟ್ಟೂರು,ಕರ್ನಾಟಕದ ರಾಯಚೂರಿನ ಹಾಸ್ಟೆಲ್ವೊಂದರಲ್ಲಿ ಸೇರಿಸಿದ್ದ.

2016ರಲ್ಲಿ ಡಿಸೋಜಾ ದಂಪತಿಗೆ ತಮ್ಮದೇ ಆದ ಮಗು ಜನಿಸಿತ್ತು. ಇಬ್ಬರು ಮಕ್ಕಳನ್ನು ಬೆಳೆಸುವ ವೆಚ್ಚವನ್ನು ಭರಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ಅನಿಸಿದಾಗ ಅವರು ಬಾಲಕಿಯನ್ನು ರಾಯಚೂರಿನಿಂದ ವಾಪಸ್ ಮುಂಬೈಗೆ ಕರೆತಂದು ಬೇಬಿಸಿಟರ್ ಕೆಲಸಕ್ಕೆ ಸೇರಿಸಿದ್ದರು. ವಿಪರ್ಯಾಸವೆಂದರೆ ಡಿಸೋಜಾ ಕುಟುಂಬ ಬಾಲಕಿ ಮೊದಲು ವಾಸವಿದ್ದ ಅಂಧೇರಿ (ಪ)ಯ ಅದೇ ಗಿಲ್ಬರ್ಟ್ ಹಿಲ್ ಪ್ರದೇಶಕ್ಕೆ ತಮ್ಮ ವಾಸ್ತವ್ಯವನ್ನು ಬದಲಿಸಿದ್ದರು.

ಬಾಲಕಿ ಈಗ ದೊಡ್ಡವಳಾಗಿರುವುದರಿಂದ ಆಕೆಯನ್ನು ಯಾರೂ ಗುರುತು ಹಿಡಿಯುವುದಿಲ್ಲವೆಂದು ಡಿಸೋಜಾ ದಂಪತಿ ನಂಬಿದ್ದರು. ಅಲ್ಲದೆ ಅವಳ ನಾಪತ್ತೆ ಪೋಸ್ಟರ್ಗಳು ಎಂದೋ ಮಾಯವಾಗಿದ್ದವು ಮತ್ತು ಆಕೆ ಪ್ರದೇಶದಲ್ಲಿಯ ಯಾರೊಂದಿಗೂ ಮಾತನಾಡದಂತೆ ಅವರು ನೋಡಿಕೊಂಡಿದ್ದರು ಎಂದು ಡಿ.ಎನ್.ನಗರ ಪೊಲೀಸ್ ಠಾಣೆಯ ಸೀನಿಯರ್ ಇನ್ಸ್ಪೆಕ್ಟರ್ ಮಿಲಿಂದ ಕುರ್ಡೆ ತಿಳಿಸಿದರು. ಬಾಲಕಿಯ ಚಿಕ್ಕಪ್ಪ ಹೇಳುವಂತೆ ಸೋನಿ ಆಕೆಯನ್ನು ಥಳಿಸುತ್ತಿದ್ದಳು ಮತ್ತು ಡಿಸೋಜಾ ಪಾನಮತ್ತನಾಗಿ ತಾವು ಆಕೆಯನ್ನು 2013ರಲ್ಲಿ ಎಲ್ಲಿಂದಲೋ ಎತ್ತಿಕೊಂಡು ಬಂದಿದ್ದೆವು ಎಂದು ಹೇಳುತ್ತಿದ್ದ. ಡಿಸೋಜಾ ದಂಪತಿ ತನ್ನ ಹೆತ್ತವರಲ್ಲ ಎನ್ನುವುದನ್ನು ಬಾಲಕಿ ಅರ್ಥ ಮಾಡಿಕೊಂಡಿದ್ದಳು. ಆದರೆ ಆಕೆ ಎಷ್ಟೊಂದು ಹೆದರಿದ್ದಳೆಂದರೆ ಅಲ್ಲಿಂದ ಹೇಗೆ ಪಾರಾಗುವುದು ಎನ್ನುವುದೂ ಆಕೆಗೆ ತಿಳಿದಿರಲಿಲ್ಲ.

ಈ ನಡುವೆ ಭೋಸ್ಲೆ ಬಾಲಕಿಗಾಗಿ ಹುಡುಕಾಡುತ್ತಲೇ ಇದ್ದರು. ಆಕೆಯ ಕುಟುಂಬದ ಸದಸ್ಯರನ್ನು ಭೇಟಿಯಾಗುತ್ತಿದ್ದರು ಮತ್ತು ಹತಾಶರಾಗಿದ್ದ ಅವರಿಗೆ ಬಾಲಕಿಯನ್ನು ತಾನು ಪತ್ತೆ ಹಚ್ಚುವುದಾಗಿ ಭರವಸೆ ನೀಡುತ್ತಿದ್ದರು.

