'ಹರ್‌ ಘರ್‌ ತಿರಂಗಾʼ ಅಭಿಯಾನವನ್ನು ಬಹಿಷ್ಕರಿಸುವಂತೆ ಹಿಂದೂ ಧರ್ಮೀಯರಿಗೆ ಯತಿ ನರಸಿಂಗಾನಂದ ಕರೆ

Update: 2022-08-12 12:53 GMT

ಹೊಸದಿಲ್ಲಿ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಆರಂಭಿಸಿರುವ “ಹರ್ ಘರ್ ತಿರಂಗ” (Har Ghar Tiranga) ಅಭಿಯಾನವನ್ನು ಬಹಿಷ್ಕರಿಸುವಂತೆ ಹಿಂದುತ್ವವಾದಿ ಯತಿ ನರಸಿಂಹಾನಂದ್ ಹಿಂದೂಗಳಿಗೆ ಕರೆ ನೀಡಿದ್ದಾನೆ.

ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿರುವ ವೀಡಿಯೊದಲ್ಲಿ, ಈ ಹಿಂದೆ ಹಲವು ದ್ವೇಷದ ಭಾಷಣದ ಆರೋಪಿ ನರಸಿಂಗಾನಂದ, "ಈ ಅಭಿಯಾನವು ಮುಸ್ಲಿಂ ಒಡೆತನದ ಕಂಪನಿಗೆ ಲಾಭದಾಯಕವಾಗಿದೆ" ಎಂದು ಹೇಳಿದ್ದಾನೆ.

"ಈ ಅಭಿಯಾನಕ್ಕಾಗಿ (ಧ್ವಜಗಳನ್ನು ತಯಾರಿಸುವ) ಆರ್ಡರ್‌ ಅನ್ನು ಪಶ್ಚಿಮ ಬಂಗಾಳದ ಸಲಾವುದ್ದೀನ್ ಒಡೆತನದ ಕಂಪನಿಗೆ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ. “ಇದು ಹಿಂದೂಗಳ ವಿರುದ್ಧದ ಒಂದು ದೊಡ್ಡ ಪಿತೂರಿ. ನೀವು (ಹಿಂದೂಗಳು) ಜೀವಂತವಾಗಿರಲು ಬಯಸಿದರೆ, ಈ ಅಭಿಯಾನದ ಹೆಸರಿನಲ್ಲಿ ನಿಮ್ಮ ಹಣವನ್ನು ಮುಸ್ಲಿಮರಿಗೆ ನೀಡುವುದನ್ನು ನಿಲ್ಲಿಸಿ" ಎಂದು ನರಸಿಂಗಾನಂದ (Yati Narasinganad) ಹೇಳಿಕೆ ನೀಡಿದ್ದಾನೆ.

ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ನಾಗರಿಕರನ್ನು ಉತ್ತೇಜಿಸಲು “ಹರ್ ಘರ್ ತಿರಂಗ” ಅಭಿಯಾನವನ್ನು ಪ್ರಾರಂಭಿಸಿದ್ದರು.

ಹಿಂದೂ ರಾಜಕಾರಣಿಗಳು ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕಾಗಿ ಪ್ರಚಾರ ಮಾಡುತ್ತಾರೆ, ಆದರೆ ಅಧಿಕಾರಕ್ಕೆ ಬಂದ ನಂತರ ಅವರಿಗೆ ಸರ್ಕಾರಿ ಗುತ್ತಿಗೆಗಳನ್ನು ನೀಡುತ್ತಾರೆ ಎಂದು ನರಸಿಂಹಾನಂದ ವೀಡಿಯೊದಲ್ಲಿ ಆರೋಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News