ನಾವು ಮರೆತ ಮಹನೀಯರು: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ಹುತಾತ್ಮ ​ಪೀರ್ ಅಲಿ ಖಾನ್

Update: 2022-08-15 05:37 GMT
Photo credit: thecrediblehistory

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ವಿರುದ್ಧ ಸಡ್ಡು ಹೊಡೆದು ನಿಂತವರಲ್ಲಿ ಪೀರ್ ಅಲಿ ಖಾನ್ ಮತ್ತು ಅವರ ಹಲ​ವು  ಸಹಚರರೂ ಸೇರುತ್ತಾರೆ. ಉತ್ತರ ಭಾರತ, ಮಧ್ಯ ಮತ್ತು ಪಶ್ಚಿಮ ಭಾರತದಾದ್ಯಂತ ಹಬ್ಬಿಕೊಂಡ ಹೋರಾಟವಾಗಿತ್ತದು. ಪ್ರತಿಯೊಂದು ಕೇಂದ್ರಗಳಲ್ಲೂ ನೇತೃತ್ವ ವಹಿಸಿದ್ದ ವೀರರಿದ್ದರು. ಬಾರಕ್ಪುರ್ನಲ್ಲಿ ಮಂಗಲ್ ಪಾಂಡೆ, ಝಾನ್ಸಿಯಲ್ಲಿ ರಾಣಿ ಲಕ್ಷ್ಮೀಬಾಯಿ, ಅರಾದಲ್ಲಿ ವೀರ್ ಕುನ್ವರ್ ​​ಸಿಂಗ್, ಫೈ​ಝಾಭಾ​ದ್ ನಲ್ಲಿ  ಮೌಲ್ವಿ ಅಹಮದ್ ಶಾ, ಕಾನ್ಪುರದ​ಲ್ಲಿ ತಂತಿಯಾ ಟೋಪೆ, ಲಖ್ನೋದಲ್ಲಿ ಬೇಗಂ ಹಜರತ್ ಮಹಲ್ ಇವರೆಲ್ಲ ಬ್ರಿಟಿಷರ ವಿರುದ್ಧ ನಿಂತಿದ್ದ ಹೊತ್ತಿನಲ್ಲಿಯೇ ಅದೇ ಬ್ರಿಟಿಷರ ವಿರುದ್ಧ ಎದೆ ಕೊಟ್ಟು ನಿಂತ​ ಇನ್ನೂ​ ​ಹಲವು ವೀರ​ರಿದ್ದರು. ಅವರಲ್ಲಿ ಅದೆಷ್ಟೋ ಮಂದಿಯ ಹೆಸರನ್ನೂ ಕೇಳಿಲ್ಲ ನಾವು, ಮತ್ತೆ ಎಷ್ಟೊ ಮಂದಿಯನ್ನು ಮರೆತೇಬಿಟ್ಟಿದ್ದೇವೆ. ಅಂಥವರಲ್ಲಿ ಒಬ್ಬ​ರು ಪೀರ್ ಅಲಿ ಖಾನ್.

ಸ್ವಾತಂತ್ರ್ಯ ಹರಣವಾಗಿದ್ದ ಹೊತ್ತಲ್ಲಿ, ಬ್ರಿಟಿಷರ ದಬ್ಬಾಳಿಕೆ ಮಿತಿ ಮೀರಿ​ದ್ದಾಗ ಅವರ ವಿರುದ್ಧ ನಿಲ್ಲುವ ಕೆಚ್ಚು ಹೇಗೆಲ್ಲ ಹುಟ್ಟಿತ್ತು ಎಂಬುದಕ್ಕೆ ನಿದರ್ಶನವಾಗಿ ಪೀರ್ ಅಲಿ ಖಾನ್ ಕಥೆ ನಮ್ಮ ಕಣ್ಣೆದುರು ಹಾಯುತ್ತದೆ. ಬಿಹಾರದ ಪಾಟ್ನಾದಲ್ಲಿ ಅವರದೊಂದು ಸಣ್ಣ ಪುಸ್ತಕದಂಗಡಿಯಿತ್ತು. ಆದರೆ ಯಾವಾಗ ಬ್ರಿಟಿಷರ ವಿರುದ್ಧ ಹೋರಾಡಬೇಕೆಂಬ ಕೆಚ್ಚು ಮೂಡಿತೊ ಆಗ ಆ ಸಣ್ಣ ಅಂಗಡಿಯೇ ಅವರ ಮತ್ತು ಸಂಗಡಿಗರ ಕ್ರಾಂತಿಗೆ ನೆಲೆಯೂ ಆಗಿಬಿಟ್ಟಿತ್ತು.

