×
Ad

ಭಾರತದ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲೂ ವೆಸ್ಟ್‌ ಇಂಡೀಸ್‌ಗೆ ಸೋಲು

Update: 2022-08-08 07:52 IST
(Photo credit: BCCI Twitter)

ಲೌದೆರ್‍ಹಿಲ್ (ಅಮೆರಿಕ): ಶ್ರೇಯಸ್ ಅಯ್ಯರ್ ಅವರ ಅಮೋಘ 64 ರನ್ ಹಾಗೂ ಸ್ಪಿನ್ನರ್‌ಗಳ ಕೈಚಳಕದಿಂದ ಭಾರತ ಟಿ-20 ಕ್ರಿಕೆಟ್ ತಂಡ ಸಂಪೂರ್ಣ ಏಕಪಪಕ್ಷೀಯ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ 88 ರನ್‍ಗಳ ಜಯ ಸಾಧಿಸಿ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.

ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಹಾಗೂ ದೀಪಕ್ ಹೂಡಾ (25 ಎಸೆತಗಳಲ್ಲಿ 38) ಹಾಗೂ ಹಾರ್ದಿಕ್ ಪಾಂಡ್ಯ (16 ಎಸೆತಗಳಲ್ಲಿ 28) ಅವರ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು.

ಬಳಿಕ ನಾಯಕ ಪಾಂಡ್ಯ ಹೊಸ ಚೆಂಡನ್ನು ಅಕ್ಷರ್ ಪಟೇಲ್ ಕೈಗಿತ್ತರು. ಅಕ್ಷರ್ ಪಟೇಲ್ (3-1-15-3) ಅವರು ಆರಂಭಿಕ ಆಟಗಾರ ಜೇಸನ್ ಹೋಲ್ಡರ್ (0), ಶಮ್ರಹ್ ಬ್ರೂಕ್ಸ್ (13) ಮತ್ತು ದೆವೋನ್ ಥಾಮಸ್ (10) ಅವರ ವಿಕೆಟ್ ಕಬಳಿಸಿ ಭಾರತದ ಮುನ್ನಡೆಗೆ ಕಾರಣರಾದರು.

ವೆಸ್ಟ್ ಇಂಡೀಸ್ ತಂಡ 16 ಓವ‌ರ್‌ಗಳಲ್ಲಿ 100 ರನ್‍ಗಳಿಗೆ ಗಂಟುಮೂಟೆ ಕಟ್ಟಿತು. ಕುಲದೀಪ್ ಯಾದವ್ (4-1-12-3) ಅವರು ನಾಯಕ ನಿಕೋಲಸ್ ಪೂರನ್ (3) ಅವರನ್ನು ಬಲಿ ಪಡೆದ ಬಳಿಕ ವೆಸ್ಟ್ ಇಂಡೀಸ್‍ನ ಜಯದ ಆಸೆ ಸಂಪೂರ್ಣ ಮುಚ್ಚಿತು. ಆದರೂ ಶಿಮ್ರೋನ್ ಹೆತ್ಮಯರ್ (35 ಎಸೆತಗಳಲ್ಲಿ 56) ಏಕಾಂಗಿ ಹೋರಾಟ ನಡೆಸಿ, ತಂಡ ಮೂರಂಕಿ ತಲುಪಲು ಕಾರಣರಾದರು. ರವಿ ಬಿಷ್ಣೋಯಿ (2.4-0-16-4) ಅಂತಿಮವಾಗಿ ಕೈಚಳಕ ತೋರಿದರು. ಎಲ್ಲ 10 ವಿಕೆಟ್‍ಗಳನ್ನು ಸ್ಪಿನ್ನರ್‌ಗಳು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News