×
Ad

ಕುಂದಾಪುರ; ಅಪಘಾತ ಪ್ರಕರಣ: ಆರೋಪಿ ಕಾರು ಚಾಲಕನಿಗೆ ಜೈಲುಶಿಕ್ಷೆ

Update: 2022-08-11 20:45 IST

ಕುಂದಾಪುರ, ಆ.11: ನಿರ್ಲಕ್ಷ್ಯತನದ ಚಾಲನೆಯಿಂದ ಢಿಕ್ಕಿ ಹೊಡೆದು ಪಾದಚಾರಿಯ ಸಾವಿಗೆ ಕಾರಣವಾದ ಪ್ರಕರಣದ ಆರೋಪಿ ಕಾರು ಚಾಲಕನಿಗೆ ಕುಂದಾಪುರ ಹೆಚ್ಚುವರಿ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆ.11ರಂದು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.

ಕಾರು ಚಾಲಕ ಜಾನ್ ಡಿಸೋಜ ಶಿಕ್ಷೆಗೆ ಗುರಿಯಾದ ಆರೋಪಿ. 2013ರ ಮೇ 21ರಂದು ಹಂಗ್ಳೂರು ಗ್ರಾಮದ ದುರ್ಗಾಂಬಾ ಕಚೇರಿ ಗ್ಯಾರೇಜ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅಂದರೆ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಬಂದ ಕಾರು, ರಸ್ತೆ ದಾಟಲು ನಿಂತಿದ್ದ ಚೇತನ್ ಕುಮಾರ್ ರೈ ಎಂಬವರಿಗೆ ಢಿಕ್ಕಿ ಹೊಡೆಯಿತು.

ಇದರಿಂದ ಗಂಭೀರವಾಗಿ ಗಾಯಗೊಂಡ ಚೇತನ್ ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸಂಚಾರಿ ಠಾಣೆಯ ಎಸ್ಸೈ ಪರಮೇಶ್ವರಪ್ಪ ಹಾಗೂ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಕವರಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ರೋಹಿಣಿ ಡಿ., ಆರೋಪಿಯ ಅತೀವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಚೇತನ್ ಸಾವಿಗೆ ಕಾರಣ ಎಂದು ಅಭಿಪ್ರಾಯ ಪಟ್ಟು, ಆರೋಪಿ ಜಾನ್ ಡಿಸೋಜಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 6 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ದಂಡದ ಮೊತ್ತದಲ್ಲಿ 3 ಸಾವಿರ ರೂ. ಮತ್ತು ಹೆಚ್ಚುವರಿಯಾಗಿ 50ಸಾವಿರ ರೂ. ಪರಿಹಾರ ವಾಗಿ ಮೃತರ ಕುಟುಂಬಕ್ಕೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬದರಿನಾಥ ನಾಯರಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News