'ಜೈ ಭೀಮ್' ಚಿತ್ರ ನಟ, ನಿರ್ದೇಶಕರ ವಿರುದ್ಧದ ಎಫ್‍ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

Update: 2022-08-12 10:14 GMT

ಹೊಸದಿಲ್ಲಿ: ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆಂಬ ಆರೋಪದ ಮೇಲೆ ಜೈ ಭೀಮ್ (Jai Bhim) ಚಲನಚಿತ್ರದ ನಾಯಕನಟ ಸೂರ್ಯ (Suriya) ಮತ್ತು ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ವಿರುದ್ಧ  ದಾಖಲಿಸಲಾಗಿದ್ದ ಎಫ್‍ಐಆರ್ ಅನ್ನು ಇಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಎಫ್‍ಐಆರ್ (FIR) ಅನ್ನು ಕೇವಲ ಊಹೆಯ ಆಧಾರದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ ಜಸ್ಟಿಸ್ ಎನ್ ಸತೀಶ್ ಕುಮಾರ್, ಅದನ್ನು ವಜಾಗೊಳಿಸಿದ್ದಾರೆ.

ವಕೀಲರು ಹಾಗೂ ರುದ್ರ ವಣ್ಣಿಯಾರ್ ಸೇನೆಯ ಅಧ್ಯಕ್ಷರೂ ಆಗಿರುವ ಕೆ ಸಂತೋಷ್ ಎಂಬವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಸೆಕ್ಷನ್ 295ಎ ಅನ್ವಯ ಚೆನ್ನೈಯ ವೆಲಚ್ಚೇರಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಚಿತ್ರದ ಖಳನಾಯಕ ಗುರುಮೂರ್ತಿಯ ಪಾತ್ರವು ವಣ್ಣಿಯಾರ್ ಸಂಘಂ ಇದರ ಮಾಜಿ ನಾಯಕ ಗುರುನಾಥನ್ ಅವರ ಹೆಸರನ್ನು ಆಧರಿಸಿದೆ ಹಾಗೂ ಚಿತ್ರದಲ್ಲಿ ವಣ್ಣಿಯಾ ಸಂಘಂ ಕ್ಯಾಲೆಂಡರ್ ಅನ್ನೂ ಬಳಸಲಾಗಿದೆ ಹಾಗೂ ಈ ಮೂಲಕ ಸಮುದಾಯ ಮತ್ತದರ ನಾಯಕರ  ಘನತೆಯನ್ನು ಕುಗ್ಗಿಸುವ ಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಚಿತ್ರ ತಯಾರಕರು ಚಿತ್ರದ ಖಳನಟನ ಹೆಸರನ್ನು ಉದ್ದೇಶಪೂರ್ವಕವಾಗಿ ಗುರುನಾಥನ್ ಅವರ ಹೆಸರನ್ನಾಧರಿಸಿ ಗುರು ಎಂದು ಇಡಲಾಗಿಲ್ಲ ಹಾಗೂ ಗುರು ಒಂದು ಸಾಮಾನ್ಯ  ಹೆಸರು ಎಂದಿದ್ದರು.

ಚಲನಚಿತ್ರವು ಸಂಬಂಧಿತ ಪ್ರಾಧಿಕಾರಗಳಿಂದ ಸೂಕ್ತ ಅನುಮೋದನೆ ಪಡೆದು ಪ್ರದರ್ಶನಗೊಂಡಿದ್ದರೂ ಅದನ್ನು ಪರಿಗಣಿಸದೆ ಸೈದಪೇಟೆ ಮ್ಯಾಜಿಸ್ಟ್ರೇಟ್ ಅವರು ಎಫ್‍ಐಆರ್ ದಾಖಲಿಸಲು ಅನುಮತಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಈ ಚಲನಚಿತ್ರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಕೆ ಚಂದ್ರು ಅವರು ತನಿಖೆ ನಡೆಸಿದ ಪ್ರಕರಣವೊಂದನ್ನು ಆಧರಿಸಿದೆ  ಹಾಗೂ ಮಾಜಿ ಐಜಿಪಿ ಪೆರಮುಲ್‍ಸಾಮಿ ಹೊರತಾಗಿ ಬೇರೆ ಎಲ್ಲಾ ಪಾತ್ರಧಾರಿಗಳ ಹೆಸರು ಬದಲಾಯಿಸಲಾಗಿದೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಅರ್ಜಿದಾರರ ವಾದವನ್ನು ಒಪ್ಪಿದ ನ್ಯಾಯಾಲಯವು  ದೂರನ್ನು ಕೇವಲ ಊಹೆಯ ಆಧಾರದಲ್ಲಿ ದಾಖಲಿಸಲಾಗಿದೆ ಎಂಬುದನ್ನು ಮನಗಂಡು ಎಫ್‍ಐಆರ್ ರದ್ದುಗೊಳಿಸಲು ಅನುಮತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News