ನಾವು ಮರೆತ ಮಹನೀಯರು: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷರ ಗುಂಡಿಗೆ ಬಲಿಯಾದ ದಿಟ್ಟ ಮಹಿಳೆ ಮಾತಾಂಗಿನಿ ಹಾಝ್ರಾ

Update: 2022-08-15 08:38 GMT
ಮಾತಾಂಗಿನಿ ಹಾಝ್ರಾ (Photo credit: indiatimes)

ಸ್ವಾತಂತ್ರ್ಯ ಹೋರಾಟದಲ್ಲಿ ದಿಟ್ಟತನದಿಂದ ಹೋರಾಡಿದ್ದ ಹೆಣ್ಣುಮಕ್ಕಳೂ ದೊಡ್ಡ ಸಂಖ್ಯೆಯಲ್ಲಿದ್ದರು. ಅಂಥ ದಿಟ್ಟ ಮಹಿಳೆಯಾಗಿ ಹೋರಾಡಿ, ಈಗ ಮರೆವಿನ ಪುಟದಲ್ಲಿ ಸೇರಿಹೋಗಿರುವ ಒಬ್ಬರು ಮಾತಾಂಗಿನಿ ಹಾಝ್ರಾ

ಪೊಲೀಸರು ಗುಂಡಿಟ್ಟು ಕೊಲ್ಲುವವರೆಗೂ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ಸಾವನ್ನಪ್ಪಿದಾಗ ಆಕೆಯ ವಯಸ್ಸು 72 ವರ್ಷ. 

ಮಾತಾಂಗಿನಿ ಜನಿಸಿದ್ದು ಬ್ರಿಟಿಷ್ ಇಂಡಿಯಾದ ಬೆಂಗಾಲ್ ಪ್ರೆಸಿಡೆನ್ಸಿಯ ತಮ್ಲುಕ್ ಸಮೀಪದ ಹೋಗ್ಲಾ ಎಂಬ ಪುಟ್ಟ ಗ್ರಾಮದಲ್ಲಿ 1869ರಲ್ಲಿ. ಬಡ ರೈತ ಕುಟುಂಬದ ಆಕೆ ಶಾಲಾ ಶಿಕ್ಷಣವನ್ನೂ ಪಡೆಯಲಿಲ್ಲ. 12ನೇ ವಯಸ್ಸಿನಲ್ಲೇ ಮದುವೆಯೂ ಆಗಿಬಿಡುತ್ತದೆ. ಅದಾಗಿ ಆರೇ ವರ್ಷಕ್ಕೆ ವಿಧವೆಯೂ ಆಗಿಬಿಡುವ ಮಾತಾಂಗಿನಿಯದು ದುರಂತಮಯ ಬದುಕು.

ಗಾಂಧಿಯಿಂದ ಪ್ರಭಾವಿತೆಯಾಗಿದ್ದ ಆಕೆ ಸ್ವಾತಂತ್ರ್ಯ ಚಳವಳಿಯ ವಿಚಾರದಲ್ಲಿ ತೀವ್ರ  ಆಸಕ್ತಳಾಗಿರುತ್ತಾರೆ. ಮಿಡ್ನಾಪುರದಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಆಕೆ ಸಕ್ರಿಯರಾಗಿದ್ದರು. 1930ರಲ್ಲಿ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ, ಉಪ್ಪಿನ ಕಾಯ್ದೆ ಉಲ್ಲಂಘಿಸಿದ್ದಕ್ಕೆ ಬಂಧಿತಳಾಗುತ್ತಾರೆ. ಬಿಡುಗಡೆಯಾದರೂ ಚೌಕಿದಾರಿ ತೆರಿಗೆ ರದ್ದತಿ ಚಳವಳಿಯಲ್ಲಿ ಭಾಗವಹಿಸುತ್ತಾರೆ. ಈ ಆಂದೋಲನದಲ್ಲಿ ಭಾಗವಹಿಸಿದವರನ್ನು ಶಿಕ್ಷಿಸಬೇಕೆಂಬ ಗವರ್ನರ್ ಆದೇಶದ ವಿರುದ್ಧ ಧಿಕ್ಕಾರ ಕೂಗುತ್ತಾ ಕೋರ್ಟ್ ಕಟ್ಟಡದ ಕಡೆಗೆ ಮೆರವಣಿಗೆ ಹೊರಟಿದ್ದಾಗ  ಮಾತಾಂಗಿನಿಯನ್ನು ಮತ್ತೆ ಬಂಧಿಸಲಾಗುತ್ತದೆ. ಬಹರಂಪುರ ಜೈಲಿನಲ್ಲಿ ಆರು ತಿಂಗಳು ಕಳೆಯಬೇಕಾಗುತ್ತದೆ. ಬಿಡುಗಡೆ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಕ್ರಿಯ ಸದಸ್ಯೆಯಾಗಿ ತನ್ನ ಖಾದಿಯನ್ನು ತಾನೇ ನೂಲುವ ಕೆಲಸದಲ್ಲಿ ತೊಡಗುತ್ತಾರೆ. 1933ರಲ್ಲಿ ಸೆರಾಂಪೋರ್‌ನಲ್ಲಿ ನಡೆದ ಉಪವಿಭಾಗೀಯ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಗಾಯಗೊಳ್ಳುತ್ತಾರೆ. 

ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ, ಕಾಂಗ್ರೆಸ್ ಸದಸ್ಯರು ಮೇದಿನಿಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ಮತ್ತು ಇತರ ಸರ್ಕಾರಿ ಕಚೇರಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದ್ದ ಸಂದರ್ಭ. ಜಿಲ್ಲೆಯಲ್ಲಿ ಬ್ರಿಟಿಷ್ ಸರ್ಕಾರವನ್ನು ಉರುಳಿಸಿ ಸ್ವತಂತ್ರ ಭಾರತ ರಾಜ್ಯವನ್ನು ಸ್ಥಾಪಿಸುವ ಒಂದು ಹೆಜ್ಜೆಯಾಗಿತ್ತು ಅದು. ಆಗ 72 ವರ್ಷ ವಯಸ್ಸಿನ  ಮಾತಾಂಗಿನಿ ಅವರು ಹೆಚ್ಚಾಗಿ ಮಹಿಳಾ ಸ್ವಯಂಸೇವಕರೇ ಇದ್ದ ಆರು ಸಾವಿರ ಬೆಂಬಲಿಗರೊಡನೆ ತಮ್ಲುಕ್ ಪೊಲೀಸ್ ಠಾಣೆಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಮೆರವಣಿಗೆಯಲ್ಲಿ ಹೊರಟಿರುತ್ತಾರೆ.

ಮೆರವಣಿಗೆಯು ಪಟ್ಟಣದ ಹೊರವಲಯವನ್ನು ತಲುಪಿದಾಗ, ಮೆರವಣಿಗೆ ಸ್ಥಗಿತಗೊಳಿಸುವಂತೆ ಪೊಲೀಸರು ಆದೇಶಿಸುತ್ತಾರೆ. ಅದನ್ನು ಮೀರಿ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ  ಮಾತಾಂಗಿನಿ ಮೇಲೆ ಮೊದಲ ಗುಂಡಿನ ದಾಳಿಯಾಗುತ್ತದೆ. ಆದರೆ ಪೊಲೀಸರು ಆದೇಶಿಸಿದ್ದಾಗ ಆಕೆ ಮುಂದೆ ಹೆಜ್ಜೆಯಿಟ್ಟದ್ದು ಗುಂಪಿನ ಮೇಲೆ ಗುಂಡು ಹಾರಿಸದಂತೆ ಪೊಲೀಸರಿಗೆ ಮನವಿ ಮಾಡವುದಕ್ಕಾಗಿತ್ತು. ಪೊಲೀಸರಿಗೆ ಅದೇ ಒಂದು ನೆಪವಾಗುತ್ತದೆ ಆಕೆಯ ಮೇಲೆ ಗುಂಡು ಹಾರಿಸುವುದಕ್ಕೆ. 

ಗುಂಡಿನ ದಾಳಿ ಪ್ರಾರಂಭವಾದ ನಂತರವೂ,  ಮಾತಾಂಗಿನಿ ಎಲ್ಲಾ ಸ್ವಯಂಸೇವಕರನ್ನು ಬಿಟ್ಟು ತ್ರಿವರ್ಣ ಧ್ವಜದೊಂದಿಗೆ ಮುನ್ನಡೆಯುತ್ತಾರೆ. ಪೊಲೀಸರು ಮತ್ತೆರಡು ಬಾರಿ ಗುಂಡು ಹಾರಿಸುತ್ತಾರೆ. ಹಣೆ ಮತ್ತು ಎರಡೂ ಕೈಗಳಿಗೆ ಗುಂಡು ತಗುಲಿ ಗಾಯಗಳಾದರೂ ಮೆರವಣಿಗೆಯನ್ನು ಆಕೆ ಮುಂದುವರೆಸುತ್ತಾರೆ.

