ನಾವು ಮರೆತ ಮಹನೀಯರು: ಬ್ರಿಟಿಷರ ವಿರುದ್ಧ ಹೋರಾಡಿದ ಬೇಗಂ ಹಝ್ರತ್‌ ಮಹಲ್

Update: 2022-08-14 11:11 GMT
ಬೇಗಂ ಹಝ್ರತ್‌ ಮಹಲ್ (Photo: zeenews.india)

ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯುವ, ತನ್ನ ತಾಯ್ನಾಡಿಗಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ರಾಣಿ ಎಂದರೆ ಬೇಗಂ ಹಝ್ರತ್‌ ಮಹಲ್.‌ ಅವಧ್‌ ನ ಫೈಝಾಬಾದ್‌ ನಲ್ಲಿ ಜನಿಸಿದ್ದ ಬೇಗಂ ಹಝ್ರತ್‌ ಮಹಲ್‌ ಅವರ ಬಾಲ್ಯದ ಹೆಸರು ಮುಹಮ್ಮದಿ ಖಾನುಮ್‌ ಎಂದಾಗಿತ್ತು. ಅವಧ್‌ ನ ರಾಜ ನವಾಬ್‌ ವಾಜಿದ್‌ ಅಲಿ ಶಾ ಅವರನ್ನು ವಿವಾಹವಾದ ಹಝ್ರತ್‌ ಮಹಲ್‌ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪರಕೀಯರ ದಾಳಿಯಿಂದ ತಾಯಿ ನೆಲವನ್ನು ರಕ್ಷಿಸಲು ಹೋರಾಡಿದ ಅಪ್ರತಿಮ ಹೋರಾಟಗಾರ್ತಿಯಾಗಿದ್ದಾರೆ.

1856ರಲ್ಲಿ ಅವಧ್‌ ಪ್ರಾಂತ್ಯವನ್ನು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿ ವಶಪಡಿಸಿಕೊಂಡು, ನವಾಬ್‌ ವಾಜಿದ್‌ ಅಲಿ ಶಾ ಅವರನ್ನು ಕಲ್ಕತ್ತಾಗೆ ಗಡೀಪಾರು ಮಾಡಿತು. ಆದರೆ ಹಝ್ರತ್‌ ಮಹಲ್‌ ತನ್ನ ಪುತ್ರ ಬಿರ್ಜಿಸ್‌ ಖಾದಿರ್‌ ಜೊತೆ ಲಕ್ನೋದಲ್ಲೇ ಉಳಿದರು. ಇದಾದ ನಂತರ ಅವಧ್‌ ನಲ್ಲಿ ಬಂಡಾಯದ ಬೆಂಕಿ ಎದ್ದಿತು. ಲಕ್ನೋದಲ್ಲಿ ದಂಗೆ ಆರಂಭವಾಯಿತು. ಈ ಬಂಡಾಯದ  ನೇತೃತ್ವ ವಹಿಸಿ, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದವರಲ್ಲಿ ಮೊದಲಿಗರಾಗಿದ್ದರು ಬೇಗಂ ಹಝ್ರತ್‌ ಮಹಲ್.‌ ಲಕ್ನೋದಲ್ಲಿ ಹಝ್ರತ್‌ ಮಹಲ್‌ ನೇತೃತ್ವದ ಹೋರಾಟ ಎಷ್ಟೋಂದು ತೀವ್ರವಾಗಿತ್ತೆಂದರೆ ಬ್ರಿಟಿಷರಿಗೆ ರೆಸಿಡೆನ್ಸಿ ಬಿಲ್ಡಿಂಗ್‌ ನಿಂದ ಹೊರಗೆ ಕಾಲಿಡಲೂ ಸಾಧ್ಯವಾಗಿರಲಿಲ್ಲ. ಹಝ್ರತ್‌ ಮಹಲ್‌ ಅವರ ಈ ಹೋರಾಟದಲ್ಲಿ ಅವರಿಗೆ ನಿರಂತರ ಬೆಂಬಲ ನೀಡಿದವರು ನಾನಾ ಸಾಹೇಬ್‌ ಮತ್ತು ಮೌಲವಿ ಅಹ್ಮದುಲ್ಲಾ ಶಾ.

ಬೇಗಂ ಹಝ್ರತ್‌ ಮಹಲ್‌ ಅವರ ಸೇನೆ ರಾಜಾ ಜೈ ಲಾಲ್‌ ಸಿಂಗ್‌ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಲಕ್ನೋವನ್ನು ತನ್ನ ನಿಯಂತ್ರಣಕ್ಕೆ ಪಡೆಯಿತು. ಇಂಗ್ಲಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯು ರಸ್ತೆಗಳ ನಿರ್ಮಾಣಕ್ಕಾಗಿ ದೇವಸ್ಥಾನಗಳು ಮತ್ತು ಮಸೀದಿಗಳನ್ನು ಕೆಡವುತ್ತಿದೆ ಎನ್ನುವ ಆಕ್ರೋಶವೂ ಹಝ್ರತ್‌ ಮಹಲ್‌ ಅವರಿಗಿತ್ತು. ಈ ಬಗ್ಗೆ ಅವರು ಪತ್ರವನ್ನೂ ಬರೆದಿದ್ದರು.