1855-59ರ ಅವಧಿಯಲ್ಲಿ ಪಾಟ್ನಾದ ​​ಕಮೀಷನರ್ ಆಗಿದ್ದ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ವಿಲಿಯಂ ಟೈಲರ್ ಹೇಳುವ ಪ್ರಕಾರ, ಈ ಅಲಿ ಪೀರ್ ಖಾನ್ ಪಾಟ್ನಾದಲ್ಲಿ ದಂಗೆಯೆದ್ದವರ ನಾಯಕನಾಗಿದ್ದರು. 

ಮೂಲತಃ ಉತ್ತರ ಪ್ರದೇಶದ ಲಖ್ನೋದವರು ಪೀರ್. 7 ವರ್ಷದವನಾಗಿದ್ದಾಗಲೇ ಮನೆಯಿಂದ ಓಡಿಬಂದಿದ್ದರು. ಪಾಟ್ನಾದಲ್ಲಿ ಜಮೀನ್ದಾರನೊಬ್ಬನ ಆಶ್ರಯ ಸಿಕ್ಕಿತ್ತು. ಆತನ ಮಗನ ಜೊತೆಗೇ ಇವರಿಗೂ ಓದಿನ ಅವಕಾಶ ಸಿಕ್ಕಿತ್ತು. ಅನಂತರ ಪುಸ್ತಕದಂಗಡಿಯ ಮಾಲೀಕನೂ ಆದರು. 

ಆದರೆ ಈ ಪುಟ್ಟ ಪುಸ್ತಕದಂಗಡಿಯ ಮಾಲಕನೊಳಗೊಬ್ಬ ಕ್ರಾಂತಿಕಾರಿ ಆಗಲೇ ಹುಟ್ಟಿಕೊಂಡಾಗಿತ್ತು. ಬ್ರಿಟಿಷರ ಆಟ ನೋಡಿಕೊಂಡು ಸುಮ್ಮನೆ ಕೂರುವುದು ಅವರಿಂದ ಸಾಧ್ಯವಿರಲಿಲ್ಲ. ತನ್ನದೇ ಪಡೆಯೊಂದನ್ನು ಕಟ್ಟುವ ನಿಶ್ಚಯ ಮಾಡಿಯಾಗಿತ್ತು. ಬ್ರಿಟಿಷರ ವಿರುದ್ಧ ನಿಯಮಿತವಾಗಿ ಅಭಿಯಾನವನ್ನು ಸಂಘಟಿಸತೊಡಗಿದ್ದರು ಪೀರ್. ಪಾಟ್ನಾದಲ್ಲಿ 1857ರ ಜುಲೈನಲ್ಲಿ ನಡೆದ ಹೋರಾಟಕ್ಕೆ ಅವರೇ ನಾಯಕನಾಗಿದ್ದರು. 

ಕ್ರಾಂತಿಕಾರಿಗಳಿಗೆ ಮಹತ್ವದ ಕರಪತ್ರ​ಗಳು , ನಿಗೂಢ ಸಂದೇಶಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದ ಅಲಿಯ ಬಗ್ಗೆ ಬ್ರಿಟಿಷರಿಗೆ ಮಾಹಿತಿ ಕೊಟ್ಟವನು ಇಲಾಹಿ ಬಕ್ಷ್ ಎಂಬ ಅಂಧ ವ್ಯಕ್ತಿ. ಅಲಿ ಶಸ್ತ್ರಗಳನ್ನೂ ​, ​ಜನರನ್ನೂ ಸೇರಿಸಿದ್ದಾನೆ ಎಂಬ ಗುಟ್ಟು ಬಕ್ಷ್ ಮೂಲಕ ಬ್ರಿಟಿಷರಿಗೆ ತಿಳಿಯುತ್ತದೆ. ಇದನ್ನು ವಿಲಿಯಂ ಟೈಲರ್ ದಾಖಲಿಸಿದ್ದಾನೆ. 

