ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.13,14ರಂದು ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬೈಕ್ ರ‍್ಯಾಲಿ

Update: 2022-08-12 14:38 GMT

ಉಡುಪಿ, ಆ.12: ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಎಐಸಿಸಿಯ ನಿರ್ದೇಶನದಂತೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣೆ, ಸ್ವಾತಂತ್ರ್ಯದ ಬಗ್ಗೆ ಅರಿವು, ಜಾಗೃತಿ ಹಾಗೂ ಶಾಂತಿ-ಸೌಹಾರ್ದತೆ ಉಳಿಸಿಕೊಳ್ಳುವ ಸಂಕಲ್ಪಕ್ಕಾಗಿ ಇದೇ ಆ.೧೩ ಮತ್ತು ೧೪ರಂದು ಕಾಂಗ್ರೆಸ್ ಪಕ್ಷ ಕಾಪು ಕ್ಷೇತ್ರದಲ್ಲಿ ಪಕ್ಷ ಕಾರ್ಯಕರ್ತರ ಬೈಕ್ ರ‍್ಯಾಲಿಯನ್ನು ಆಯೋಜಿಸಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊರಕೆ, ದೇಶ ಪ್ರೇಮದ ಸಂದೇಶವನ್ನು ಜನತೆಗೆ ಮುಟ್ಟಿಸುವ ಉದ್ದೇಶದಿಂದ ೧೩ರಂದು ಕಾಪು   ದಕ್ಷಿಣ ವಲಯ ಬ್ಲಾಕ್ ಹಾಗೂ ಯುವ ಕಾಂಗ್ರೆಸ್, ೧೪ರಂದು ಕಾಪು ಉತ್ತರ ವಲಯ ಬ್ಲಾಕ್ ವತಿಯಿಂದ ಈ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.

ಶನಿವಾರ ಅಪರಾಹ್ನ ೩:೦೦ಗಂಟೆಗೆ ಹೆಜಮಾಡಿಯಿಂದ ರ್ಯಾಲಿ ಪ್ರಾರಂಭ ಗೊಳ್ಳಲಿದ್ದು, ಸಂಜೆ ೫:೦೦ಗಂಟೆಗೆ ಉದ್ಯಾವರದಲ್ಲಿ ಮುಕ್ತಾಯಗೊಳ್ಳಲಿದೆ. ಸುಮಾರು ೧೦೦೦ದಿಂದ ೧೫೦೦ ಬೈಕ್‌ಗಳು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ಉದ್ಯಾವರದಲ್ಲಿ ಸಂಜೆ ೫ಗಂಟೆಗೆ ಸಮಾರೋಪ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್‌ರೈ, ಐವಾನ್ ಡಿಸೋಜ ಹಾಗೂ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು ಭಾಗವಹಿಸುವರು ಎಂದು ಸೊರಕೆ ತಿಳಿಸಿದರು.

ಆ.೧೪ರ ರವಿವಾರ ಅಪರಾಹ್ನ ೧:೩೦ಕ್ಕೆ ಕುಕ್ಕೆಹಳ್ಳಿಯಿಂದ ರ್ಯಾಲಿ ಪ್ರಾರಂಭಗೊಳ್ಳಲಿದೆ. ಪೆರ್ಡೂರು, ಬೈರಂಪಳ್ಳಿ, ೮೦ ಬಡಗುಬೆಟ್ಟು, ರಾಜೀವನಗರ ಮಾರ್ಗವಾಗಿ ಅಲೆವೂರಿನಲ್ಲಿ ಸಮಾಪನಗೊಳ್ಳಲಿದೆ. ಇದರಲ್ಲಿ ೫೦೦ರಿಂದ ೧೦೦೦ ಬೈಕ್‌ಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಸಂತೋಷ್ ಕುಲಾಲ್, ನವೀನ್ ಸಾಲ್ಯಾನ್ ಹಾಗೂ ಚರಣ್ ವಿಠಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News