ಈ ಹೋರಾಟ ಮುಂದುವರಿದಂತೆ 1857ರ ಸೆಪ್ಟಂಬರ್‌ 23ರಂದು ಬ್ರಿಟಿಷರು ಆಲಂ ಬಾಘ್‌ ಅನ್ನು ವಶಪಡಿಸಿಕೊಂಡರು. ಇದು ಹಝ್ರತ್‌ ಬೇಗಂ ಹೋರಾಟಕ್ಕೆ ಹಿನ್ನೆಡೆಯಾಯಿತು. ನವೆಂಬರ್‌ ತಿಂಗಳಲ್ಲಿ ಬ್ರಿಟಿಷ್‌ ಅಧಿಕಾರಿಗಳಾದ ಸರ್‌ ಕಾಲಿನ್‌ ಕ್ಯಾಂಪ್‌ ಬೆಲ್‌ ತನ್ನ ಪಡೆಯ ಜೊತೆ ಲಕ್ನೋಗೆ ಬಂದಿದ್ದ. ಮತ್ತೊಮ್ಮೆ ಯುದ್ಧ ಸ್ಫೋಟಗೊಂಡಿತ್ತು. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹಝ್ರತ್‌ ಮಹಲ್‌ ಹೋರಾಡಿದರು. ಈ ಹೋರಾಟದಲ್ಲಿ ಬ್ರಿಟಿಷರು ಅಲ್ಪ ಮೇಲುಗೈ ಸಾಧಿಸಿದ್ದರೂ ಹಲವಾರು ಬ್ರಿಟಿಷ್‌ ಅಧಿಕಾರಿಗಳು ಸಾವನ್ನಪ್ಪಿದ್ದರು ಮತ್ತು ಗಾಯಗೊಂಡಿದ್ದರು.

ಸೈನಿಕರನ್ನು ಹುರಿದುಂಬಿಸಲು ಸಭೆಗಳನ್ನು ನಡೆಸುತ್ತಿದ್ದ ಬೇಗಂ ಹಝ್ರತ್‌ ಮಹಲ್‌ ಸ್ವತಂತ್ರ ಭಾರತದ ಕನಸು ನನಸಾಗಿಸಲು ಧೈರ್ಯವಂತರಾಗಿ ಹೋರಾಡಿ ಎನ್ನುತ್ತಿದ್ದರು. ಹಿಂದೂ ಮುಸ್ಲಿಮರು ಒಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಅವರು ಹುರಿದುಂಬಿಸಿದರು. ಈ ಹೋರಾಟ ಹೇಗಿರಬೇಕು ಎನ್ನುವ ಬಗ್ಗೆ ಪತ್ರಗಳನ್ನು ಅವರು ಬರೆದರು. ಬ್ರಿಟಿಷರು ವಶಪಡಿಸಿಕೊಂಡಿದ್ದ ಆಲಂ ಭಾಗ್‌ ಮೇಲೆ ಮೌಲವಿ ಅಹ್ಮದುಲ್ಲಾ ಮತ್ತು ಹಝ್ರತ್‌ ಮಹಲ್‌ ನೇತೃತ್ವದಲ್ಲಿ ದಾಳಿಗಳು ನಡೆದವು. ಆದರೆ ಬಲಿಷ್ಠವಾಗಿದ್ದ ಬ್ರಿಟಿಷ್‌ ಸೇನೆ ಅವರನ್ನು ಸೋಲಿಸಿತು. 1858ರ ಮಾರ್ಚ್‌ ನಲ್ಲಿ ನೇಪಾಳದ ಮಹಾರಾಜ ಜಂಗ್‌ ಬಹದೂರ್‌ ಕಳುಹಿಸಿದ್ದ 3000 ಗೂರ್ಖಾಗಳ ನೆರವಿನಿಂದ ಸರ್‌ ಕಾಲಿನ್‌ ಕ್ಯಾಂಪ್‌ ಬೆಲ್‌ ನೇತೃತ್ವದ ಬ್ರಿಟಿಷ್‌ ಸೇನೆ ಲಕ್ನೋವನ್ನು ವಶಪಡಿಸಿಕೊಳ್ಳಲು ದಾಳಿ ನಡೆಸಿತು. 1858ರ ಮಾರ್ಚ್‌ 19ರ ವೇಳೆಗೆ ಬ್ರಿಟಿಷ್‌ ಸೇನೆ ಮೂಸಾಭಾಗ್‌, ಚಾರ್‌ ಭಾಗ್‌ ಮತ್ತು ಕೇಸರ್‌ ಭಾಗನ್ನು ವಶಪಡಿಸಿಕೊಂಡಿತು.