1857ರ ಜುಲೈ 3ರಂದು ಪಾಟ್ನಾದಲ್ಲಿ ದಂಗೆಯಾಗುತ್ತದೆ. ದಂಗೆಯೆದ್ದವರು ಪೀರ್ ಮತ್ತು ಅವರ ಇತರ ಸಂಗಡಿಗರಾಗಿದ್ದರು. ಅಂದು ರಾತ್ರಿ ಎಂಟರ ಹೊತ್ತಿಗೆಲ್ಲಾ ದಂಗೆ ಶುರುವಾಯಿತೆಂದು ಬರೆಯುವ ವಿಲಿಯಂ ಟೈಲರ್, ಸ್ಥಳಕ್ಕೆ ಬ್ರಿಟಿಷ್ ಸೇನೆ ಮುಟ್ಟಿ ದಾಳಿ ನಡೆಸಿದಾಗ ಕೆಲವು ದಂಗೆಕೋರರು ಸತ್ತರು ಮತ್ತೆ ಕೆಲವರು ಓಡಿಹೋದರು ಎಂದು ಉಲ್ಲೇಖಿಸಿದ್ದಾನೆ. ಈ ದಾಳಿಯ ನಂತರ ಪೀರ್ ಮನೆಯನ್ನು ಶೋಧಿಸಿದಾಗ ಸಿಕ್ಕ ಶಸ್ತ್ರಾಸ್ತ್ರಗಳು ಮತ್ತು ರಾಶಿ ರಾಶಿ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಯಿತು ಎನ್ನುವ ಟೈಲರ್, ಪೀರ್ ಅವರೇ ಈ ದಂಗೆಯ ನಾಯಕನೆಂದು ದಾಖಲಿಸುತ್ತಾನೆ. ದೇಶದ್ರೋಹದ ಆರೋಪವನ್ನು ಪೀರ್ ಮತ್ತಿತರರ ತಲೆಗೆ ಕಟ್ಟಲಾಗುತ್ತದೆ. ಅವರನ್ನೂ, ಸಂಗಡಿಗರನ್ನೂ 1857ರ ಜುಲೈ 4ರಂದು ಬಂಧಿಸಲಾಗುತ್ತದೆ. ಅವರಿಗೆಲ್ಲ ಮರಣದಂಡನೆ ವಿಧಿಸಲಾಗುತ್ತದೆ. ಶಿಕ್ಷೆ ಘೋಷಣೆಯಾದ ಕೆಲವೇ ತಾಸುಗಳಲ್ಲಿಯೇ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗುತ್ತದೆ. 1857ರ ಜುಲೈ 7ರಂದು ಪೀರ್ ಅಲಿ ಖಾನ್ ಮತ್ತಿತರ 14 ಮಂದಿ ​ ನೇಣಿಗೆ ಕೊರಳೊಡ್ಡಿ ವೀರಮರಣವನ್ನಪ್ಪುತ್ತಾರೆ. ಪೀರ್ ಅಲಿ ಖಾನ್ ಜೊತೆ ಗಲ್ಲಿಗೇರಿದವರಲ್ಲಿ ಘಸಿತಾ ಖಲೀಫಾ, ಗುಲಾಂ ಅಬ್ಬಾಸ್, ನಂದೂಲಾಲ್ ಅಲಿಯಾಸ್ ಸಿ​ಪಾಯಿ, ಜುಮ್ಮನ್, ಮದುವಾ, ಕಾಜಿಲ್ ಖಾನ್, ಪೀರ್ ಬಕ್ಷ್, ವಹಿದ್ ಅಲಿ, ಗುಲಾಂ ಅಲಿ, ಮಹ್ಮೂದ್ ಅಕ್ಬರ್, ಅ​ಸ್ರಾರ್ ಅಲಿ ಖಾನ್ ಸೇರಿದ್ದಾರೆ. 

