ಜಾನ್ಸನ್&ಜಾನ್ಸನ್ ಬೇಬಿ ಪೌಡರ್‌ ಮಾರಾಟವನ್ನೇ ನಿಲ್ಲಿಸಲಿರುವ ಸಂಸ್ಥೆ: ಕಾರಣವೇನು ಗೊತ್ತೇ?

Update: 2022-08-12 10:32 GMT

ಹೊಸದಿಲ್ಲಿ: ತನ್ನ ಟಾಲ್ಕ್ ಆಧರಿತ ಬೇಬಿ ಪೌಡರ್ ಮಾರಾಟವನ್ನು ಮುಂದಿನ ವರ್ಷ ಜಾಗತಿಕವಾಗಿ ಅಂತ್ಯಗೊಳಿಸುವುದಾಗಿ ಜಾನ್ಸನ್&ಜಾನ್ಸನ್ ಹೇಳಿದೆ. ಈ ಟಾಲ್ಕ್ ಆಧರಿತ ಬೇಬಿ ಪೌಡರ್ ಬಳಕೆ ಸುರಕ್ಷಿತವಲ್ಲ ಹಾಗೂ ಅದರಿಂದಾಗಿ ಕ್ಯಾನ್ಸರ್ ಉಂಟಾಗಿದೆ ಎಂದು ಹಲವರು ದೂರಿ ಕಾನೂನು ಹೋರಾಟ ಕೈಗೆತ್ತಿಕೊಂಡ ಕಾರಣ ಜಗತ್ತಿನಾದ್ಯಂತ ಕಂಪೆನಿ ಹಲವಾರು ಕಾನೂನು ಪ್ರಕರಣಗಳನ್ನು ಎದುರಿಸುತ್ತಿದೆ.  ಅಮೆರಿಕಾ ಮತ್ತು ಕೆನಡಾದಲ್ಲಿ 2020ರಲ್ಲಿಯೇ ಕಂಪೆನಿ ಟಾಲ್ಕ್ ಆಧರಿತ ಬೇಬಿ ಪೌಡರ್ ಮಾರಾಟ ನಿಲ್ಲಿಸಿತ್ತು.

ಈ ಉತ್ಪನ್ನದಲ್ಲಿ ಕ್ಯಾನ್ಸರ್‍ಕಾರಕ ಎಂದು ತಿಳಿಯಲಾದ ಅಸ್ಬೆಸ್ಟೋಸ್ ಇರುವುದರಿಂದ  ಕ್ಯಾನ್ಸರ್ ಉಂಟಾಗಿದೆ ಎಂದು ಹೇಳಿಕೊಂಡು ಸುಮಾರು 38000 ಕಾನೂನು ಪ್ರಕರಣಗಳು ಜಗತ್ತಿನಾದ್ಯಂತ ಕಂಪೆನಿ ವಿರುದ್ಧ ದಾಖಲಾಗಿದೆ.

ಆದರೆ ಸಂಸ್ಥೆ ಮಾತ್ರ ತನ್ನ ಉತ್ಪನ್ನದ ವಿರುದ್ಧ ಇರುವ ಆರೋಪಗಳನ್ನು ನಿರಾಕರಿಸಿದೆಯಲ್ಲದೆ ತನ್ನ ಟಾಲ್ಕ್ ಆಧರಿತ ಬೇಬಿ ಪೌಡರ್ ಅಸ್ಬೆಸ್ಟೋಸ್ ಮುಕ್ತವಾಗಿದೆ ಹಾಗೂ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ. ಮುಂದಿನ ವರ್ಷದಿಂದ ಟಾಲ್ಕ್ ಆಧರಿತ ಬೇಬಿ ಪೌಡರ್ ಮಾರಾಟ ನಿಲ್ಲಿಸುವುದಾಗಿ ಗುರುವಾರ ಘೋಷಿಸುವ ಸಂದರ್ಭ ಕೂಡ ತನ್ನ ಉತ್ಪನ್ನ ಸುರಕ್ಷಿತ ಎಂದು ಕಂಪೆನಿ ಪುನರುಚ್ಛರಿಸಿದೆ.

ಟಾಲ್ಕ್ ಆಧರಿತ ಬೇಬಿ ಪೌಡರ್ ಬದಲು ಜಗತ್ತಿನಾದ್ಯಂತ ಕಾರ್ನ್‍ಸ್ಟಾರ್ಚ್ ಆಧರಿತ ಬೇಬಿ ಪೌಡರ್ ಅನ್ನು ಈಗಾಗಲೇ ಜಗತ್ತಿನಾದ್ಯಂತ ಕಂಪೆನಿ ಮಾರಾಟ ಆರಂಭಿಸಿದೆ ಎಂದು ಜಾನ್ಸನ್&ಜಾನ್ಸನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News