ಕೊನೆಗೂ ಕಳೆದ ಏಳು ತಿಂಗಳುಗಳಿಂದ ಬಾಲಕಿ ಬೇಬಿ ಸಿಟರ್ ಆಗಿ ಕೆಲಸ ಮಾಡುತ್ತಿದ್ದ ಮನೆಯ ಕೆಲಸದಾಳು ಆಕೆಯ ನೆರವಿಗೆ ಬಂದಿದ್ದಳು. ಬಾಲಕಿಯ ಕಥೆಯನ್ನು ಕೇಳಿದ ಬಳಿಕ ಆಕೆ ಡಿಸೋಜಾ ಹೇಳಿದ್ದಂತೆ 2013ರಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಹೆಸರನ್ನು ಗೂಗಲ್ನಲ್ಲಿ ಹುಡುಕಾಡಿದ್ದಳು. ಅಲ್ಲಿ ಬಾಲಕಿ ನಾಪತ್ತೆಯಾದ ನಂತರದ ಮಾಧ್ಯಮಗಳಲ್ಲಿಯ ವರದಿಗಳು ಮತ್ತು ಆಕೆಯ ಹುಡುಕಾಟಕ್ಕಾಗಿ ಪ್ರಯತ್ನಗಳ ಬಗ್ಗೆ ಮಾಹಿತಿ ಆಕೆಗೆ ಲಭಿಸಿದ್ದವು.

ಗೂಗಲ್ನಲ್ಲಿಯ ಚಿತ್ರಗಳನ್ನು ಕಂಡ ಬಳಿಕ ತಾನು ಇದೇ ಪ್ರದೇಶದಲ್ಲಿ ವಾಸವಿದ್ದೆ ಎನ್ನುವುದು ಸೇರಿದಂತೆ ಪ್ರತಿಯೊಂದೂ ಬಾಲಕಿಗೆ ನೆನಪಾಗಿತ್ತು. ಗೂಗಲ್ ಹುಡುಕಾಟದಲ್ಲಿ ಐದು ಸಂಪರ್ಕ ದೂರವಾಣಿ ಸಂಖ್ಯೆಗಳಿದ್ದ ನಾಪತ್ತೆ ಪೋಸ್ಟರ್ವೊಂದು ಕೂಡ ಕಂಡು ಬಂದಿತ್ತು. ನಾಲ್ಕು ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿದ್ದರಾದರೂ ಅದು ಕೆಲಸ ಮಾಡಿರಲಿಲ್ಲ,ಕೊನೆಯದಾಗಿ ಐದನೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅದು ರಿಂಗಣಿಸಿತ್ತು ಮತ್ತು ಅದು ಬಾಲಕಿಯ ನೆರೆಯ ನಿವಾಸಿ ರಫೀಕ್ ಅವರ ಫೋನ್ ಆಗಿತ್ತು.

ಮೊದಲ ಬಾರಿಗೆ ಕರೆಯನ್ನು ಸ್ವೀಕರಿಸಿದ್ದಾಗ ವರ್ಷಗಳಿಂದಲೂ ತನ್ನ ದೂರವಾಣಿಗೆ ಇಂತಹ ಹಲವಾರು ಕರೆಗಳನ್ನು ಸ್ವೀಕರಿಸಿದ್ದ ರಫೀಕ್ ಸಂಶಯದಲ್ಲಿಯೇ ಇದ್ದರು. ದೃಢೀಕರಣಕ್ಕಾಗಿ ಬಾಲಕಿಯ ಚಿತ್ರವನ್ನು ಅವರು ಕೋರಿದ್ದರು. ಗುರುವಾರ ಬೆಳಿಗ್ಗೆ ಬಾಲಕಿ ಮತ್ತು ಮನೆಕೆಲಸದ ಮಹಿಳೆ ರಫೀಕ್‌ಗೆ ವೀಡಿಯೊ ಕರೆಯನ್ನು ಮಾಡಿದ್ದರು. ರಫೀಕ್ ಅದರ ಸ್ಕ್ರೀನ್‌ ಶಾಟ್‌ಅನ್ನು ತೆಗೆದುಕೊಂಡು ಬಾಲಕಿಯ ತಾಯಿ ಮತ್ತು ಚಿಕ್ಕಪ್ಪನಿಗೆ ತೋರಿಸಿದ್ದರು.

