‌ʼಅನಧಿಕೃತ ನಿರ್ಮಾಣʼ: ಪ್ರಶಸ್ತಿ ವಿಜೇತ ಪತ್ರಕರ್ತ, ಸಾಹಿತಿಯ ಮನೆಯನ್ನು ನೆಲಸಮಗೊಳಿಸಲು ನೋಟಿಸ್

Update: 2022-08-08 15:31 GMT
Photo: Facebook/maheshkatare.sugam

ಭೋಪಾಲ್: ಮಧ್ಯಪ್ರದೇಶದ ಖ್ಯಾತ ಕವಿ ಮಹೇಶ್ ಕಟಾರೆ ಸುಗಮ್ ಅವರಿಗೆ ಬೀನಾ ಮುನ್ಸಿಪಲ್ ಕೌನ್ಸಿಲ್ (ಬಿಎಂಸಿ) ನೋಟಿಸ್ ಜಾರಿ ಮಾಡಿದ್ದು, ಅವರ ಮನೆಯನ್ನು "ಅಕ್ರಮವಾಗಿ ನಿರ್ಮಿಸಲಾಗಿದೆ" ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಲ್ಲದ ಕಾರಣ ಅದನ್ನು ನೆಲಸಮಗೊಳಿಸುವುದಾಗಿ ಎಚ್ಚರಿಕೆ ನೀಡಿದೆ ಎಂದು thewire.in ವರದಿ ಮಾಡಿದೆ.

ಕಟಾರೆ ಅವರು 2011 ರಲ್ಲಿ ತಮ್ಮ ಪತ್ನಿ ಮತ್ತು ಮಗನೊಂದಿಗೆ ಮಧುರ್ ಕಾಲೋನಿಗೆ ತೆರಳಿ ವಾಸ ಆರಂಭಿಸಿದ್ದರು. ಈ ಪ್ರದೇಶವು ಸಾಗರ ಜಿಲ್ಲೆಯ BMC ಯ ಚಂದ್ರಶೇಖರ್ ವಾರ್ಡ್ ವ್ಯಾಪ್ತಿಗೆ ಬರುತ್ತದೆ.

ಮನೆ ಅವರ ಪತ್ನಿ ಮೀರಾ ಕಟಾರೆ ಅವರ ಹೆಸರಿನಲ್ಲಿದೆ. ಆದರೆ, ಅವರ ಪುತ್ರ ಪ್ರಭಾತ್ ಕಟಾರೆ (40) ಹೆಸರಿನಲ್ಲಿ ನೋಟಿಸ್ ನೀಡಲಾಗಿದೆ.

ಮನೆಯನ್ನು ಅಕ್ರಮವಾಗಿ ಮತ್ತು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದ್ದು, ಇದು ಮಧ್ಯಪ್ರದೇಶ ಮುನ್ಸಿಪಾಲಿಟಿ ಕಾಯ್ದೆ 1962 ರ ಸೆಕ್ಷನ್ 187 (8) ರ ಉಲ್ಲಂಘನೆಯಾಗಿದೆ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಕಟಾರೆ ಅವರ ನಿವಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆಯೂ ಒತ್ತಾಯಿಸಿದೆ.

ಮಹೇಶ್ ಕಟಾರೆ ದೂರವಾಣಿಯಲ್ಲಿ ದಿ ವೈರ್‌ಗೆ, “ಮನೆಯು ತಾಯಿ ಮೀರಾ ಕಟ್ರೆ ಅವರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದರೂ ಸಹ, ನನ್ನ ಮಗ ಪ್ರಭಾತ್ ಹೆಸರನ್ನು ನೋಟಿಸ್ ನೀಡಲು ಬಳಸಲಾಗಿದೆ. 2011ರ ಮಾ.26ರಂದು ಪಾಲಿಕೆಯಿಂದ ಕಟ್ಟಡ ಬಡಾವಣೆ ಮಂಜೂರಾಗಿದ್ದು, ಅಗತ್ಯ ಕಟ್ಟಡ ಪರವಾನಿಗೆ ಪಡೆದಿದ್ದೇನೆ. ಹೆಚ್ಚುವರಿಯಾಗಿ, ಅಂದಿನಿಂದ ನಾನು ಮನೆ ತೆರಿಗೆಯನ್ನು ಪಾವತಿಸುತ್ತಿದ್ದೇನೆ" ಎಂದು ಅವರು ಹೇಳಿದರು.

ಇದಕ್ಕೆ ಪೂರಕವಾದ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದರು.

ಅವರಿಗೆ ನೋಟಿಸ್ ನೀಡಲಾದ ಕಾರಣದ ಕುರಿತು ಕೇಳಿದಾಗ, ಕಟಾರೆ, “ಮಧುರ್ ಕಾಲೋನಿಯಲ್ಲಿ ಹೆಚ್ಚಿನ ಮನೆಗಳು ಅಕ್ರಮವಾಗಿವೆ, ಆದರೆ ನೋಟಿಸ್ ನನಗೆ ಮಾತ್ರ ನೀಡಲಾಗಿದೆ. 2011ರಲ್ಲಿ ನನ್ನ ಮನೆಯನ್ನು ಇಲ್ಲಿ ನಿರ್ಮಿಸಿದಾಗಿನಿಂದ ಕಾಲೋನಿಯಲ್ಲಿ ರಸ್ತೆ, ನೀರು ಸರಬರಾಜು, ವಿದ್ಯುತ್ ಮತ್ತು ಸೂಕ್ತ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ನಾನು ಪ್ರತಿಭಟಿಸಿದ್ದೇನೆ" ಎಂದು ಹೇಳಿದರು.

ಹಿಂದಿ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಕಟಾರೆ ಅವರು ಅಧಿಕಾರಿ ವರ್ಗಗಳ ವಿರುದ್ಧದ ಕವಿತೆಗಳಿಗೆ ಮತ್ತು ಸ್ಥಳೀಯ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಹೊರಗೆಡಹುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ಹಿಂದಿ ಮತ್ತು ಬುಂದೇಲಿಯಲ್ಲಿ ಬರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News