ಗುಜರಾತ್‍ : ಮಾಹಿತಿ ಹಕ್ಕು ಅರ್ಜಿ ಸಲ್ಲಿಸದಂತೆ 10 ಮಂದಿಗೆ ಜೀವಾವಧಿ ನಿಷೇಧ!

Update: 2022-08-09 02:20 GMT

ಅಹ್ಮದಾಬಾದ್: ಕಳೆದ 18 ತಿಂಗಳಲ್ಲಿ ಗುಜರಾತ್‍ನಲ್ಲಿ 10 ಮಂದಿಗೆ ಕೆಲ ನಿರ್ದಿಷ್ಟ ವಿಷಯಗಳಲ್ಲಿ ಮಾಹಿತಿ ಹಕ್ಕು ಅರ್ಜಿ (ಆರ್‌ಟಿಐ) ಸಲ್ಲಿಸದಂತೆ ಜೀವಿತಾವಧಿಗೆ ನಿಷೇಧ ಹೇರಲಾಗಿದೆ ಎಂದು timesofindia.com ವರದಿ ಮಾಡಿದೆ.

ಇವರ ಮೇಲೆ ನಿಷೇಧ ವಿಧಿಸಲು ಕಾರಣವೆಂದರೆ, ಗುಜರಾತ್ ಮಾಹಿತಿ ಆಯೋಗ (ಜಿಐಸಿ) ಉಲ್ಲೇಖಿಸಿದಂತೆ "ಹಲವು ಪ್ರಶ್ನೆಗಳನ್ನು ಕೇಳಿರುವುದು" "ಜಗಳಗಂಟಿ ಪ್ರಶ್ನೆಗಳನ್ನು ಕೇಳಿರುವುದು" ಮತ್ತು "ಸರ್ಕಾರಿ ಅಧಿಕಾರಿಗಳಿಗೆ ಕಿರುಕುಳ ನೀಡಲು ಆರ್‌ಟಿಐ ಕಾಯ್ದೆಯನ್ನು ಬಳಸಿಕೊಂಡಿರುವುದು"!

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಬಳಿಕ ಇತಿಹಾಸದಲ್ಲೇ ಮೊದಲ ಬಾರಿಗೆ, ವಸತಿ ಸೊಸೈಟಿಗೆ ಸಂಬಂಧಿಸಿದಂತೆ 13 ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಪೆಟ್ಲಾದ್ ಪಟ್ಟಣದ ಅರ್ಜಿದಾರರಾದ ಹಿತೇಶ್ ಪಟೇಲ್ ಹಾಗೂ ಅವರ ಪತ್ನಿಗೆ ಜಿಐಸಿ 5000 ರೂಪಾಯಿ ದಂಡವನ್ನೂ ವಿಧಿಸಿದೆ. "ಆಯೋಗದ ಮುಂದೆ ವಾದ ಮಂಡಿಸುವ ನಾಗರಿಕ ಹಕ್ಕುಗಳನ್ನು ಜಿಐಸಿ ವಾಪಾಸು ಪಡೆದಿದೆ" ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಆರ್‌ಟಿಐ ಸಹಾಯವಾಣಿಯನ್ನು ನಿರ್ವಹಿಸುತ್ತಿರುವ ಮತ್ತು ಆರ್‌ಟಿಐ ಅರ್ಜಿಗಳು ಹಾಗೂ ಸ್ಪಂದನೆಗಳನ್ನು ಅಧ್ಯಯನ ಮಾಡುತ್ತಿರುವ ಮಾಹಿತಿ ಅಧಿಕಾರ್ ಗುಜರಾತ್ ಪಹೇಲ್ ಎಂಬ ಸರ್ಕಾರೇತರ ಸಂಸ್ಥೆ ಈ ಎಲ್ಲ 10 ಪ್ರಕರಣಗಳನ್ನು ವಿಶ್ಲೇಷಿಸಿದೆ. ಈ ಬಗ್ಗೆ ಯಾವುದೇ ಮಾಹಿತಿ ನೀಡದಂತೆ ಅಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

"ಈ ಆದೇಶಗಳು ಕೇವಲ ವಿವಾದಾತ್ಮಕ ಮಾತ್ರವಲ್ಲದೇ ಸಂಪೂರ್ಣ ಕಾನೂನುಬಾಹಿರ; ಇದನ್ನು ಗುಜರಾತ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಬಹುದು" ಎಂದು ಭಾರತದ ಮೊಟ್ಟಮೊದಲ ಮಾಹಿತಿ ಆಯುಕ್ತ ವಜಹತ್ ಹಬೀಬುಲ್ಲಾ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಸೇವಾ ಪುಸ್ತಕ ಮತ್ತು ವೇತನ ವಿವರಗಳ ಪ್ರತಿಯನ್ನು ಕೇಳಿದ ಗಾಂಧಿನಗರ ಪೇತಪುರದ ಅಮಿತ್ ಮಿಶ್ರಾ ಎಂಬ ಶಿಕ್ಷಕಿರೊಬ್ಬರಿಗೂ ಜೀವಿತಾವಧಿ ನಿಷೇಧ ಹೇರಲಾಗಿದೆ. ಇವರ ಅರ್ಜಿಗಳನ್ನು ಪರಿಗಣಿಸಬೇಡಿ ಎಂದು ಮಾಹಿತಿ ಆಯುಕ್ತ ಕೆ.ಎಂ.ಅಧ್ವರ್ಯ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News