ಚಿಂತೆ ಮಾಡಬೇಕಿಲ್ಲ ಎಂದು ನಿತೀಶ್ ಕುಮಾರ್ ಎರಡು ದಿನಗಳ ಹಿಂದೆ ಅಮಿತ್ ಶಾಗೆ ಹೇಳಿದ್ದರು: ಬಿಜೆಪಿ

Update: 2022-08-10 17:48 GMT

ಹೊಸದಿಲ್ಲಿ/ಪಾಟ್ನಾ,ಆ.10: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಸಖ್ಯವನ್ನು ಕಡಿದುಕೊಳ್ಳುವ ಒಂದು ದಿನ ಮೊದಲು ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ದೂರವಾಣಿ ಕರೆಯನ್ನು ಮಾಡಿದ್ದರು ಮತ್ತು ಚಿಂತೆ ಪಡಬೇಕಾದ್ದು ಏನೂ ಇಲ್ಲ ಎಂದು ನಿತೀಶ್ ಆ ವೇಳೆ ಭರವಸೆ ನೀಡಿದ್ದರು ಎಂದು ಹಿರಿಯ ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದರು. 

ತನ್ಮೂಲಕ ಮೈತ್ರಿಯನ್ನು ಉಳಿಸಿಕೊಳ್ಳಲು ತಾನು ಪ್ರಯತ್ನಿಸಿದ್ದೆ ಎನ್ನುವುದನ್ನು ಬಿಜೆಪಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಎರಡು ದಿನಗಳ ಹಿಂದೆ ಶಾ ನಿತೀಶ್ ಕುಮಾರ್ ಗೆ ದೂರವಾಣಿ ಕರೆಯನ್ನು ಮಾಡಿದ್ದರು. ಚಿಂತೆ ಪಡುವಂಥದ್ದು ಏನೂ ಇಲ್ಲ ಎಂದು ಆಗ ನಿತೀಶ್ ಹೇಳಿದ್ದರು. ಕಳೆದ ಒಂದೂವರೆ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಹಲವಾರು ಸಲ ನಿತೀಶ್ ಜೊತೆ ಮಾತನಾಡಿದ್ದರು, ಆದರೆ ನಿತೀಶ್ ಎಂದೂ ದೂರಿರಲಿಲ್ಲ ಎಂದು ಮೋದಿ ತಿಳಿಸಿದರು.

‘ ನಿತೀಶ್ ನಮಗೆ ಹೊರೆಯಾಗಿದ್ದಾರೆ ಮತ್ತು ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿತ್ತು ಎಂದು 2020ರಲ್ಲಿ ಪಕ್ಷದಲ್ಲಿನ ಹಲವರಿಗೆ ಅನಿಸಿತ್ತು. ಆದರೆ ನಾಯಕತ್ವವು ಬೇರೆಯೇ ನಿರ್ಧಾರವನ್ನು ತೆಗೆದುಕೊಂಡಿತ್ತು ’ ಎಂದು ಇನ್ನೋರ್ವ ಬಿಜೆಪಿ ನಾಯಕ ಹಾಗೂ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಹೇಳಿದರು.
ಈ ಹೇಳಿಕೆಗಳು ಮೈತ್ರಿಯಿಂದ ಸಂಪೂರ್ಣವಾಗಿ ಹೊರಬರುವ ಮತ್ತು ರಾಜ್ಯದಲ್ಲಿಯ ಎಲ್ಲ 243 ಕೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಿಜೆಪಿ ನಿರ್ಧಾರವನ್ನು ಒತ್ತಿ ಹೇಳಿವೆ.
ನಿತೀಶ ಬುಧವಾರ ಎಂಟನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಜೆಡಿಯು-ಆರ್ಜೆಡಿ-ಕಾಂಗ್ರೆಸ್ ಮಹಾಘಟಬಂಧನ್ ಸರಕಾರವು ಅಧಿಕಾರಕ್ಕೆ ಬಂದಿದೆ. ಮೈತ್ರಿಕೂಟದ ಮೂರು ಪ್ರಮುಖ ಪಕ್ಷಗಳು ಮತ್ತು ಇತರ ಸಣ್ಣ ಪಕ್ಷಗಳು ಸಚಿವ ಸ್ಥಾನಗಳ ಸಂಖ್ಯೆ ಮತ್ತು ಸಚಿವರಾಗುವ ಶಾಸಕರ ಕುರಿತು ನಿರ್ಧಾರಗಳನ್ನು ಕೈಗೊಂಡ ಬಳಿಕ ಇತರ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News