ಹೊಸ ಶಿವಸೇನ ಭವನ ನಿರ್ಮಿಸಲು ಏಕನಾಥ್ ಶಿಂಧೆ ಯೋಜನೆ?

Update: 2022-08-13 05:23 GMT
ಶಿವಸೇನ ಭವನ, Photo:ANI

ಮುಂಬೈ: ಶಿವಸೇನೆ (Shiv Sena)ಮೇಲೆ  ಹಕ್ಕು ಸಾಧಿಸಲು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಯುತ್ತಿರುವಾಗಲೇ  ಶಿಂಧೆ ಪಾಳಯವು ಪಕ್ಷದ ಕಚೇರಿಗಾಗಿ ಹೊಸ ಶಿವಸೇನ ಭವನವನ್ನು (Shivsena Bhavan) ನಿರ್ಮಿಸಲು ಯೋಜಿಸುತ್ತಿದೆ.  ಬಂಡಾಯ ಬಣವು ಸಮಾನಾಂತರ ಶಿವಸೇನೆಯ  ಪ್ರಧಾನ ಕಛೇರಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಶಿವಸೇನ ಭವನದ ಹೊರತಾಗಿ ಎಲ್ಲೆಡೆ ಹೊಸ ಶಿವಸೇನೆ ಶಾಖೆಗಳು ಅಥವಾ ಸ್ಥಳೀಯ ಪಕ್ಷದ ಕಚೇರಿಗಳನ್ನು ತೆರೆಯಲು ಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಭವನಕ್ಕೆ ಇನ್ನೂ ಯಾವುದೇ ಸ್ಥಳವನ್ನು ನಿಗದಿಪಡಿಸಲಾಗಿಲ್ಲ. ಆದರೆ ಅವರು ಮುಂಬೈನ ದಾದರ್‌ನಲ್ಲಿರುವ ಶಿವಸೇನ ಭವನದ ಬಳಿ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮಾನಾಂತರ ಸೇನಾ ಭವನ ನಿರ್ಮಿಸುವ ಕುರಿತ ಊಹಾಪೋಹಗಳನ್ನು ತಳ್ಳಿ ಹಾಕಿದ ಮಹಾರಾಷ್ಟ್ರದ ನೂತನ ಸಚಿವ ಉದಯ್ ಸಮಂತ್ ಇದು ತಪ್ಪು ಕಲ್ಪನೆ ಎಂದು ಕರೆದಿದ್ದಾರೆ.

"ದಾದರ್‌ನಲ್ಲಿ ಸಮಾನಾಂತರ ಶಿವಸೇನ ಭವನ ನಿರ್ಮಿಸಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಸಿಎಂ ಶಿಂಧೆ  ಸಾಮಾನ್ಯ ಜನರನ್ನು ಭೇಟಿಯಾಗಲು ನಾವು ಕೇಂದ್ರ ಕಚೇರಿಯನ್ನು ಹುಡುಕುತ್ತಿದ್ದೇವೆ. ನಾವು ಶಿವಸೇನ ಭವನವನ್ನು ಗೌರವಿಸುತ್ತೇವೆ ಹಾಗೂ  ಅದು ಹಾಗೆಯೇ ಉಳಿಯುತ್ತದೆ" ಎಂದು ಅವರು ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ತಮ್ಮ ಬಣವನ್ನು "ನಿಜವಾದ ಶಿವಸೇನೆ" ಹಾಗೂ  ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತದ ಅನುಯಾಯಿ ಎಂದು ಕರೆಯುತ್ತಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಗುಂಪು ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಆದರ್ಶಗಳಿಂದ ದೂರ ಸರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News