ದೃಶ್ಯ ಪ್ರೇಮಕಾವ್ಯ: ದುಲ್ಕರ್‌ ಸಲ್ಮಾನ್‌ ಅಭಿನಯದ ʼಸೀತಾರಾಮಂʼ ಚಿತ್ರಕ್ಕೆ ನೆಟ್ಟಿಗರ ಬಹುಪರಾಕ್

Update: 2022-08-07 14:27 GMT

 ಹೈದರಾಬಾದ್:‌ ಇತ್ತೀಚೆಗೆ ಬಿಡುಗಡೆಯಾದ ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಚಿತ್ರ ʼಸೀತಾ ರಾಮಮ್ʼ ಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಮಳೆಯಾಲಂ ಸೂಪರ್‌ಸ್ಟಾರ್‌ ದುಲ್ಕರ್‌ (Dulquer Salman) ಅವರು ಹಿಂದಿ, ತಮಿಳು ಸೇರಿದಂತೆ ಹಲವು ಚಿತ್ರರಂಗದಲ್ಲಿ ಕೆಲಸ ಮಾಡಿದ್ದು, ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಮೂಲತಃ ಕನ್ನಡಿಗರಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೂ ವಿವಿಧ ಚಿತ್ರರಂಗದ ವೀಕ್ಷಕರು ಅಭಿಮಾನಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರವು ಕುತೂಹಲವನ್ನು ಹುಟ್ಟಿಸಿತ್ತು. ಇದೀಗ ಈ ಚಿತ್ರ ಬಿಡುಗಡೆಯಾಗಿದ್ದು,  ಚಿತ್ರಕ್ಕೆ ಸಕರಾತ್ಮಕ ಸ್ಪಂದನೆಗಳು ಲಭಿಸುತ್ತಿವೆ.

“ಎರಡನೇ ದಿನದಲ್ಲಿ 30-40% ಬೆಳವಣಿಗೆಯ ಭರವಸೆಯನ್ನು ಸೀತಾರಾಮಂ (SitaRamam) ಚಿತ್ರವು ಹುಟ್ಟುಹಾಕಿದೆ. ಈ ಬೆಳವಣಿಗೆ ಮುಂದುವರಿಯಬೇಕು. ವಾರದ ದಿನಗಳಲ್ಲಿ ಚೆನ್ನಾಗಿ ಹಿಡಿದಿಟ್ಟುಕೊಳ್ಳಬೇಕು. ಗಡಿಯನ್ನು ದಾಟಲು ಇತರ ಭಾಷೆಗಳಲ್ಲಿ ಪ್ರದರ್ಶನ ನೀಡಬೇಕು” ಎಂದು ಆಂಧ್ರ ಬಾಕ್ಸ್‌ ಆಫೀಸ್‌ (@AndhraBoxOffice) ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಟ್ವೀಟ್‌ ಮಾಡಿದೆ.  

"#ಸೀತಾರಾಮಂ ಪ್ರೇಕ್ಷಕರ ಹೃದಯದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಎರಡನೇ ದಿನದ ಬುಕಿಂಗ್ ತುಂಬಾ ಚೆನ್ನಾಗಿದೆ. ಮೊದಲ ವಾರದ ಸಂಗ್ರಹವು ದೊಡ್ಡದಾಗಿರುತ್ತವೆ, ಎಕ್ಸೆಲೆಂಟ್” ಎಂದು ಸಿನೆಮಾ ಪತ್ರಕರ್ತ, ವಿಮರ್ಶಕ ರಮೇಶ್‌ ಬಾಲ ಟ್ವೀಟ್‌ ಮಾಡಿದ್ದಾರೆ.

ಚಿತ್ರದ ಕುರಿತು ಹಲವು ನೆಟ್ಟಿಗರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಚಿತ್ರವು ಒಂದು ʼದೃಶ್ಯ ಪ್ರೇಮಕಾವ್ಯʼವಾಗಿದೆ ಎಂದು ಹೊಗಳಿದ್ದಾರೆ. ಚಿತ್ರದಲ್ಲಿ ಬರುವ ಹಲವು ದೃಶ್ಯಗಳು ಕಾವ್ಯಾತ್ಮಕವಾಗಿ ಚಿತ್ರೀಕರಿಸಲಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಹನು ರಾಘವಪುಡಿ ನಿರ್ದೇಶಿಸಿದ ಈ ರೋಮ್ಯಾಂಟಿಕ್ ಡ್ರಾಮಾ ಯುದ್ಧದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದ್ದು, ದುಲ್ಕರ್ ಸಲ್ಮಾನ್ ಸೈನಿಕನಾಗಿ ನಟಿಸಿದ್ದಾರೆ ಎಂದು ಚಿತ್ರ ವಿಮರ್ಷೆಗಳು ಹೇಳಿವೆ.  ಮೃಣಾಲ್ ಠಾಕೂರ್ ಪಾತ್ರವು ದುಲ್ಕರ್‌ ಸಲ್ಮಾನ್‌ ಪಾತ್ರಕ್ಕೆ ಜೋಡಿಯಾಗಿದ್ದು, ರಶ್ಮಿಕಾ ಮಂದಣ್ಣ ಅಫ್ರೀನ್ ಎಂಬ ಮುಸ್ಲಿಂ ಯುವತಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

 ವೈಜಯಂತಿ ಮೂವೀಸ್ ಅಡಿಯಲ್ಲಿ ಅಸ್ವಾನಿ ದತ್ ನಿರ್ಮಿಸಿದ ಸೀತಾ ರಾಮಂ 1970 ರ ದಶಕದಲ್ಲಿ ನಡೆಯುವ ಪ್ರೇಮಕಥೆಯಾಗಿದೆ. ಈ ಚಿತ್ರದ ಮೂಲಕ ಮೃಣಾಲ್ ಠಾಕೂರ್ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮೃಣಾಲ್‌ ಕಪೂರ್‌ ಕೊನೆಯದಾಗಿ ಜರ್ಸಿ ಚಿತ್ರದಲ್ಲಿ ಶಾಹಿದ್ ಕಪೂರ್ ಜೊತೆ ಕಾಣಿಸಿಕೊಂಡಿದ್ದರು. ಮೃಣಾಲ್, ದುಲ್ಕರ್ ಮತ್ತು ರಶ್ಮಿಕಾ ಜೊತೆಗೆ, ಸೀತಾ ರಾಮನ್‌ನಲ್ಲಿ ಗೌತಮ್ ವಾಸುದೇವ್ ಮೆನನ್, ಸುಮಂತ್ ಮತ್ತು ಭೂಮಿಕಾ ಚಾವ್ಲಾ ಕೂಡ ಇದ್ದಾರೆ.

DNAIndia.com ವರದಿ ಪ್ರಕಾರ ಸೀತಾರಾಮಂ ಚಿತ್ರ ಮೊದಲ ದಿನ ಒಟ್ಟಾರೆ 10.6 ಕೋಟಿ ಗಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News