ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನೆಯ ಸಂಜಯ್ ರಾವುತ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ

Update: 2022-08-08 14:08 GMT
Photo:PTI

ಮುಂಬೈ,ಆ.8: ಉಪನಗರ ಗೋರೆಗಾಂವ್ನ ಪತ್ರಾ ಚಾಳ್ ಪುನರಭಿವೃದ್ಧಿಯಲ್ಲಿ ಅವ್ಯವಹಾರಗಳ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

ಮನೆ ಆಹಾರ ಮತ್ತು ಔಷಧಿಗಾಗಿ ರಾವುತ್ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿತಾದರೂ,ಅವರಿಗೆ ಹಾಸಿಗೆಯನ್ನು ಒದಗಿಸುವಂತೆ ಆದೇಶಿಸಲು ನಿರಾಕರಿಸಿತು. ಜೈಲಿನ ನಿಯಮಾವಳಿಗಳಂತೆ ಜೈಲು ಅಧಿಕಾರಿಗಳು ಹಾಸಿಗೆಯ ವ್ಯವಸ್ಥೆಯನ್ನು ಮಾಡುತ್ತಾರೆ ಎಂದು ನ್ಯಾಯಾಧೀಶರು ತಿಳಿಸಿದರು.

ಜಾರಿ ನಿರ್ದೇಶನಾಲಯ (ಈ.ಡಿ)ವು ಆ.1ರಂದು 60ರ ಹರೆಯದ ರಾವುತ್ರನ್ನು ಬಂಧಿಸಿತ್ತು. ಅವರ ಈ.ಡಿ.ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ಪಿಎಂಎಲ್ಎ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರೆದುರು ಹಾಜರು ಪಡಿಸಲಾಗಿತ್ತು.

ರಾವುತ್ ಕಸ್ಟಡಿಯನ್ನು ವಿಸ್ತರಿಸುವಂತೆ ಈ.ಡಿ.ಕೋರಲಿಲ್ಲ. ಹೀಗಾಗಿ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು.

ಪತ್ರಾ ಚಾಳ್ ಪುನರಭಿವೃದ್ಧಿಯಲ್ಲಿ ಹಣಕಾಸು ಅವ್ಯವಹಾರಗಳ ಆರೋಪ ಹಾಗೂ ರಾವುತ್ ಪತ್ನಿ ಮತ್ತು ಸಹವರ್ತಿಗಳನ್ನೊಳಗೊಂಡ ಸಂಬಂಧಿತ ಹಣಕಾಸು ವಹಿವಾಟುಗಳ ಕುರಿತು ಈ.ಡಿ.ತನಿಖೆಯನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News