‘ನಾವು ಆಕೆಯನ್ನು ಗುರುತಿಸಿದ್ದೆವು ಮತ್ತು ತಕ್ಷಣ ಅಳುವಿನಲ್ಲಿ ಮುಳುಗಿದ್ದೆವು ’ಎಂದು ಬಾಲಕಿಯ ಚಿಕ್ಕಪ್ಪ ತಿಳಿಸಿದರು. ಕುಟುಂಬದ ಸದಸ್ಯರು ಬಾಲಕಿ ಬೇಬಿ ಸಿಟರ್ ಆಗಿದ್ದ ಜುಹು ಸೊಸೈಟಿಯ ವಿವರಗಳನ್ನು ಪಡೆದುಕೊಂಡು ಡಿ.ಎನ್.ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

 ಕುಟುಂಬ ಸದಸ್ಯರು ಪೊಲೀಸ್ ತಂಡದೊಂದಿಗೆ ಜುಹು ತಲುಪುತ್ತಿದ್ದಂತೆ ಬಾಲಕಿ ತಾನು ನೋಡಿಕೊಳ್ಳುತ್ತಿದ್ದ ಮಗುವಿಗೆ ವಾಕಿಂಗ್ ಮಾಡಿಸುವ ನೆಪದಲ್ಲಿ ಕೆಳಗಿಳಿದು ಬಂದಿದ್ದಳು. ರಾತ್ರಿ ಸರಿಯಾಗಿ 8:20ಕ್ಕೆ ಒಂಭತ್ತು ವರ್ಷ ಏಳು ತಿಂಗಳುಗಳ ಬಳಿಕ ತಾಯಿ ಮತ್ತು ಮಗಳು ಮೊದಲ ಬಾರಿಗೆ ಭೇಟಿಯಾಗಿದ್ದರು.‘ಮೊದಲು ಕರೆ ಬಂದಾಗ ನಾನದನ್ನು ನಂಬಿಯೇ ಇರಲಿಲ್ಲ, ದೃಢಪಡಿಸಿಕೊಳ್ಳಲು ಸೀನಿಯರ್ ಇನ್ಸ್ಪೆಕ್ಟರ್ ಗೆ ಕರೆ ಮಾಡಿದ್ದೆ. 

ನಾನು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಡಿ.ಎನ್.ನಗರ ಠಾಣೆಯ ಸೀನಿಯರ್ ಇನ್ಸ್ಪೆಕ್ಟರ್ ಆಗಿದ್ದ ವಿ.ಡಿ.ಭೋಯಿತೆ ಅವರಿಗೆ ಕರೆ ಮಾಡಿದ್ದೆ. ‘ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೀರಿ ಮತ್ತು ಶೇ.99ರಷ್ಟು ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿದ್ದೀರಿ. ಉಳಿದ ಶೇ.1 ದೇವರ ಆಶೀರ್ವಾದವಾಗಿದೆ ’ಎಂದು ಅವರು ತನಗೆ ತಿಳಿಸಿದ್ದರು ಎಂದು ಭೋಸ್ಲೆ ಹೇಳಿದರು.

ತನ್ನ ಹುಡುಕಾಟ ಕುರಿತಂತೆ ಭೋಸ್ಲೆ, ನೀವು ಪೊಲೀಸ್ ವೃತ್ತಿಯಿಂದ ನಿವೃತ್ತರಾಗಿರಬಹುದು, ಆದರೆ ಮಾನವೀಯತೆಯು ನಿವೃತ್ತಿಯೊಂದಿಗೆ ಅಂತ್ಯಗೊಳ್ಳುವಂಥದ್ದಲ್ಲ. ಅದು ನೀವು ಬದುಕಿರುವರೆಗೂ ಇರುತ್ತದೆ. ಮಗಳನ್ನು ಕಳೆದುಕೊಂಡ ದುಃಖ ಏನು ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಗೆ ಅದನ್ನು ನೋಡಲಾಗದಿದ್ದರೆ ಆತ ಮಾನವನಾಗಲಾರ ಎಂದು ಹೇಳಿದರು.

ಪೊಲೀಸರು ಅಪಹರಣ,ಮಾನವ ಕಳ್ಳಸಾಗಣೆ,ಅಕ್ರಮ ದಿಗ್ಬಂಧನ ಇತ್ಯಾದಿ ಸೇರಿದಂತೆ ಹಲವಾರು ಆರೋಪಗಳಲ್ಲಿ ಡಿಸೋಜಾ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನಾವಳಿಗಳ ಪರಿಶೀಲನೆಗಾಗಿ ಪೊಲೀಸರು ರಾಯಚೂರಿಗೆ ತಂಡವೊಂದನ್ನೂ ಕಳುಹಿಸಿದ್ದಾರೆ.

ಕೃಪೆ:Theindianexpress

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News