ಮುಂಗಾರು ಅಧಿವೇಶನ‌ ಅವಧಿಪೂರ್ವ ಮುಕ್ತಾಯ: ಪ್ರಮುಖ ವಿಷಯಗಳಿಗೆ ಉತ್ತರಿಸದೆ ಬಿಜೆಪಿ ಓಡಿಹೋಗಿದೆ ಎಂದ ಕಾಂಗ್ರೆಸ್

Update: 2022-08-09 14:12 GMT

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನ ನಿಗದಿತ ಸಮಯಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಕೊನೆಗೊಂಡಿದ್ದು, ಬಿಜೆಪಿಯು ರಾಷ್ಟ್ರೀಯ ಪ್ರಮುಖ ವಿಷಯಗಳಿಗೆ ಪ್ರತಿಕ್ರಿಯಿಸದೆ "ಓಡಿಹೋಗಿದೆ" ಎಂದು ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

"ಕಾಂಗ್ರೆಸ್ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಮತ್ತು ಅಗ್ನೀಪಥ್‌ ಯೋಜನೆಯ ಬಗ್ಗೆ ಮಂಡಿಸಲು ಬಯಸಿದೆ" ಎಂದು ಪಕ್ಷದ ಲೋಕಸಭಾ ಸಂಸದ ಗೌರವ್ ಗೊಗೊಯ್ ಮಂಗಳವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. “ಭಾರತ ಮತ್ತು ಚೀನಾ ನಡುವೆ ಸುಮಾರು 16 ಬಾರಿ ಗಡಿ ವಿವಾದಗಳ ಕುರಿತು ಸಭೆಗಳು ನಡೆದಿವೆ ಮತ್ತು ಇಂದು ಭಾರತೀಯ ಸೇನೆಯು ಗಡಿಯಲ್ಲಿ ಗಸ್ತು ತಿರುಗಲು ಸಾಧ್ಯವಿಲ್ಲ. ಬಿಜೆಪಿಯು ಇಂತಹ ವಿಷಯಗಳ ಚರ್ಚೆಯಿಂದ ಓಡಿಹೋಗಲು ಬಯಸಿದೆ” ಎಂದು ಅವರು ಹೇಳಿದ್ದಾರೆ.

 ಅಧಿವೇಶನವನ್ನು ಮೂಲತಃ ಜುಲೈ 18 ಮತ್ತು ಆಗಸ್ಟ್ 12 ರ ನಡುವೆ ನಡೆಸಲು ನಿರ್ಧರಿಸಲಾಗಿತ್ತಾದರೂ, ಪುನರಾರಂಭಕ್ಕೆ ನಿಗದಿತ ದಿನಾಂಕವಿಲ್ಲದೆ ಮುಂದೂಡಲ್ಪಟ್ಟಿದ್ದರಿಂದ ಮಾನ್ಸೂನ್ ಅಧಿವೇಶನ ಸೋಮವಾರ ಕೊನೆಗೊಂಡಿತ್ತು.

 ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರೊಂದಿಗೆ ಮಾತನಾಡಿದ ಗೊಗೊಯ್, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಬಿಜೆಪಿ ಪ್ರಶ್ನೆಗಳನ್ನು ಎದುರಿಸುವುದನ್ನು ತಪ್ಪಿಸಿದೆ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ಇದರ ಬಗ್ಗೆ ಕೇಳಿದಾಗ, ಹಣಕಾಸು ಸಚಿವರು ಉಕ್ರೇನ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇತಿಹಾಸದ ಬಗ್ಗೆ ಮಾತನಾಡುತ್ತಾರೆ, ಆದರೆ ಹಣದುಬ್ಬರದ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅವರ ಬಳಿ ಉತ್ತರವಿಲ್ಲ ಎಂದು ಗೊಗೊಯ್ ಹೇಳಿದರು.

ಸದನದಲ್ಲಿ ಬೆಲೆ ಏರಿಕೆ ವಿಷಯ ಪ್ರಸ್ತಾಪಿಸಿದ ಸಂಸದರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಗೊಗೋಯ್‌, ಜುಲೈ 25 ರಂದು ಲೋಕಸಭೆಯಲ್ಲಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರತಿಭಟನಾತ್ಮಕವಾಗಿ ಫಲಕಗಳನ್ನು ಬಳಸಿದ ನಂತರ ಅಮಾನತುಗೊಂಡ ನಾಲ್ವರು ಕಾಂಗ್ರೆಸ್ ಸಂಸದರನ್ನು ಉಲ್ಲೇಖಿಸಿದ್ದಾರೆ.

"ಇಂದು, ನಾವು ಪ್ರಶ್ನೋತ್ತರ ಅವಧಿಯಲ್ಲಿ ಮಂತ್ರಿಗಳಿಂದ ಬೆದರಿಕೆಗಳನ್ನು ಪಡೆಯುತ್ತೇವೆಯೇ ಹೊರತು, ಉತ್ತರಗಳಲ್ಲ" ಎಂದು ಅವರು ಹೇಳಿದರು. ಕಾರ್ಪೊರೇಟ್ ವ್ಯವಹಾರಗಳ ಸಚಿವೆ (ನಿರ್ಮಲಾ ಸೀತಾರಾಮನ್) ಅವರು ಅಸಂಸದೀಯ ಭಾಷೆ ಬಳಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಗೊಗೋಯ್‌ ಹೇಳಿದರು.

ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿಯನ್ನು ಅಂತ್ಯಗೊಳಿಸಿದ ನಿತೀಶ್‌ ಕುಮಾರ್‌

ಈ ನಡುವೆ, ರಾಜ್ಯಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಆಗಸ್ಟ್ 10 ಮತ್ತು 12 ರಂದು ಪ್ರತಿಪಕ್ಷಗಳು ಚರ್ಚೆಗೆ ಸಿದ್ಧವಾಗಿವೆ, ಆದರೆ ಸರ್ಕಾರದ ಕಡೆಯಿಂದ ಯಾವುದೇ ಉತ್ಸಾಹ ಕಂಡುಬಂದಿಲ್ಲ ಎಂದು ಹೇಳಿದರು.

ಹಣದುಬ್ಬರ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಮೊದಲಾದ ವಿಷಯಗಳ ಬಗ್ಗೆ ಸಂಸತ್ತಿನ ಹೊರಗೆ ಕಾಂಗ್ರೆಸ್‌ ಉತ್ತರವನ್ನು ಕೇಳಲಿದೆ ಎಂದು ರಮೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News