ಗಲ್ಲು ಶಿಕ್ಷೆ ಘೋಷಣೆಯಾದ ಬಳಿಕ ಪೀರ್ ಅಲಿ ಖಾನ್ ರನ್ನು ಕೋಣೆಯೊಳಗೆ ಕರೆಸಿಕೊಂಡು ದಂಗೆಯ ವಿವರ ತಿಳಿಯುವ ಪ್ರಯತ್ನ ಮಾಡಿದುದಾಗಿಯೂ ಟೈಲರ್ ಬರೆದುಕೊಂಡಿದ್ದಾನೆ. ಆದರೆ ಗಟ್ಟಿ ಗುಂಡಿಗೆಯ ಪೀರ್ ಯಾವುದನ್ನೂ ಬಾಯ್ಬಿಡಲಿಲ್ಲ. ಮಾಹಿತಿ ನೀಡಿದರೆ ಕ್ಷಮಾದಾನ ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಬ್ರಿಟಿಷರು. ಆದರೆ ಅದನ್ನೂ ಅವರು ತಿರಸ್ಕರಿಸಿದ್ದರು. ಅವಮಾನದ ಬದುಕಿಗಿಂತ ಗಲ್ಲೇ ವಾಸಿಯೆಂದು ಅವರು ಪ್ರತ್ಯುತ್ತರ ಕೊಟ್ಟಿದ್ದರು ಒಡೆದು ಆಳುವ ಬುದ್ಧಿಯ ಬ್ರಿಟಿಷರಿಗೆ. 

ಬ್ರಿಟಿಷರ ಆಮಿಷಕ್ಕೆ ಅವರ ಉತ್ತರ ಅತ್ಯಂತ ಶಾಂತ ರೀತಿಯದ್ದೂ ಆದರೆ ತೀವ್ರ ತಿರಸ್ಕಾರದ್ದೂ ಆಗಿತ್ತು. ದೃಢ ಸ್ವರದಲ್ಲಿಯೇ ಅವರು ಹೇಳಿದ್ದರು. “ನೀವು ನನ್ನನ್ನು ಅಥವಾ ನನ್ನಂಥವರನ್ನು ಪ್ರತಿದಿನವೂ ಗಲ್ಲಿಗೇರಿಸಬಹುದು. ಆದರೆ ಅದೇ ಜಾಗದಲ್ಲಿಯೇ ಮತ್ತೆ ಸಾವಿರ ಮಂದಿ ಹುಟ್ಟಿ ಬರುತ್ತಾರೆ. ನಿಮ್ಮ ಉದ್ದೇಶವೆಂದಿಗೂ ಈಡೇರಲಾರದು.”

ಪೀರ್ ಆಡಿದ ಮಾತು​ ಅಂದು ​ಕಮೀಷನರ್ ಟೈಲ​ರ್ ನ ಗುಂಡಿಗೆಯನ್ನು ನಡುಗಿಸಿರಲೇಬೇಕು. 

ಸ್ವಾತಂತ್ರ್ಯದ ಕಿಚ್ಚುಹಚ್ಚಿದ ಅದೆಷ್ಟೋ​ ನಾವು​ ಮರೆತ ಮಹನೀಯರಲ್ಲಿ ಒಬ್ಬರಾದ ಪೀರ್ ಅಲಿ ಖಾನ್ ಹೆಸರನ್ನು​ ​ನಿತೀಶ್ ಕುಮಾರ್ ಆಡಳಿತದಲ್ಲಿ 2008ರಲ್ಲಿ​ ಪಾಟ್ನಾ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮಾರ್ಗಕ್ಕೆ ಇಡಲಾಯಿತು . ಪಾಟ್ನಾದ ಗಾಂಧಿ ಮೈದಾನ ಬಳಿಯ ಜಿಲ್ಲಾ ಮ್ಯಾಜಿಸ್ಟ್ರೇಟರ್ ನಿವಾಸದೆದುರಿನ ಉದ್ಯಾನಕ್ಕೂ ಪೀರ್ ಹೆಸರಿಟ್ಟಿದೆ ಬಿಹಾರ ಸರ್ಕಾರ. ಇಲ್ಲಿಯೇ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಎನ್ನಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅವರ ಬಲಿದಾನವನ್ನು ಹೀಗೆ ಸ್ಮರಿಸಲಾಗುತ್ತಿದೆ. 

ಇದು ಸಾಮಾನ್ಯ ಪುಸ್ತಕ ವ್ಯಾಪಾರಿಯೊಬ್ಬ,​ ಅಪ್ಪಟ ದೇಶಪ್ರೇಮ,​ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಕೆಚ್ಚಿನಿಂದಾಗಿ ಅಸಾಮಾನ್ಯ​ ಸ್ವಾತಂತ್ರ್ಯ ​ ​ಹೋರಾಟಗಾರನೂ, ಹುತಾತ್ಮನೂ ಆದ​,​​ ನಮ್ಮೆಲ್ಲರಿಗೆ ಸ್ಫೂರ್ತಿ ತುಂಬುವ ​​ ಕಥೆ. ​

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News