ಏರುತ್ತಿರುವ ತಾಪಮಾನ: ಫ್ರಾನ್ಸ್ ನಲ್ಲಿ ತೀವ್ರಗೊಂಡ ಕಾಡ್ಗಿಚ್ಚು

Update: 2022-08-13 16:31 GMT

ಪ್ಯಾರಿಸ್, ಆ.13: ಸುಡು ಬಿಸಿಲಿನ ಜತೆಗೆ ಗರಿಷ್ಟ ತಾಪಮಾನದಿಂದ ಇಂಗ್ಲೆಂಡಿನಲ್ಲಿ ಕ್ಷಾಮದ ಸ್ಥಿತಿ ಘೋಷಿಸಿದ್ದರೆ, ಫ್ರಾನ್ಸ್ ಹಾಗೂ ಪೋರ್ಚುಗಲ್ನಲ್ಲಿ ಕಾಡ್ಗಿಚ್ಚು ಭೀಕರವಾಗಿ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸುತ್ತಿದ್ದು ಯುರೋಪ್ನಾದ್ಯಂತದ ಅಗ್ನಿಶಾಮಕ ಪಡೆಯನ್ನು ಫ್ರಾನ್ಸ್ಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ನಿರಂತರ ಉಷ್ಣಮಾರುತವು ಹವಾಮಾನ ವೈಪರೀತ್ಯದ ಅನಾಹುತಕ್ಕೆ ಸಾಕ್ಷಿಯಾಗಿದೆ.

ಯುರೋಪ್ ನ ಹಲವೆಡೆ ತಾಪಮಾನ ದಾಖಲೆ ಮಟ್ಟಕ್ಕೆ ಏರಿದ್ದು ಜರ್ಮನಿಯ ರ್ಹೀನ್ ನದಿಯ ನೀರಿನ ಮಟ್ಟವನ್ನು ಕಡಿಮೆ ಮಾಡಿದೆ. ಬ್ರಿಟನ್ನ ಥೇಮ್ಸ್ ನದಿಯಲ್ಲೂ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ನೀರಿನ ಮಟ್ಟವಿದೆ. ಫ್ರಾನ್ಸ್ನಲ್ಲಿ ವಾರಗಟ್ಟಲೆ ಪ್ರಜ್ವಲಿಸಿದ ಕಾಡ್ಗಿಚ್ಚು ಸಾವಿರಾರು ಹೆಕ್ಟೇರ್ನಷ್ಟು ಅರಣ್ಯವನ್ನು ಸುಟ್ಟುಹಾಕಿದ್ದು 10,000 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಶುಕ್ರವಾರ ಕಾಡ್ಗಿಚ್ಚು ತುಸು ನಿಯಂತ್ರಣಕ್ಕೆ ಬಂದಿದ್ದರೂ, ನೈಋತ್ಯ ಫ್ರಾನ್ಸ್ನ ಜಿರೋಂಡೆ ನಗರದಲ್ಲಿ ಹೊಸದಾಗಿ ಕಾಡ್ಗಿಚ್ಚು ಕಾಣಿಸಿಕೊಳ್ಳುವ ಅಪಾಯದ ಸೂಚನೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜರ್ಮನಿ, ರೊಮಾನಿಯಾ, ಗ್ರೀಸ್ ಸೇರಿದಂತೆ ಹಲವು ದೇಶಗಳ ಅಗ್ನಿಶಾಮಕ ಪಡೆಯವರು ಫ್ರಾನ್ಸ್ನ ನೆರವಿಗೆ ಧಾವಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಕಾಡ್ಗಿಚ್ಚಿನ ಎದುರಿನ ನಿರಂತರ ಹೋರಾಟದಿಂದ ನಮ್ಮ ಪಡೆಯವರು ದಣಿದಿದ್ದಾರೆ. ಇದೀಗ ಸೂಕ್ತ ಸಮಯಕ್ಕೆ ಇತರ ದೇಶಗಳಿಂದ ನೆರವು ದೊರಕಿದ್ದು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಫ್ರಾನ್ಸ್ ನ ಅಗ್ನಿಶಾಮಕ ದಳದ ಅಧಿಕಾರಿ ಸ್ಟಿಫಾನಿ ಮಾರ್ಟಿನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News