ಬಾಂಬ್ ದಾಳಿ: ತಾಲಿಬಾನ್ ಧರ್ಮಗುರು ಶೇಖ್ ರಹಿಮುಲ್ಲಾ ಹಖ್ಖಾನಿ ಹತ್ಯೆ

Update: 2022-08-12 17:35 GMT

ಕಾಬೂಲ್, ಆ.12: ಐಸಿಸ್ ವಿರುದ್ಧ ಕೆಂಡ ಕಾರುವ ಭಾಷಣಗಳಿಗೆ ಹೆಸರಾಗಿದ್ದ, ಮಹಿಳಾ ಶಿಕ್ಷಣವನ್ನು ಬೆಂಬಲಿಸುತ್ತಿದ್ದ ತಾಲಿಬಾನ್ ನ ಹಿರಿಯ ಧರ್ಮಗುರು ಶೇಖ್ ರಹಿಮುಲ್ಲಾ ಹಖ್ಖಾನಿ ಅಪ್ಘಾನ್ನಲ್ಲಿ ನಡೆದ ಆತ್ಮಾಹುತಿ ಬಾಂಬ್ದಾಳಿಯಲ್ಲಿ ಹತರಾಗಿದ್ದಾರೆ. ಐಸಿಸ್ ಸಂಘಟನೆ ಹತ್ಯೆಯ ಹೊಣೆ ವಹಿಸಿಕೊಂಡಿದೆ. ಈ ಹಿಂದೆ ಇವರ ಹತ್ಯೆಗೆ 2 ಬಾರಿ ವಿಫಲ ಪ್ರಯತ್ನ ನಡೆದಿದೆ. ಶೇಖ್ ರಹಿಮುಲ್ಲಾ ಅವರ ಮದರಸವನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು ರಹಿಮುಲ್ಲಾ ಮತ್ತವರ ಸಹೋದರ ಮೃತರಾಗಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝದ್ರಾನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಗಂಟೆಗಳ ಬಳಿಕ ಟೆಲಿಗ್ರಾಂ ಚಾನೆಲ್ನಲ್ಲಿ ಸ್ಫೋಟದ ಹೊಣೆ ಹೊತ್ತುಕೊಂಡ ಐಸಿಸ್, ‘ಬಾಂಬರ್ ತನ್ನ ಸೊಂಟದಲ್ಲಿ ಸ್ಫೋಟಕ ಇರಿಸಿಕೊಂಡು ಮದರಸದಲ್ಲಿನ ಧರ್ಮಗುರು ಕಚೇರಿ ಪ್ರವೇಶಿಸಿ ಸ್ಫೋಟಿಸಿಕೊಂಡಿದ್ದಾನೆ. ಹಖ್ಖಾನಿ ತಾಲಿಬಾನ್ ಪ್ರತಿಪಾದಕರಲ್ಲಿ ಒಬ್ಬರು ಮತ್ತು ಅವರನ್ನು ಸಂಘರ್ಷಕ್ಕೆ ಪ್ರಚೋದಿಸುವ ಉನ್ನತ ಅಧಿಕಾರಿಗಳಲ್ಲಿ ಒಬ್ಬರು ’ ಎಂದು ಹೇಳಿದೆ.

ಯಾವುದೇ ಅಧಿಕೃತ ಹುದ್ದೆ ಹೊಂದಿರದಿದ್ದರೂ ರಹಿಮುಲ್ಲಾ ಪ್ರಭಾವೀ ವ್ಯಕ್ತಿಯಾಗಿದ್ದು ಸಂಘಟನೆಯ ಹಲವು ಸದಸ್ಯರಿಗೆ ಕಲಿಸಿದವರು’ ಎಂದು ತಾಲಿಬಾನ್ ಮೂಲಗಳು ಸಂತಾಪ ಸೂಚಿಸಿವೆ . ನಿಮ್ಮ ಜವಾಬ್ದಾರಿ ಪೂರ್ಣಗೊಳಿಸಿದ್ದೀರಿ. ವಿಧಿಯಾಟವನ್ನು ತಡೆಯಲಾಗದು, ಆದರೆ ಮುಸ್ಲಿಂ ಸಮುದಾಯ ಅನಾಥವಾಗಿದೆ ಎಂದು ಕಾಬೂಲ್ ಪೊಲೀಸ್ ಮಾಜಿ ವಕ್ತಾರ ಮೊಬಿನ್ ಖಾನ್ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News