ಪದೇ ಪದೇ ಗುಂಡು ಹಾರಿಸಿದಾಗ,"ವಂದೇ ಮಾತರಂ ಎಂದು ಹೇಳುತ್ತಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಧ್ವಜವನ್ನು ಎತ್ತರದಲ್ಲಿ ಹಿಡಿದಿಟ್ಟುಕೊಂಡು ನೆಲಕ್ಕುರುಳುತ್ತಾರೆ  ಮಾತಾಂಗಿನಿ.  ಹೀಗೆ 1942ರ ಸೆಪ್ಟೆಂಬರ್ 29ರಂದು ಈ ದಿಟ್ಟ ಹೋರಾಗಾರ್ತಿಯ ಬಲಿದಾನವಾಗುತ್ತದೆ. 

ದೇಶಕ್ಕಾಗಿ ಮಾತಾಂಗಿನಿ ಬಲಿದಾನಗೈದ ಸಂಗತಿಯು ಪರ್ಯಾಯ ತಮ್ಲುಕ್ ಸರ್ಕಾರವು ಬ್ರಿಟಿಷರ ವಿರುದ್ಧ ಬಹಿರಂಗ ದಂಗೆಯನ್ನು ಮುಂದುವರಿಸುವುದಕ್ಕೆ ಪ್ರೇರೇಪಿಸುತ್ತದೆ. ಮುಂದೆ 1944ರಲ್ಲಿ ಗಾಂಧಿ ಮನವಿ ಮಾಡುವಲ್ಲಿಯವರೆಗೂ ಈ  ದಂಗೆ ಮುಂದುವರೆಯುತ್ತದೆ. 

ಭಾರತವು 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ಕೋಲ್ಕತ್ತಾದ ಹಾಝ್ರಾ ರಸ್ತೆಯ ಉದ್ದದ ಪ್ರದೇಶವೂ ಸೇರಿದಂತೆ ಹಲವಾರು ಶಾಲೆಗಳು, ಕಾಲೊನಿಗಳು ಮತ್ತು ಬೀದಿಗಳಿಗೆ  ಮಾತಾಂಗಿನಿ ಹಾಝ್ರಾ ಹೆಸರನ್ನು ಇಡಲಾಯಿತು. ಕೋಲ್ಕತ್ತಾದಲ್ಲಿ ಮಾತಾಂಗಿನಿ ಪ್ರತಿಮೆಯನ್ನು 1977ರಲ್ಲಿ ಇಡಲಾಯಿತು. ಅದು ಸ್ವತಂತ್ರ ಭಾರತದಲ್ಲಿ ಸ್ಥಾಪಿಸಲಾದ ಮಹಿಳೆಯ ಮೊದಲ ಪ್ರತಿಮೆ. ತಮ್ಲುಕ್‌ನಲ್ಲಿ ಆಕೆಯನ್ನು ಕೊಂದ ಸ್ಥಳದಲ್ಲಿ ಈಗ ಪ್ರತಿಮೆಯಿದೆ. 2002 ರಲ್ಲಿ, ಕ್ವಿಟ್ ಇಂಡಿಯಾ ಚಳುವಳಿಯ ಅರವತ್ತು ವರ್ಷಗಳ ಸ್ಮರಣಾರ್ಥ ಅಂಚೆ ಚೀಟಿಗಳ ಸರಣಿಯ ಭಾಗವಾಗಿ ಮತ್ತು ತಮ್ಲುಕ್ ರಾಷ್ಟ್ರೀಯ ಸರ್ಕಾರದ ರಚನೆಯ ಭಾಗವಾಗಿ, ಭಾರತದ ಅಂಚೆ ಇಲಾಖೆಯು ಮಾತಾಂಗಿನಿ ಹಾಝ್ರಾ ಅವರ ಭಾವಚಿತ್ರದೊಂದಿಗೆ ಐದು ರೂಪಾಯಿಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. 2015ರಲ್ಲಿ, ಶಹೀದ್ ಮಾತಾಂಗಿನಿ ಹಾಝ್ರಾ ಸರ್ಕಾರಿ ಮಹಿಳಾ ಕಾಲೇಜನ್ನು ತಮ್ಲುಕ್, ಪುರ್ಬಾ ಮೇದಿನಿಪುರದಲ್ಲಿ ಸ್ಥಾಪಿಸಲಾಯಿತು. 

ಧೀರ ಕ್ರಾಂತಿಕಾರಿ ಮಹಿಳೆ  ಮಾತಾಂಗಿನಿ ಹಾಝ್ರಾ ಹೀಗೆ ಭಾರತದ  ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News