ಇಂತಹ ಸನ್ನಿವೇಶದಲ್ಲಿ ಹಝ್ರತ್‌ ಮಹಲ್‌ ತನ್ನ ಅನುಯಾಯಿಗಳು, ಪುತ್ರ ಬಿರ್ಜಿಸ್‌ ಖಾದಿರ್‌ ಮತ್ತು ನಾನಾ ಸಾಹೇಬ್‌ ಜೊತೆ ನೇಪಾಳಕ್ಕೆ ಪಲಾಯನಗೈದರು. ಆರಂಭದಲ್ಲಿ ಇವರಿಗೆ ಆಶ್ರಯ ಒದಗಿಸಲು ಹಿಂಜರಿದ ನೇಪಾಳದ ಆಡಳಿತ ಆನಂತರ ಕೆಲವೊಂದು ಷರತ್ತುಗಳ ಜೊತೆ ಆಶ್ರಯ ಒದಗಿಸಿತು. ನೇಪಾಳದಲ್ಲಿ ಮಗನ ಅಸೌಖ್ಯ ಸೇರಿದಂತೆ ಬೇಗಂ ಹಝರತ್‌ ಮಹಲ್‌ ಹಲವಾರು ಸಂಕಷ್ಟಗಳನ್ನು ಅನುಭವಿಸಿದರು.

ಇದಾದ ಬಳಿಕ ಸರಕಾರದ ವಿರುದ್ಧ ಪಿತೂರಿ ಹೂಡಿದ್ದನ್ನು ಬಂಡಾಯಗಾರರು ಮತ್ತು ಅವರ ನಾಯಕರು ಒಪ್ಪಿಕೊಳ್ಳಬೇಕು ಎಂದು ಬ್ರಿಟಿಷ್‌ ಸರಕಾರ ಘೋಷಿಸಿತು. ಯಾರು ಬ್ರಿಟಿಷ್‌ ಅಧಿಕಾರಿಗಳನ್ನು ಕೊಂದಿಲ್ಲವೋ ಅದು ಬೇಗಂ ಹಝ್ರತ್‌ ಮಹಲ್‌ ಅವರಿಂದ ಹಿಡಿದು ಕಟ್ಟಕಡೆಯ ಸೈನಿಕನಾದರೂ ಅವರನ್ನು ಕ್ಷಮಿಸಲಾಗುವುದು ಎಂದು ಬ್ರಿಟಿಷ್‌ ಸರಕಾರ ಹೇಳಿತು. ಆದರೆ ಬೇಗಂ ಹಝ್ರತ್‌ ಮಹಲ್‌ ಇದನ್ನು ಖಡಾಖಂಡಿತವಾಗಿ ನಿರಾಕರಿಸಿ ಮತ್ತೊಂದು ಸಶಸ್ತ್ರ ಸೇನೆಯ ಪ್ರತೀಕಾರಕ್ಕಾಗಿ ನೇಪಾಳದ ಆಡಳಿತದೊಂದಿಗೆ ಸಹಾಯ ಕೇಳಿದರು. ಬೇಗಂ ಹಝ್ರತ್‌ ಮಹಲ್‌ ಒಬ್ಬ ಮಹಿಳೆ ಮತ್ತು ರಾಜ ಮನೆತನಕ್ಕೆ ಸೇರಿದವರು ಎನ್ನುವ ಕಾರಣದಿಂದ ಅವರಿಗೆ ಎಲ್ಲಾ ಪ್ರಾಶಸ್ತ್ಯಗಳನ್ನು ನೀಡಲಾಗುವುದು ಬ್ರಿಟಿಷ್‌ ಸರಕಾರ ಹೇಳಿದ್ದರೂ ಬೇಗಂ ಹಝ್ರತ್‌ ಮಹಲ್‌ ಬ್ರಿಟಿಷರ ಮುಂದೆ ತಲೆಬಾಗಲೇ ಇಲ್ಲ.

ತಾನು ಬದುಕಿದ್ದ ಕೊನೆ ದಿನದವರೆಗೂ ಬೇಗಂ ಹಝ್ರತ್‌ ಮಹಲ್‌ ಅವರಿಗೆ ತಾಯ್ನಾಡು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. 1879ರಲ್ಲಿ ಅವರು ನೇಪಾಳದಲ್ಲೇ ನಿಧನರಾದರು. ಇಂದಿಗೂ ಕಾಠ್ಮಂಡುವಿನಲ್ಲಿ ಅವರ ಗೋರಿ ಇದೆ. 1984ರ ಮೇ 10ರಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಝ್ರತ್‌ ಬೇಗಂ ಮಹಲ್ ಅವರ ಅವಿಸ್ಮರಣೀಯ ಕೊಡುಗೆಗಳನ್ನು ಗೌರವಿಸಿ ಭಾರತ ಸರಕಾರ  ಅಂಚೆ ಚೀಟಿ  ಬಿಡುಗಡೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News