ಪ್ರಧಾನಿಯಾಗುವ ಆಸೆ ಇಲ್ಲ, ವಿರೋಧ ಪಕ್ಷಗಳ ಒಗ್ಗಟ್ಟಿಗೆ ಪ್ರಯತ್ನ ಮಾಡುತ್ತೇನೆ: ಬಿಹಾರ ಸಿಎಂ ನಿತೀಶ್ ಕುಮಾರ್

Update: 2022-08-13 02:46 GMT
ನಿತೀಶ್ ಕುಮಾರ್

ಪಾಟ್ನಾ: ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ; ಆದರೆ 2024ರ ಸಾರ್ವತ್ರಿಕ ಚುನಾವಣೆಗೆ ಪೂರ್ವಭಾವಿಯಾಗಿ ದೇಶಾದ್ಯಂತ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

"ನಾನು ಕೈಮುಗಿದು ಇದನ್ನು ಹೇಳುತ್ತಿದ್ದೇನೆ. ಪ್ರಧಾನಿ ಹುದ್ದೆಯ ಆಕಾಂಕ್ಷೆ ನನಗಿಲ್ಲ. ಕೆಲವರು ಈ ಪ್ರಶ್ನೆ ಕೇಳಿದರೆ, ಅವರಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ. ನಾನು ಎಲ್ಲರಿಗಾಗಿ ಶ್ರಮಿಸುತ್ತೇನೆ ಹಾಗೂ ವಿರೋಧ ಪಕ್ಷಗಳು ಜತೆಯಾಗಿ ಸಾಗಲು ಮತ್ತು ಕಾರ್ಯ ನಿರ್ವಹಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ" ಎಂದು ಸ್ಪಷ್ಟಪಡಿಸಿದರು.

ನಿತೀಶ್ ಕುಮಾರ್ ಅವರು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ಹಲವು ರಾಜಕೀಯ ಪಂಡಿತರ ಲೆಕ್ಕಾಚಾರ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರ ಇಬ್ಬರು ಆಪ್ತರನ್ನು ಬಂಧಿಸಿದ ಬಳಿಕ ಅವರಿಗೆ ಹಿನ್ನಡೆಯಾಗಿದೆ. ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರು ಇದುವರೆಗೆ ಬಿಜೆಪಿ ವಿರುದ್ಧ ಪಕ್ಷಗಳನ್ನು ಸಂಘಟಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಬಹುಶಃ ಪಿಎಂ ಹುದ್ದೆಯ ರೇಸ್‍ನಲ್ಲಿ ನಿತೀಶ್ ಮುಂಚೂಣಿಯಲ್ಲಿರುತ್ತಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

"ನಾನು ಧನಾತ್ಮಕವಾಗಿ ಕೆಲಸ ಮಾಡುತ್ತೇನೆ. ವಿವಿಧ ರಾಜ್ಯಗಳ ಹಲವು ಮಂದಿ ಮುಖಂಡರು ಕರೆ ಮಾಡುತ್ತಿದ್ದಾರೆ. ನಾನು ಬಿಹಾರಕ್ಕಾಗಿ ಕೆಲಸ ಮಡುತ್ತೇನೆ ಹಾಗೂ ಬಳಿಕ ದೇಶಾದ್ಯಂತ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಶ್ರಮಿಸುತ್ತೇನೆ. ಬಿಜೆಪಿ ವಿರುದ್ಧ ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡುತ್ತೇನೆ" ಎಂದು ಬಿಜೆಪಿ ಸಖ್ಯವನ್ನು ಇತ್ತೀಚೆಗೆ ತೊರೆದ ಅವರು ಸ್ಪಷ್ಟಪಡಿಸಿದರು ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News